ಪ್ರಮುಖ ಸುದ್ದಿ

ಸಂತ್ರಸ್ಥ 50 ಸಾವಿರ ಕುಟುಂಬಗಳಿಗೆ ವಿಶೇಷ ಅನ್ನಭಾಗ್ಯ : ‘ಆಹಾರ ಕಿಟ್’ ವಿತರಣೆಗೆ ಸಚಿವ ಜಮೀರ್ ಅಹ್ಮದ್ ಖಾನ್ ಚಾಲನೆ

ರಾಜ್ಯ(ಮಡಿಕೇರಿ) ಆ.25 :-  ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಸಂತ್ರಸ್ಥರಾಗಿರುವ 50 ಸಾವಿರ ಕುಟುಂಬಗಳಿಗೆ ‘ವಿಶೇಷ ಅನ್ನಭಾಗ್ಯ ಯೋಜನೆಯಡಿ ಆಹಾರ ಕಿಟ್’ಗಳನ್ನು ಆಹಾರ ಸಚಿವ ಜಮೀರ್ ಅಹಮದ್ ಖಾನ್ ಅವರು ವಿತರಣೆ ಮಾಡಿದರು.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮಿನಲ್ಲಿ ಸಾಂಕೇತಿಕವಾಗಿ ನಡೆದ ‘ಆಹಾರ ಕಿಟ್’ ವಿತರಿಸಿ ಮಾತನಾಡಿದ ಸಚಿವರು ನೆರೆಗೆ ಸಿಲುಕಿ ಸಂತ್ರಸ್ಥರಾಗಿರುವ ಕುಟುಂಬಗಳಿಗೆ 15 ದಿನದಲ್ಲಿ ತಾತ್ಕಾಲಿಕ ಪಡಿತರ ಚೀಟಿ ವಿತರಿಸಲಾಗುವುದು ಎಂದು ಅವರು ತಿಳಿಸಿದರು. ಆಹಾರ ಕಿಟ್‍ನಲ್ಲಿ 10 ಕೆ.ಜಿ ಅಕ್ಕಿ, ತಲಾ 1 ಕೆ.ಜಿ ತೊಗರಿ ಬೇಳೆ, ಉಪ್ಪು, ಸಕ್ಕರೆ, 1 ಲೀ. ಅಡುಗೆ ಎಣ್ಣೆ, 5 ಲೀ.ಸೀಮೆಎಣ್ಣೆ ಒಳಗೊಂಡಿದ್ದು, ನ್ಯಾಯಬೆಲೆ ಅಂಗಡಿ ಮೂಲಕ ವಿತರಿಸಲಾಗುತ್ತಿದೆ ಎಂದು ಜಮೀರ್ ಅಹಮದ್ ಖಾನ್ ಅವರು ಮಾಹಿತಿ ನೀಡಿದರು.  ಈ 50 ಸಾವಿರ ಆಹಾರ ಕಿಟ್ ಜೊತೆಗೆ ಸಾಧ್ಯವಾದಲ್ಲಿ ಇದನ್ನು ಇನ್ನಷ್ಟು ಹೆಚ್ಚಿಸಲಾಗುವುದು ಎಂದು ಇದೇ ಸಂದರ್ಭ ಹೇಳಿದರು.

ಜಿಲ್ಲೆಯಲ್ಲಿ ಸುಮಾರು 50 ಕ್ಕಿಂತ ಹೆಚ್ಚಿನ ಪರಿಹಾರ ಕೇಂದ್ರ ತೆರೆಯಲಾಗಿದ್ದು, ಈ ಕೇಂದ್ರಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಅಕ್ಕಿ ಮತ್ತು ತೊಗರಿ ಬೇಳೆಯನ್ನು ವಿತರಿಸಲಾಗುತ್ತಿದೆ. ಆಗಸ್ಟ್ 24ರವರೆಗೆ 486 ಕ್ವಿಂಟಾಲ್ ಅಕ್ಕಿ ಮತ್ತು 18.71 ಕ್ವಿಂಟಾಲ್ ತೊಗರಿಬೇಳೆ ವಿತರಿಸಲಾಗಿದೆ ಎಂದು ಸಚಿವರು ಹೇಳಿದರು.  ಪರಿಹಾರ ಕೇಂದ್ರಗಳಿಗೆ ಇಂಧನವಾಗಿ ಅಡುಗೆ ಅನಿಲವನ್ನು ಪೂರೈಕೆ ಮಾಡಲಾಗುತ್ತಿದ್ದು, ಈವರೆಗೆ 153 ಸಿಲಿಂಡರ್‍ಗಳನ್ನು ಪೂರೈಕೆ ಮಾಡಲಾಗಿದೆ. ಇದರೊಂದಿಗೆ ಕೇಂದ್ರಗಳಲ್ಲಿನ ಚಿಕ್ಕ ಮಕ್ಕಳ ಸ್ನಾನಕ್ಕೆ  ಬಿಸಿ ನೀರಿನ ವ್ಯವಸ್ಥೆ ಮಾಡಲು ಪ್ರತಿ ದಿನ ಪ್ರತಿ ಕೇಂದ್ರಕ್ಕೆ ತಲಾ 2 ಸಿಲಿಂಡರ್‍ನಂತೆ ಪೂರೈಕೆ ಮಾಡಲಾಗುತ್ತಿದೆ.

ಜಿಲ್ಲೆಯ ಪ್ರಕೃತಿ ವಿಕೋಪಕ್ಕೊಳಗಾದವರಿಗಾಗಿ ಸ್ಥಾಪಿಸಿದ ಆಶ್ರಯ ಕೇಂದ್ರಗಳಿಗೆ ಸರಬರಾಜು ಮಾಡಲು 200 ಕ್ವಿಂಟಾಲ್ ಸಕ್ಕರೆಯನ್ನು ಸ್ವೀಕರಿಸಲಾಗಿದೆ. ಪ್ರತೀ ಆಶ್ರಯ ಕೇಂದ್ರಕ್ಕೆ 50 ಕೆ.ಜಿಯಂತೆ ಸಕ್ಕರೆಯನ್ನು ವಿತರಿಸಲಾಗುತ್ತಿದೆ. ಬಾಕಿ ಉಳಿದ ಸಕ್ಕರೆಯನ್ನು ತುರ್ತು ಪರಿಸ್ಥಿತಿಯಲ್ಲಿ ಉಪಯೋಗಿಸಲು ಬಳಸಿಕೊಳ್ಳಲಾಗುವುದು.

ಮುಖ್ಯಮಂತ್ರಿ ಅವರು ಪ್ರಕಟಿಸಿರುವಂತೆ ವಿಪತ್ತು ಪೀಡಿತ ಫಲಾನುಭವಿಗಳಿಗೆ 50 ಸಾವಿರ ವಿಶೇಷ ಆಹಾರ ಕಿಟ್‍ಗಳನ್ನು ಉಚಿತವಾಗಿ ವಿತರಿಸಲು ಆಯೋಜಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಆಹಾರ ಕಿಟ್ ಜೊತೆಗೆ ತಲಾ ಎರಡೂವರೆ ಸಾವಿರ ಬಕೆಟ್ ಮತ್ತು ಮಗ್‍ನ್ನು ನೀಡಲಾಗುತ್ತದೆ. ಹಾಗೆಯೇ ವೈಯುಕ್ತಿಕವಾಗಿ 5 ಸಾವಿರ ಬೆಡ್‍ಶೀಟ್ ಮತ್ತು 3 ಸಾವಿರ ಉಡುಪನ್ನು ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.  ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಪಿ.ಐ ಶ್ರೀವಿದ್ಯಾ, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಸದಸ್ಯೆ ಜುಲೇಕಾಬಿ, ಮನ್ಸೂರ್, ಮೊಹಿಸಿನ್, ಆಹಾರ ಇಲಾಖೆಯ ಆಯುಕ್ತೆ ಟಿ.ಎಚ್.ಎಮ್ ಕುಮಾರ್, ಜಂಟಿ ನಿರ್ದೇಶಕರಾದ ಸದಾಶಿವ, ವಿಜಯಕುಮಾರ್ ಉಪ ನಿರ್ದೇಶಕರಾದ ಪುಟ್ಟಸ್ವಾಮಿ ಇತರರು ಹಾಜರಿದ್ದರು.

ಪ್ರಕೃತಿ ವಿಕೋಪದಿಂದ ತೀವ್ರವಾಗಿ ಭಾದಿತವಾದ 34 ಗ್ರಾ.ಪಂ.ಗಳಿಂದ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ 35 ಕೆ.ಜಿ ಅಕ್ಕಿ ಹಾಗೂ 01 ಕೆ.ಜಿ ತೊಗರಿ ಬೇಳೆಯನ್ನು ವಿಶೇಷ ಆಹಾರ ಪ್ಯಾಕೇಜ್‍ನಡಿ ಉಚಿತವಾಗಿ ವಿತರಿಸಲಾಗುತ್ತಿದೆ. ಇಲಾಖೆಯು ಪರ್ಯಾಯವಾಗಿ ಪ್ರತಿ ಕುಟುಂಬಕ್ಕೆ 35 ಕೆ.ಜಿ ಅಕ್ಕಿ ಮತ್ತು 1 ಕೆ.ಜಿ ತೊಗರಿ ಬೇಳೆಯನ್ನು ನ್ಯಾಯಬೆಲೆ ಅಂಗಡಿಗಳನ್ನು ಹೊರತುಪಡಿಸಿ ಗ್ರಾಮ ಪಂಚಾಯತ್‍ಗಳ ಮೂಲಕವೇ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದು ಸಾರ್ವಜನಿಕ ವಿತರಣಾಯಡಿ ವಿತರಿಸುವ ಆಹಾರಧಾನ್ಯಕ್ಕೆ ಹೆಚ್ಚುವರಿಯಾಗಿ ನೀಡಿದ ಹಂಚಿಕೆಯಾಗಿರುತ್ತದೆ.

ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ವಿದ್ಯುತ್ ಪೂರೈಕೆಯಲ್ಲಿ ತೀವ್ರ ಅಡಚಣೆಯಾಗಿದ್ದು, ವಿಶೇಷವಾಗಿ ಸೀಮೆಎಣ್ಣೆ ಅವಶ್ಯಕತೆ ಇದೆ. ಪ್ರತಿ ಪಂಚಾಯ್ತಿಗೆ 1 ಬ್ಯಾರಲ್‍ನಂತೆ (220 ಲೀ) ಸೀಮೆಎಣ್ಣೆಯನ್ನು ಪೂರೈಕೆ ಮಾಡಲಾಗುತ್ತಿದೆ. ಇಲ್ಲಿಯವರೆಗೆ 89 ಗ್ರಾಮ ಪಂಚಾಯ್ತಿಗಳಿಗೆ 19,580 ಲೀಟರ್ ಸೀಮೆಎಣ್ಣೆ ವಿತರಿಸಲಾಗಿದೆ.

ಜಿಲ್ಲೆಯಲ್ಲಿ ಅಡಿಗೆ ಅನಿಲ, ಪೆಟ್ರೋಲ್, ಡೀಸೆಲ್ ಅಗತ್ಯ ವಸ್ತುಗಳು ಕೊರತೆಯಾಗದಂತೆ ಸಂಬಂಧಪಟ್ಟ ತೈಲ ಕಂಪನಿಗಳೊಂದಿಗೆ ಸಂಪರ್ಕದಲ್ಲಿದ್ದು, ದಾಸ್ತಾನಿನಲ್ಲಿ ಕೊರತೆಯಾಗದಂತೆ ನಿಗಾವಹಿಸಲಾಗಿದೆ.

ಪ್ರಕೃತಿ ವಿಕೋಪದಿಂದ ಮನೆಗಳನ್ನು ಕಳೆದುಕೊಂಡು ಪಡಿತರ ಚೀಟಿಗಳನ್ನು ಕಳೆದುಕೊಂಡವರಿಗೆ ಉಚಿತವಾಗಿ ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ ಡುಪ್ಲಿಕೇಟ್ ಪಡಿತರ ಚೀಟಿಗಳನ್ನು ಮುದ್ರಿಸಿ ನೀಡಲು ಕ್ರಮವಹಿಸಲಾಗಿದೆ.     (ಕೆಸಿಐ,ಎಸ್.ಎಚ್)

Leave a Reply

comments

Related Articles

error: