ಪ್ರಮುಖ ಸುದ್ದಿ

ದೌರ್ಜನ್ಯದಿಂದ ರಕ್ತ ಹರಿಸುವುದು ಅನಾಗರೀಕತನ, ರಕ್ತ ದಾನ ಮಾಡುವುದು ನಿಜವಾದ ಮಾನವೀಯತೆ : ಡಾ.ಶಿವಮೂರ್ತಿ ಶರಣರು

ರಾಜ್ಯ(ಚಿತ್ರದುರ್ಗ)ಆ.25:- ಭಯೋತ್ಪಾದನೆ, ಹಿಂಸೆ, ಅಮಾನವೀಯತೆ ಹೆಸರಿನಲ್ಲಿ ರಕ್ತವನ್ನು ಕೋಡಿ ಹರಿಸುವ ಬದಲು ದೇಹದಲ್ಲಿ ಹರಿಯುತ್ತಿರುವ ರಕ್ತವನ್ನು ಸಾವು-ಬದುಕಿನ ನಡುವೆ ಹೋರಾಟ ಮಾಡುವವರಿಗೆ ದಾನವಾಗಿ ನೀಡುವುದು ನಿಜವಾದ ಮಾನವೀಯತೆ ಎಂದು ಮುರುಘಾಮಠದ ಡಾ.ಶಿವಮೂರ್ತಿ ಶರಣರು ಹೇಳಿದರು.

ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ಹಾಗೂ ಭಾರತೀಯ ರೆಡ್‍ಕ್ರಾಸ್ ಸೊಸೈಟಿ ಇವರುಗಳ ಸಂಯುಕ್ತಾಶ್ರಯದಲ್ಲಿ ಡಾನ್‍ಬೋಸ್ಕೋ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಒಂದಾನೊಂದು ಕಾಲದಲ್ಲಿ ಅನೇಕ ಬಗೆಯ ದಾನ ಮಾಡುವ ಸಂಸ್ಕೃತಿ ಇತ್ತು. ವರ್ಷ ಶತಮಾನಗಳು ಕಳೆದಂತೆ ಮಾನವರಲ್ಲಿ ಕೊರತೆಯುಂಟಾಗಿರುವುದರಿಂದ ಪ್ರಾಚೀನ ದಾನಗಳ ಜೊತೆ ಸರ್ವಶ್ರೇಷ್ಠ ರಕ್ತದಾನ ಜಯಪ್ರಿಯತೆ ಪಡೆದುಕೊಂಡಿದೆ. ನೀರು, ಪೆಟ್ರೋಲ್, ಡೀಸೆಲ್ ಹೀಗೆ ಯಾವ ವಸ್ತುವನ್ನಾದರೂ ದುಡ್ಡು ಕೊಟ್ಟು ಕೊಂಡುಕೊಳ್ಳಬಹುದು. ಆದರೆ ರಕ್ತವನ್ನು ಮಾತ್ರ ಕೊಂಡುಕೊಳ್ಳಲು ಆಗುವುದಿಲ್ಲ. ಸ್ವಯಂ ಪ್ರೇರಿತವಾಗಿ ಪ್ರತಿಯೊಬ್ಬರು ರಕ್ತದಾನಕ್ಕೆ ಮುಂದಾಗಿ ಅಮೂಲ್ಯವಾದ ಜೀವ ಉಳಿಸಬೇಕಾಗಿದೆ ಎಂದು ತಿಳಿಸಿದರು.

ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ರಕ್ತ ಅತ್ಯವಶ್ಯಕವಾಗಿ ಬೇಕು. ದ್ವೇಷ, ಜನಾಂಗೀಯ ಘರ್ಷಣೆಯಿಂದ ರಕ್ತಹರಿದರೆ ಯಾವ ಪ್ರಯೋಜನವಿಲ್ಲ. ಅದಕ್ಕೆ ಬದಲಾಗಿ ದೇಹದಲ್ಲಿ ಹರಿಯುತ್ತಿರುವ ರಕ್ತವನ್ನು ಅವಶ್ಯಕತೆಯಿರುವವರಿಗೆ ನೀಡಿದರೆ ಅದಕ್ಕಿಂತ ಸರ್ವಶ್ರೇಷ್ಠವಾದ ದಾನ ಮತ್ತೊಂದಿಲ್ಲ. ದೌರ್ಜನ್ಯದಿಂದ ರಕ್ತ ಹರಿಸುವುದು ಅನಾಗರೀಕತನ. ಹಾಗಾಗಿ ಜೀವದ ಬೆಲೆಯನ್ನು ಎಲ್ಲರೂ ಅರ್ಥಮಾಡಿಕೊಂಡು ತುರ್ತು ಸಂದರ್ಭಗಳಲ್ಲಿ ರಕ್ತದಾನ ಮಾಡಿ. ರಕ್ತದಾನ ಮಾಡುವುದರಿಂದ ದೇಹದಲ್ಲಿ ಶಕ್ತಿ ಕಡಿಮೆಯಾಗುತ್ತದೆಂಬ ತಪ್ಪು ಕಲ್ಪನೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಡಿ ಎಂದು ಶರಣರು ನುಡಿದರು.

ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಡಾ.ರಂಗನಾಥ್ ಮಾತನಾಡಿ ಒಂದು ಬಾಟಲ್ ರಕ್ತದಿಂದ ನಾಲ್ವರ ಪ್ರಾಣ ಉಳಿಸಬಹುದು. ಅದಕ್ಕಾಗಿ ಸ್ವಯಂಪ್ರೇರಿತವಾಗಿ ಎಲ್ಲರೂ ರಕ್ತದಾನ ಮಾಡುವಂತೆ ಮನವಿ ಮಾಡಿದರು.

ಕೃತಕವಾಗಿ ರಕ್ತವನ್ನು ತಯಾರಿಸಲು ಆಗುವುದಿಲ್ಲ. ಹಲವಾರು ಸಂಶೋಧನೆಗಳನ್ನು ನಡೆಸಲಾಗುತ್ತಿದೆ. ಆದರೂ ಕಂಡುಹಿಡಿಯುವುದು ಕಷ್ಟ. ಜನಸಂಖ್ಯೆಗನುಗುಣವಾಗಿ ವರ್ಷಕ್ಕೆ ಶೇ.1 ರಷ್ಟು ರಕ್ತದ ಅವಶ್ಯಕತೆಯಿದೆ. ನೆಗೆಟಿವ್ ಗ್ರೂಪ್ ರಕ್ತ ಸಿಗುವುದು ತುಂಬಾ ಅಪರೂಪ. ಆದ್ದರಿಂದ ಆ ಗುಂಪಿನ ರಕ್ತವನ್ನು ಸಂಗ್ರಹಿಸಿಟ್ಟುಕೊಂಡು ವೇಸ್ಟ್ ಮಾಡುವ ಬದಲು ತುರ್ತು ಸಂದರ್ಭಗಳಲ್ಲಿ ಗುರುತಿಸಿ ನೆಗೆಟಿವ್ ಗುಂಪಿನ ರಕ್ತವನ್ನು ಪಡೆದುಕೊಳ್ಳುವುದು ಮುಖ್ಯ ಎಂದು ಹೇಳಿದರು.

ರಕ್ತದಾನ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ದೂರವಾಗಿ ದೇಹದಲ್ಲಿ ಹೊಸ ಜೀವ ಕಣಗಳು ಉತ್ಪತ್ತಿಯಾಗಿ ಕೊಬ್ಬು ಕಡಿಮೆಯಾಗುತ್ತದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಶೇ. 12 ಗ್ರಾಂನಷ್ಟು ಇರುವವರು ರಕ್ತದಾನ ಮಾಡಬಹುದು. ಹದಿನೆಂಟರಿಂದ 60 ವರ್ಷದವರು ರಕ್ತದಾನಕ್ಕೆ ಅರ್ಹರು ಎಂದು ತಿಳಿಸಿದರು.

ಸಮಾರಂಭದಲ್ಲಿ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಜಯಪ್ರಕಾಶ್, ಉಪನ್ಯಾಸಕ ನಾಗರಾಜ್, ನರೇನಹಳ್ಳಿ ಅರುಣ್‍ಕುಮಾರ್, ಫಾದರ್ ವರ್ಗಿಸ್ ಪಲ್ಲಿಪುರಂ, ಪ್ರಧಾನ ಕಾರ್ಯದರ್ಶಿ ಎಂ.ಎಸ್.ರಾಜು, ಫಾದರ್ ಸತೀಶ್ ಮತ್ತಿತರರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: