ಪ್ರಮುಖ ಸುದ್ದಿ

ಗ್ರಾಮಸ್ಥರೊಂದಿಗೆ ಸಾರಿಗೆ ಸಚಿವರ ಸಭೆ : 15 ಕುಟುಂಬಗಳಿಗೆ ತಲಾ 1 ಲಕ್ಷ ರೂ. ಪರಿಹಾರ

ರಾಜ್ಯ(ಮಡಿಕೇರಿ) ಆ.25 :- ಅತಿವೃಷ್ಟಿಯಿಂದ ಕೊಡಗಿನ ಜನರು ತುಂಬಾ ಸಂಕಷ್ಟಕ್ಕೆ ಸಿಲುಕಿದ್ದು. ಅವರ ನೆರವಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರವು ಅಗತ್ಯ ನೆರವು ನೀಡಲಿದ್ದು, ಸರ್ಕಾರ ತಮ್ಮೊಂದಿಗಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಮಕ್ಕಂದೂರಿನ ಗೌಡ ಸಮಾಜದಲ್ಲಿ ಗ್ರಾಮಸ್ಥರ ಅಹವಾಲು ಆಲಿಸಿದ ಸಚಿವರು ಸಚಿವರ ಗೆಳೆಯರ ಬಳಗದಿಂದ ವೈಯಕ್ತಿಕವಾಗಿ ಸಂಪೂರ್ಣ ಮನೆ ಕಳೆದುಕೊಂಡ 15 ಕುಟುಂಬಗಳಿಗೆ ತಲಾ 1 ಲಕ್ಷ ಮೊತ್ತದ ಪರಿಹಾರದ ಹಣ ವಿತರಿಸಿದರು. ಮಳೆ ಮುಗಿಯುವವರೆಗೆ ಶಾಶ್ವತ ಕಾಮಗಾರಿಗಳನ್ನು ಮಾಡಲು ಬರುವುದಿಲ್ಲ. ತುರ್ತಾಗಿ ಅಗತ್ಯವಿರುವ ದುರಸ್ಥಿ ಕಾರ್ಯಗಳನ್ನು ಈಗಾಗಲೇ ಪ್ರಾರಂಭಿಸಲಾಗಿದ್ದು, ಮಳೆ ನಿಂತ ತಕ್ಷಣ ತಜ್ಞರಿಂದ ಅಭಿಪ್ರಾಯ ಪಡೆದು ಶಾಶ್ವತ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಅತಿವೃಷ್ಟಿ ಅನಾಹುತ ಜಿಲ್ಲೆಯಲ್ಲಿ ಸಂಭವಿಸಿದ ತಕ್ಷಣವೇ ಸಾರಿಗೆ ಇಲಾಖೆಯು ಕಾರ್ಯ ಪ್ರವೃತವಾಗಿದ್ದು, ಯಾವುದೇ ಸಂಚಾರ ವ್ಯತ್ಯಯ ಉಂಟಾಗದಂತೆ ಇಲಾಖೆಯು ಕಾರ್ಯಪ್ರವೃತ್ತವಾಗಿ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಿದೆ ಎಂದು ಸಚಿವರು ತಿಳಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೊಡಗಿನ ರೈತರ ನೆರವಿಗೆ ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದು, ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಹಾಗೂ ಶಾಶ್ವತ ಪರಿಹಾರಕ್ಕೆ ಸರ್ಕಾರವು ಮುಂದಾಗಿದ್ದು ಕೊಡಗಿನ ಜನತೆಯು ದೃತಿಗೆಡದಂತೆ ಇರುವಂತೆ ಸಚಿವರು ತಿಳಿಸಿದರು.

ಮುಂದಿನ ದಿನಗಳಲ್ಲಿ ಇಂತಹ ಅನಾಹುತ ಜಿಲ್ಲೆಯಲ್ಲಿ ಸಂಭವಿಸದಂತೆ ನಾವೆಲ್ಲರೂ ಎಚ್ಚರ ವಹಿಸಬೇಕು. ಪರಿಸರವನ್ನು ಎಲ್ಲರೂ ಕೈಜೋಡಿಸಿ ಉಳಿಸುವಂತಹ ಕೆಲಸಕ್ಕೆ ಮುಂದಾಗಬೇಕಿದೆ. ಸರ್ಕಾರವು ನಿಮ್ಮೊಂದಿಗಿದ್ದು ಎಲ್ಲಾ ನೆರವನ್ನು ಸರ್ಕಾರವು ನೀಡುವುದರೊಂದಿಗೆ ಕೊಡಗು ಜಿಲ್ಲೆಯು ಮೊದಲಿನಂತಾಗಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಸಚಿವರು ತಿಳಿಸಿದರು. ಸಭೆಯಲ್ಲಿ ಗ್ರಾಮಸ್ಥರು, ಇತರರು ಹಾಜರಿದ್ದರು.   (ಕೆಸಿಐ,ಎಸ್.ಎಚ್)

Leave a Reply

comments

Related Articles

error: