ಮೈಸೂರು

ರೋಟರಿ ಮೈಸೂರು ಉತ್ತರದಿಂದ ‘ಮಹಿಳಾ ಸಬಲೀಕರಣ’ ಸಮಾವೇಶ: ಡಿ.25ರಂದು

ರೋಟರಿ ಮೈಸೂರು ಉತ್ತರ ಹಾಗೂ ಇನ್ನರ್‍ ವೀಲ್ ಕ್ಲಬ್‍ ವತಿಯಿಂದ ಡಿ.25ರಂದು ಭಾನುವಾರ ‘ಮಹಿಳಾ ಸಬಲೀಕರಣ ಸಮಾವೇಶ’ವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಮಹಿಳಾ ಸಬಲೀಕರಣ ಜಿಲ್ಲಾಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ ತಿಳಿಸಿದರು.

ಅವರು, ಗುರುವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾನಸಗಂಗೋತ್ರಿಯ ರಾಣಿ ಬಹದ್ದೂರು ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ಸಮಾವೇಶ ಹಮ್ಮಿಕೊಂಡಿದ್ದು ಮಾಜಿ ಸಚಿವ ರಾಣಿ ಸತೀಶ್ ಉದ್ಘಾಟಿಸುವರು. ಅಂತಾರಾಷ್ಟ್ರೀಯ ಹೋರಾಟಗಾರ್ತಿ ಕೆ.ಎಸ್.ನಂದಿನಿ ಜಯರಾಂ ಆಶಯ ಭಾಷಣ ಮಾಡುವರು. ಅಂತಾರಾಷ್ಟ್ರೀಯ ರೋಟರಿ 3181 ಗವರ್ನರ್ ಡಾ.ಆರ್.ಎಸ್.ನಾಗಾರ್ಜುನ್ ಅಧ್ಯಕ್ಷತೆ ವಹಿಸುವರು. ಗೌರವಾತಿಥಿಗಳಾಗಿ ಜಿಲ್ಲಾ ಗವರ್ನರ್ ಜಿ.ಕೆ.ಬಾಲಕೃಷ್ಣ, ಸಹಾಯಕ ಗವರ್ನರ್ ಯಶಸ್ವಿ ಸೋಮಶೇಖರ್ ಭಾಗವಹಿಸುವರು.

ವಿಚಾರ ಗೋಷ್ಠಿ: ಮಧ್ಯಾಹ್ನ 12 ರಿಂದ ನಡೆಯುವ ವಿಚಾರಗೋಷ್ಠಿಯಲ್ಲಿ ‘ರಾಜಕೀಯದಲ್ಲಿ ಮಹಿಳೆ’ ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಹಾಗೂ ಬೆಂಗಳೂರು ಆಕಾಶವಾಣಿ ಕಾರ್ಯನಿರ್ವಾಹಕಿ ಸುಮಂಗಲ ಮುಮ್ಮಿಗಟ್ಟಿ ‘ಉದ್ಯೋಗದಲ್ಲಿ ಮಹಿಳೆ’ ವಿಷಯವಾಗಿ ವಿಚಾರ ಮಂಡಿಸುವರು. ನಂತರ ಶುಭ ರಾಘವೇಂದ್ರರಿಂದ ಸುಗಮ ಸಂಗೀತವಿರುವುದು. ನಂತರ ಮಧ್ಯಾಹ್ನ 3ಕ್ಕೆ ಕರ್ನಾಟಕ ಮುಕ್ತ ವಿವಿಯ ಪ್ರಾಧ್ಯಾಪಕಿ ಡಾ.ಜ್ಯೋತಿಶಂಕರ್ ‘ಸಂಸ್ಕೃತಿಯಲ್ಲಿ ಮಹಿಳೆ’, ಮೈಸೂರು ವಿವಿಯ ವಿಶ್ರಾಂತ ಪ್ರಾಧ್ಯಾಪಕಿ ಡಾ.ಆರ್.ಇಂದಿರಾ ರೋಟರಿಯಲ್ಲಿ ಮಹಿಳೆ ವಿಷಯವಾಗಿ ಮಾತನಾಡುವರು ಎಂದು ತಿಳಿಸಿದರು.

ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಮಾಜಿ ಜಿಲ್ಲಾ ಗವರ್ನರ್ 3190 ಮಧುರ ಛತ್ರಪತಿ ವಹಿಸುವರು. ಡಾ.ಎಂ.ಎಸ್.ಆಶಾದೇವಿ ಸಮಾರೋಪ ನುಡಿ, ಹಾಗೂ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್ ಗೌರವ ಅತಿಥಿಗಳಾಗಿ ಪಾಲ್ಗೊಳ್ಳುವರು.

ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಅದ್ವೀತಿಯ ಸೇವೆ ಸಲ್ಲಿಸಿದ ಸಾಧಕರಾದ ಮಾಜಿ ಸಚಿವೆ ಡಾ.ಲೀಲಾದೇವಿ ಆರ್.ಪ್ರಸಾದ್, ಖ್ಯಾತ ನೃತ್ಯ ಕಲಾವಿದೆ ಡಾ.ವಸುಂಧರಾ ದೊರೆಸ್ವಾಮಿ ಹಾಗೂ ಯಶಸ್ವಿ ಕೈಗಾರಿಕೋದ್ಯಮಿ ಛಾಯಾ ನಂಜಪ್ಪ ಇವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪರಮೇಶ್ವರಪ್ಪ, ವಿಜಯ ಚಿನ್ನಸ್ವಾಮಿ, ಯಶಸ್ವಿ ಸೋಮಶೇಖರ್, ರೋಟರಿ ಮೈಸೂರು ಉತ್ತರ ಅಧ್ಯಕ್ಷ ಮಹದೇವ ಉಪಸ್ಥಿತರಿದ್ದರು.

Leave a Reply

comments

Related Articles

error: