ಕರ್ನಾಟಕಪ್ರಮುಖ ಸುದ್ದಿ

ಪ್ರಾದೇಶಿಕ ಹಿತ ಕಾಯಲು ನೂತನ ರಾಜಕೀಯ ಪಕ್ಷ ಸ್ಥಾಪನೆ ಬಗ್ಗೆ ಕ.ರ.ವೇ ಚಿಂತನೆ

ಬೆಂಗಳೂರು (ಆ.27): ಕನ್ನಡ ನಾಡು-ನುಡಿಯ ಬಗ್ಗೆ ದಶಕದಿಂದ ಹೋರಾಡುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯು ಇದೀಗ ನಾಡಿನ ಹಿತ ಕಾಪಾಡುವ ಉದ್ದೇಶದೊಂದಿಗೆ ಪ್ರತ್ಯೇಕ ಪ್ರಾದೇಶಿಕ ರಾಜಕೀಯ ಪಕ್ಷ ಸ್ಥಾಪಿಸುವ ಬಗ್ಗೆ ಚಿಂತನೆ ನಡೆಸಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಬರುವ ಲೋಕಸಭಾ ಚುನಾವಣೆ ಮುಗಿದ ನಂತರ ಪ್ರಾದೇಶಿಕ ಪಕ್ಷ ಸ್ಥಾಪನೆ ಮಾಡುವ ಸಾಧ್ಯತೆಯಿದೆ ಎಂದು ಖುದ್ದು ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರೇ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ರಕ್ಷಣಾ ವೇದಿಕೆಯಿಂದ ಪ್ರಾದೇಶಿಕ ಪಕ್ಷ ಸ್ಥಾಪಿಸಬೇಕು ಎಂಬ ಚಿಂತನೆ ಹೊಸದೇನಲ್ಲ. ಹಲವು ವರ್ಷಗಳಿಂದಲೂ ಈ ಬಗ್ಗೆ ಸಂಘಟನೆಯಲ್ಲಿ ಚರ್ಚೆಯಾಗುತ್ತಲೇ ಇದೆ. ಈ ಕಾರಣಕ್ಕಾಗಿಯೇ ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಸಂಘಟನೆ ವತಿಯಿಂದಲೇ ಸುಮಾರು ಹತ್ತು ವಾರ್ಡ್‌ಗಳಲ್ಲಿ ಸ್ಪರ್ಧಿಸಲಾಗಿತ್ತು.  ಜನರ ಪ್ರತಿಕ್ರಿಯೆ ತಿಳಿದುಕೊಳ್ಳುವುದಕ್ಕಾಗಿಯೇ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ಎಲ್ಲ ಅಭ್ಯರ್ಥಿಗಳೂ ಸೋಲುಂಡರು. ನಂತರ ಪಕ್ಷ ಸ್ಥಾಪಿಸುವ ಯೋಚನೆ ನೆನೆಗುದಿಗೆ ಬಿದ್ದಿತ್ತು ಎಂದು ಹೇಳಿದ್ದಾರೆ.

ಕಳೆದ ಹಲವು ದಿನಗಳ ಹಿಂದೆ ನಡೆದ ವೇದಿಕೆಯ ರಾಜ್ಯ ಸಮಿತಿ ಸಭೆಯಲ್ಲಿ ಹಲವು ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರು ಪ್ರಾದೇಶಿಕ ಪಕ್ಷ ಸ್ಥಾಪಿಸುವ ಬಗ್ಗೆ ಗಂಭೀರವಾಗಿ ಪ್ರಸ್ತಾಪಿಸಿದರು. ಮಹಾರಾಷ್ಟ್ರದಲ್ಲಿ ಅಲ್ಲಿನ ನಾಡು-ನುಡಿ ಕಾಪಾಡುವ ಉದ್ದೇಶದೊಂದಿಗೆ ಶಿವಸೇನೆ ಹೇಗೆ ಪ್ರಾದೇಶಿಕ ಪಕ್ಷವಾಗಿ ಕೆಲಸ ಮಾಡುತ್ತಿದೆಯೋ ಅದೇ ರೀತಿ ಕರ್ನಾಟಕದಲ್ಲೂ ಪ್ರಾದೇಶಿಕ ಪಕ್ಷ ಸ್ಥಾಪಿಸಬೇಕು ಎಂಬ ಅಭಿಪ್ರಾಯವನ್ನು ಹಲವು ಪದಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ, ಪ್ರಾದೇಶಿಕ ಪಕ್ಷ ಸ್ಥಾಪಿಸುವ ಬಗ್ಗೆ ಅನೇಕ ಕಡೆಗಳಿಂದ ಆಗ್ರಹ ಕೇಳಿಬರುತ್ತಿದೆ. ಸಂಘಟನೆಯ ಮುಂದಿನ ಪದಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗುವುದು. ಪಕ್ಷ ಸ್ಥಾಪಿಸುವುದು ಸುಲಭವಲ್ಲ ಎಂಬುದೂ ಗೊತ್ತಿದೆ. ಅದಕ್ಕೆ ದೊಡ್ಡ ಪ್ರಮಾಣದ ಆರ್ಥಿಕ ಸಂಪನ್ಮೂಲವೂ ಬೇಕು. ಇದೆಲ್ಲವನ್ನೂ ಗಮನದಲ್ಲಿರಿಸಿಕೊಂಡು ನಿರ್ಧಾರ ಕೈಗೊಳ್ಳಲಾಗುವುದು. ಎಲ್ಲವೂ ಅಂದುಕೊಂಡಂತೆ ಆದರೆ ಲೋಕಸಭಾ ಚುನಾವಣೆ ನಂತರ ಪಕ್ಷ ಸ್ಥಾಪನೆಗೆ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: