ಮೈಸೂರು

ಮೂಲ ಜಾನಪದ ಕಲಾವಿದರ ಸಮೀಕ್ಷೆಗೆ ಚಾಲನೆ: ವೆಬ್‍ಸೈಟ್, ಕೈಪಿಡಿಯಲ್ಲಿ ಕಲಾವಿದರ ಮಾಹಿತಿ

ಮೂಲ ಜಾನಪದ ಕಲಾವಿದರ ಸಮೀಕ್ಷೆಗೆ ಇಂದು ಮೈಸೂರು ಜಿಲ್ಲೆ ಕನ್ನಡ ಜಾನಪದ ಪರಿಷತ್‍ನಿಂದ ಚಾಲನೆ ನೀಡಲಾಯಿತು.

ಗುರುವಾರ, ಪತ್ರಕರ್ತರ ಭವನದಲ್ಲಿ ಪರಿಷತ್‍ ರಾಜ್ಯಾಧ್ಯಕ್ಷ ಎಸ್.ಬಾಲಾಜಿ ಅವರು ಹೆಚ್.ಡಿ. ಕೋಟೆ ತಾಲೂಕಿನ ಮಲಾರ ಕಾಲೋನಿಯ ಕಂಸಾಳೆ ಹಾಗೂ ತಂಬೂರಿ ಕಲಾವಿದ ಚಿನ್ನ ಮಹದೇವ್ ಅವರ ನೋಂದಣಿಯೊಂದಿಗೆ ಸಮೀಕ್ಷೆಗೆ ಚಾಲನೆ ನೀಡಲಾಯಿತು. ಈ ಸಂದರ್ಭ ಮಾತನಾಡಿದ ಅವರು, ಜಾನಪದ ಕಲೆಗಳು ಅಳಿವಿನಂಚಿನಲ್ಲಿದ್ದು ಕಲಾವಿದರು ಯಾವುದೇ ಸರ್ಕಾರಿ ಸೌಲಭ್ಯಗಳಿಲ್ಲದೇ ಸಂಪೂರ್ಣವಾಗಿ ನಿರ್ಲಕ್ಷಿತರಾಗಿದ್ದಾರೆ. ಅವರಿಗೆ ಜಾಗೃತಿ ಮೂಡಿಸಿ ಸರ್ಕಾರಿ ಯೋಜನೆಗಳನ್ನು ತಲುಪಿಸುವ ಉದ್ದೇಶದಿಂದ ಸಮೀಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ ಈಗಾಗಲೇ ಉತ್ತರ ಕರ್ನಾಟಕದ ಭಾಗದಲ್ಲಿ ಸಮೀಕ್ಷೆಗಳು ಪೂರ್ಣಗೊಂಡಿವೆ ಎಂದರು.

ಸಮೀಕ್ಷೆಯಿಂದ ಜಾನಪದ ಕಲಾವಿದರ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ವರದಿ ತಯಾರಿಸಿ ಸರ್ಕಾರಕ್ಕೆ ನೀಡಿ ಸೌಲಭ್ಯಕ್ಕೆ ಒತ್ತಾಯಿಸಲಾಗುವುದು ಎಂದರು.

ಕಾರ್ಯದರ್ಶಿ ಡಾ.ವಿಜಯಲಕ್ಷ್ಮಿ ಮನಾಪುರ ಮಾತನಾಡಿ, ಅಳಿವಿನಂಚಿಗೆ ಜಾರುತ್ತಿರುವ ಬಹುಮುಖಿ ಕಲೆಗಳಿವೆ, ಕಲಾವಿದರನ್ನು ಪೋಷಿಸುವ ಮೂಲಕ ಕಲೆಗಳಿಗೆ ಜೀವ ತುಂಬಬೇಕು. ಸಮೀಕ್ಷೆಯನ್ನು ಸರ್ಕಾರದ ಮಟ್ಟದಲ್ಲಿ ಕೈಗೊಳ್ಳಬೇಕಾಗಿತ್ತು, ಆದರೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ. ಜಾನಪದಕ ಕಲೆಯಲ್ಲಿ ಶೇ.90 ರಷ್ಟು ಮಹಿಳೆಯನ್ನು ಗುರುತಿಸುವ ಕೆಲಸವೇ ಆಗಿಲ್ಲ, ಆಕೆ ತೆರೆಮರೆಯ ಕಾಯಿಯಂತೆ ಶ್ರಮಿಸುತ್ತಿದ್ದಾಳೆ ಅಂತಹ ಅನಾಮಿಕ ಕಲಾವಿದರನ್ನು ಗುರುತಿಸುವ ಕಾರ್ಯವನ್ನು ಪರಿಷತ್ತಿನಿಂದ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಲಾವಿದರ ಸ್ಥಿತಿ-ಗತಿ ಬಗ್ಗೆ, ಅಂಕಿ-ಅಂಶ ಸಂಗ್ರಹಿಸುತ್ತಿದ್ದು, ಈಗಾಗಲೇ 15 ಜಿಲ್ಲೆಗಳಲ್ಲಿ ಸಮೀಕ್ಷೆ ಪೂರ್ಣಗೊಂಡಿದೆ. ತಾಲೂಕು, ಹೋಬಳಿ, ಗ್ರಾಮ ಮಟ್ಟದಲ್ಲಿ ಕಲಾವಿದರ ಹೆಸರು, ಸ್ಥಳ, ದೂರವಾಣಿ ಸಂಖ್ಯೆ ಸೇರಿದಂತೆ ಇತರರೆ ವಿವರಗಳನ್ನೊಳಗೊಂಡ ಕೈಪಿಡಿಯನ್ನು ಹೊರತರಲಾಗುವುದು. ವೆಬ್‍ಸೈಟ್‍ನಲ್ಲಿಯೂ ಈ ವಿವರಗಳನ್ನು ನಮೂದಿಸಲಾಗುವುದು ಎಂದು ಜಿಲ್ಲಾಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್‍ ಹೆಚ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕನಕ, ತಾರಾ, ನಟರಾಜ್, ಕೃಷ್ಣನಾಯಕ್ ಹಾಗೂ ಡಾ.ಪುಟ್ಟನಂಜಯ್ಯ ಉಪಸ್ಥಿತರಿದ್ದರು.

Leave a Reply

comments

Related Articles

error: