ಪ್ರಮುಖ ಸುದ್ದಿ

ಎರಡು ವಿವಾಹವಾಗಿ ಮೂರನೇ ಮದುವೆಗೆ ಸಿದ್ಧನಾದ ವರನಿಗೆ ಪೊಲೀಸರ ಆತಿಥ್ಯ

ರಾಜ್ಯ(ಮಂಗಳೂರು)ಆ.25:- ಈಗಾಗಲೇ ಎರಡು ಮದುವೆಯಾಗಿ ಮಗುವನ್ನು ಹೊಂದಿರುವ ವ್ಯಕ್ತಿಯೊಬ್ಬ ಇಬ್ಬರು ಪತ್ನಿಯರಿಗೆ ಕೈಕೊಟ್ಟು ಮೂರನೇ ಮದುವೆಗೆ ಸಿದ್ಧತೆ ನಡೆಸಿದ್ದು, ಶುಭಮುಹೂರ್ತದಲ್ಲಿ ಹಸೆಮಣೆಯೇರಬೇಕು ಅನ್ನುವಷ್ಟರಲ್ಲಿ ಪೊಲೀಸರ ಅತಿಥಿಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ನಗರದ ಹೊರವಲಯದ ಜಪ್ಪಿನಮೊಗರು ಕರಂಬೆಟ್ಟು ನಿವಾಸಿ ಅಶೋಕ್ ಎಲ್ ಸುವರ್ಣ(40) ಬಂಧಿತ ಆರೋಪಿ.ಈತ ಈ ಹಿಂದೆಯೇ ಎರಡು ಮದುವೆಯಾಗಿದ್ದ. ಅದನ್ನು ಮುಚ್ಚಿಟ್ಟು ಮೂರನೇ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದ. ಆ.11ರಂದು ಮದುವೆ ಬಗ್ಗೆ ಮಾತನಾಡಲು ಅಶೋಕನ ಸಹೋದರಿಯವರಾದ ಕುಮುದಾ ಮತ್ತು ವೀಣಾ ಮೂಲ್ಕಿಯ ಯುವತಿಯ ಮನೆಗೆ ತೆರಳಿದ್ದರು. ಆಕೆಯ ತಾಯಿಯ ಜತೆ ಮಾತುಕತೆ ನಡೆಸಿದ್ದರು. ಯುವಕ ನೋಡಲು ಸ್ಫುರದ್ರೂಪಿಯಾಗಿದ್ದ ಕಾರಣ ಮದುವೆಗೆ ಯುವತಿಯ ಕಡೆಯವರು ಒಪ್ಪಿಗೆಯನ್ನೂ ಸೂಚಿಸಿದ್ದರು. ಅಶೋಕನ ಸಂಬಂಧಿಕರು ನಾಳೆ(ಆ.26) ಮದುವೆಗೆ ದಿನ ನಿಗದಿ ಮಾಡಿದ್ದು ಅದರಂತೆ ನಿನ್ನೆ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಇರಿಸಿಕೊಂಡಿದ್ದರು. ಈ ಮಧ್ಯೆ ಅಶೋಕ ಮತ್ತು ಆತನ ಸೋದರಿಯರು, ಸಂಬಂಧಿಕರು ಮದುವೆಗೆ ವಿಪರೀತ ಅವಸರ ಪಡಿಸುತ್ತಿರುವುದು ಯುವತಿಯ ಮನೆಯವರ ಸಂದೇಹಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಹುಡುಗನ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಆತನಿಗೆ ಈ ಹಿಂದೆಯೇ ಎರಡು ಮದುವೆಯಾಗಿದ್ದಲ್ಲದೆ ಮಗುವನ್ನೂ ಹೊಂದಿರುವ ವಿಷಯ ತಿಳಿದು ಬಂದಿದೆ.

ಅಶೋಕನ ಇಬ್ಬರು ಹೆಂಡತಿಯರು ಕೂಡಾ ಆತನ ಕಿರುಕುಳದಿಂದ ದೂರವಾಗಿದ್ದು ಆತನ ಜತೆಯಿಲ್ಲ ಎಂದು ತಿಳಿದುಬಂದಿದೆ. ಯುವತಿ ಕಡೆಯವರು ಈ ಬಗ್ಗೆ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಸತ್ಯಾಂಶವನ್ನು ಮುಚ್ಚಿಟ್ಟು ಮದುವೆಗೆ ಸಹಕರಿಸಿದ ಆರೋಪಿಯ ಸಹೋದರಿಯರಾದ ಕುಮುದಾ ಮತ್ತು ವೀಣಾ ಮೇಲೂ ಪ್ರಕರಣ ದಾಖಲಾಗಿದೆ. ಈ ಕುರಿತು ಕಂಕನಾಡಿ ನಗರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: