ಕರ್ನಾಟಕ

ಭೂ ಸಮಾಧಿಯಾದ ಇಬ್ಬರು ಕಾರ್ಮಿಕರು: ಮರಳು ದಂಧೆಗೆ ಬಲಿ?

ಚಾಮರಾಜನಗರ (ಆ.25): ಭೂಮಿಯಿಂದ ಮರಳು ತೆಗೆದು ಸಂಗ್ರಹಿಸಿಡುವ ಕೆಲಸದಲ್ಲಿ ನಿರತರಾಗಿದ್ದ ವೇಳೆ ಮಣ್ಣು ಕುಸಿದುಬಿದ್ದ ಪರಿಣಾಮ ಕಾರ್ಮಿಕರಿಬ್ಬರು ಭೂಸಮಾಧಿಯಾದ ಘಟನೆ ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಹೋಬಳಿಯ ಕೆಂಪನಪುರ ಗ್ರಾಮದಲ್ಲಿ ನಡೆದಿದೆ.

ಸುರಂಗ ಕೊರೆದು ಅದರೊಳಗಿನಿಂದ ಮರಳು ತೆಗೆಯುವ ಕೆಲಸ ಮಾಡುತ್ತಿದ್ದ ವೇಳೆ ಅವರ ಅರಿವಿಗೆ ಬರದಂತೆ ಮಣ್ಣು ಕುಸಿದಿದೆ. ಇದರಿಂದ ಮಣ್ಣಿನಡಿಗೆ ಸಿಲುಕಿದ ಇಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಕೆಂಪನಪುರ ಗ್ರಾಮದ ನಿವಾಸಿಗಳಾದ ನಾಗರಾಜು(25) ಮತ್ತು ಸಿದ್ದೇಶ್ (20) ಮಣ್ಣು ಕುಸಿದ ಪರಿಣಾಮ ದುರಂತ ಸಾವನ್ನಪ್ಪಿದವರು. ಇವರು ಗ್ರಾಮದ ರಮೇಶ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ಮಣ್ಣನ್ನು ಬಗೆದು ಮರಳನ್ನು ತೆಗೆದು ಅದನ್ನು ಸಂಗ್ರಹಿಸಿಡುವ ಕಾರ್ಯದಲ್ಲಿ ನಿರತರಾಗಿದ್ದರು ಎನ್ನಲಾಗಿದೆ.

ಈ ಬಗ್ಗೆ ಸಂತೆಮರಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಪೊಲೀಸರು ಸ್ಥಳಕ್ಕೆ ಬಂದಿದ್ದು ಮಣ್ಣಿನಡಿಯಲ್ಲಿ ಸಿಲುಕಿದ್ದ ಇಬ್ಬರ ಮೃತದೇಹವನ್ನು ಹೊರ ತೆಗೆದಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಶವಗಳನ್ನು ವಾರಸುದಾರರಿಗೆ ನೀಡಿದ್ದಾರೆ. ಈ ಸಂಬಂಧ ಸಂತೆಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮರಳಿಗೆ ಬೇಡಿಕೆಯಿರುವ ಕಾರಣ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ಕೆಲವರು ತಮ್ಮ ಜಮೀನಿನಿಂದಲೇ ಮರಳನ್ನು ತೆಗೆದು ಮಾರಾಟ ಮಾಡುವ ಕೆಲಸದಲ್ಲಿ ನಿರತರಾಗಿದ್ದು, ಕೂಲಿಯ ಆಸೆಯಿಂದ ತೆರಳುವ ಕಾರ್ಮಿಕರು ತಮ್ಮ ಜೀವವನ್ನೇ ಒತ್ತೆಯಿಟ್ಟು ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಇಂತಹ ದಂಧೆಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂಬುದು ದೂರುದಾರರ ಒತ್ತಾಯವಾಗಿದೆ. (ಎನ್.ಬಿ)

Leave a Reply

comments

Related Articles

error: