ಪ್ರಮುಖ ಸುದ್ದಿ

ಜಿಲ್ಲಾಧಿಕಾರಿಗಳ  ಆತ್ಮಸ್ಥೈರ್ಯ  ಕುಗ್ಗಿಸಬೇಡಿ  :  ಜೆಡಿಎಸ್ ಪರಿಶಿಷ್ಟ ಘಟಕ ಮನವಿ

ರಾಜ್ಯ(ಮಡಿಕೇರಿ )ಆ.25 :- ಧಾರಾಕಾರ ಗಾಳಿ ಮಳೆಯಿಂದಾಗಿ ಕೊಡಗು ಜಿಲ್ಲೆ ತಲ್ಲಣಗೊಂಡಿದ್ದು, ಸಾವು, ನೋವುಗಳೊಂದಿಗೆ ನಾಲ್ಕು ಸಾವಿರಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ. ಕೆಲವು ಗ್ರಾಮಗಳೇ ನಾಪತ್ತೆಯಾಗಿದ್ದು, ಈ ರೀತಿಯ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು 18 ಗಂಟೆಗಳಿಗೂ ಹೆಚ್ಚು ಕಾಲ ಜಿಲ್ಲೆಯ ಸಂತ್ರಸ್ತರ ಪರವಾಗಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಕೆಲವು ರಾಜಕಾರಣಿಗಳು ಜಿಲ್ಲಾಧಿಕಾರಿಗಳನ್ನು ಟೀಕಿಸುವ ಮೂಲಕ ದಕ್ಷ ಅಧಿಕಾರಿಯ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಜಾತ್ಯತೀತ ಜನತಾದಳದ ಪರಿಶಿಷ್ಟ ವಿಭಾಗದ ರಾಜ್ಯ ಕಾರ್ಯದರ್ಶಿ ಹೆಚ್.ಎನ್.ಯೋಗೇಶ್ ಕುಮಾರ್ ಆರೋಪಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಜಿಲ್ಲೆಯ ಪರಿಸ್ಥಿತಿಯನ್ನು ನಿಭಾಯಿಸಲು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರಿಗೆ ಮುಖ್ಯಮಂತ್ರಿಗಳು ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದಾರೆ. ಆದರೆ ಕೆಲವರು ಸಣ್ಣಪುಟ್ಟ ನ್ಯೂನತೆಗಳನ್ನು ಕೂಡ ದೊಡ್ಡದು ಮಾಡಿ, ಮಹಿಳಾ ಅಧಿಕಾರಿ ಎನ್ನುವ ಅನುಕಂಪವೂ ತೋರದೆ ನಿರಂತರವಾಗಿ ಟೀಕಿಸುವ ಮೂಲಕ ಪ್ರಾಮಾಣಿಕ ಅಧಿಕಾರಿಯ ಉತ್ಸಾಹವನ್ನು ಕುಗ್ಗಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ಕೆಲವು ಅಧಿಕಾರಿಗಳು ಈ ರೀತಿಯ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಜಿಲ್ಲಾಧಿಕಾರಿಗಳಿಗೆ ಅಸಹಕಾರ ನೀಡುತ್ತಿದ್ದಾರೆ ಮತ್ತು ಜಿಲ್ಲಾಧಿಕಾರಿಗಳ ಹಾದಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ. ಅತಿವೃಷ್ಟಿ ಹಾನಿಯ ಬಳಿಕ ಪ್ರತಿದಿನ ಜಿಲ್ಲೆಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಮಂತ್ರಿಗಳು ಬಂದು ಹೋಗುತ್ತಿದ್ದು, ಜಿಲ್ಲಾಧಿಕಾರಿಗಳು ಒತ್ತಡದ ನಡುವೆಯೂ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾವಿರಾರು ನಿರಾಶ್ರಿತರ ಸಂಕಷ್ಟಕ್ಕೆ ಸ್ಪಂದಿಸುವುದರೊಂದಿಗೆ ಪ್ರತಿದಿನ ಭೇಟಿ ನೀಡುವ ಮಂತ್ರಿಗಳಿಗೆ ಜಿಲ್ಲೆಯ ಚಿತ್ರಣವನ್ನು ವಿವರಿಸಿ ಕಾರ್ಯಾಚರಿಸುವ ಜಿಲ್ಲಾಧಿಕಾರಿಗಳು ಇತರ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ. ಜನರಿಂದ ಆಯ್ಕೆಯಾಗಿ ಬಂದಿರುವ ಜನಪ್ರತಿನಿಧಿಗಳು ಶ್ರೀವಿದ್ಯಾ ಅವರಂತಹ ದಕ್ಷ ಅಧಿಕಾರಿಗೆ ಮಾನಸಿಕ ಧೈರ್ಯ ಮತ್ತು ಸ್ಫೂರ್ತಿಯನ್ನು ತುಂಬಬೇಕೆ ಹೊರತು ಪ್ರತಿಯೊಂದಕ್ಕೂ ಟೀಕಾ ಪ್ರಹಾರ ಮಾಡುವ ಮೂಲಕ ಅಪಮಾನಿಸಬಾರದು ಎಂದು ಹೆಚ್.ಎನ್.ಯೋಗೇಶ್ ಕುಮಾರ್ ಒತ್ತಾಯಿಸಿದ್ದಾರೆ.

ಕೊಡಗಿನ ಸರ್ವ ಜನತೆ ಜಿಲ್ಲಾಧಿಕಾರಿಗಳ ಕಾರ್ಯ ದಕ್ಷತೆಯನ್ನು ಹಾಡಿ ಹೊಗಳುತ್ತಿದ್ದಾರೆ. ಮಹಿಳಾ ಅಧಿಕಾರಿಯ ಪರಿಶ್ರಮವನ್ನು ಮುಕ್ತ ಕಂಠದಿಂದ ಪ್ರಶಂಸಿದ್ದಾರೆ. ಜನಾಭಿಪ್ರಾಯ ಶ್ರೀವಿದ್ಯಾ ಅವರ ಪರವಿದ್ದರೂ ಕೆಲವು ಜನಪ್ರತಿನಿಧಿಗಳು ನಡೆದುಕೊಳ್ಳುತ್ತಿರುವ ರೀತಿ ಬೇಸರ ಮೂಡಿಸಿದೆ ಎಂದು ಅವರು ಟೀಕಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರು ಕೂಡ ತಮ್ಮ ಕುಟುಂಬದ ಯೋಗಕ್ಷೇಮವನ್ನು ಮರೆತು ಕೊಡಗಿನ ಜನರ ಕಷ್ಟ, ನಷ್ಟಗಳಿಗೆ ರಾತ್ರಿ ಹಗಲೆನ್ನದೆ ಸ್ಪಂದಿಸುತ್ತಿದ್ದಾರೆ. ಜಿಲ್ಲೆಯಲ್ಲೇ ತಂಗಿರುವ ಸಚಿವರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಮನ್ವಯತೆಯನ್ನು ಕಾಪಾಡಿಕೊಂಡು ಕಾರ್ಯ ನಿರ್ವಹಿಸುತ್ತಿದ್ದು, ಯಾವುದೇ ಕೊರತೆ ಉಂಟಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಇವರಿಗೆ ಜಿಲ್ಲೆಯ ಜನ ಕೂಡ ಸಹಕಾರ ನೀಡುತ್ತಿರುವುದು ಸ್ವಾಗತಾರ್ಹವೆಂದು ತಿಳಿಸಿರುವ ಯೋಗೇಶ್ ಕುಮಾರ್, ಸಂತ್ರಸ್ತರ ಹೆಸರಿನಲ್ಲಿ ಹಣ ಹಾಗೂ ಸಾಮಾಗ್ರಿಗಳು ದುರುಪಯೋಗವಾಗುತ್ತಿರುವುದನ್ನು ತಡೆಯಲು ಜಿಲ್ಲಾ ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಕೇಂದ್ರ ಸರಕಾರ ತಕ್ಷಣ ಕೊಡಗು ಜಿಲ್ಲೆಗೆ ಅತಿವೃಷ್ಟಿ ಹಾನಿ ಪರಿಹಾರವಾಗಿ 10 ಸಾವಿರ ಕೋಟಿ ರೂ.ಗಳನ್ನು  ಬಿಡುಗಡೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.  (ಕೆಸಿಐ,ಎಸ್.ಎಚ್)

 

 

Leave a Reply

comments

Related Articles

error: