ದೇಶಪ್ರಮುಖ ಸುದ್ದಿ

ಅಣೆಕಟ್ಟುಗಳ ಕಳಪೆ ನಿರ್ವಹಣೆಯೇ ಜಲ ದುರಂತಗಳಿಗೆ ಕಾರಣ: ತಜ್ಞರ ಅಭಿಪ್ರಾಯ

ಬೆಂಗಳೂರು (ಆ.27): ಕೇರಳ ರಾಜ್ಯದಲ್ಲಿ ಉಂಟಾಗಿರುವ ಭೀಕರ ಜನಪ್ರಳಯಕ್ಕೆ ಅಣೆಕಟ್ಟೆಗಳನ್ನು ಸರಿಯಾಗಿ ನಿರ್ವಹಿಸದೆ ಇದ್ದುದೇ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದಿಢೀರ್ ಪ್ರವಾಹ ಉಂಟಾಗಲು ಅಣೆಕಟ್ಟೆ ತುಂಬುವವರೆಗೂ ನೀರು ಬಿಡುಗಡೆ ಮಾಡದೇ ಇರುವುದೇ ಕಾರಣ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ವಿರೋಧ ಪಕ್ಷಗಳು ಕೂಡ ಡ್ಯಾಮ್‌ಗಳ ಕಳಪೆ ನಿರ್ವಹಣೆಯಿಂದಾಗಿ ಸರ್ಕಾರವೇ ಪರೋಕ್ಷವಾಗಿ ಪ್ರವಾಹಕ್ಕೆ ಕಾರಣವಾಯಿತು ಎಂದು ಆರೋಪಿಸಿವೆ. ಸರ್ಕಾರ ಅದನ್ನು ಒಪ್ಪಿಕೊಳ್ಳುತ್ತಿಲ್ಲವಾದರೂ, ಅಣೆಕಟ್ಟೆಗಳ ಕೆಳಗಿರುವ ಪ್ರದೇಶಗಳಲ್ಲೇ ಹೆಚ್ಚು ನೆರೆಹಾನಿ ಸಂಭವಿಸಿದೆ. ಅಣೆಕಟ್ಟೆಗಳನ್ನು ನಿರ್ವಹಿಸುವುದು ಅಂದರೆ ನದಿಯಲ್ಲಿ ಹರಿದುಬರುವ ನೀರನ್ನು ಸಂಗ್ರಹಿಸಿಡುವುದು ಮಾತ್ರವಲ್ಲ, ದುರಂತಗಳು ಸಂಭವಿಸದಂತೆ ತಡೆಯುವುದೂ ಮುಖ್ಯ ಎಂಬದು ತಜ್ಞರ ಕಿವಿಮಾತು.

ಕೇರಳದಲ್ಲಿ 53 ದೊಡ್ಡ ಅಣೆಕಟ್ಟೆಗಳಿವೆ. ಅವುಗಳಿಗೆ ಒಟ್ಟು 7 ಲಕ್ಷ ಕೋಟಿ ಲೀಟರ್ ನೀರು ಸಂಗ್ರಹಿಸುವ ಶಕ್ತಿಯಿದೆ. ಭಾರಿ ಮಳೆಯಾಗಿ ನದಿಗಳು ತುಂಬಿ ಹರಿದಾಗ ಈ ಅಣೆಕಟ್ಟೆಗಳು ತಡೆಗೋಡೆಗಳಂತೆ ಕೆಲಸ ಮಾಡಬೇಕಿತ್ತು. ಕೇರಳದ ಅತಿ ಉದ್ದ ನದಿಯಾದ ಪೆರಿಯಾರ್ ನದಿಗೆ ಅಡ್ಡಲಾಗಿರುವ ರಾಜ್ಯದ ಎರಡು ಅತಿದೊಡ್ಡ ಡ್ಯಾಮ್‌ಗಳು ಇಡುಕ್ಕಿ ಮತ್ತು ಇಡಾಮಲೆಯಾರ್. ಇವು ಪೆರಿಯಾರ್ ನದಿಯ ವಾರ್ಷಿಕ ಹರಿವಿನ ಶೇ.21.3 ರಷ್ಟು ನೀರನ್ನು ಹಿಡಿದಿಟ್ಟುಕೊಂಡಿವೆ. ಹೀಗಾಗಿ ಪೆರಿಯಾರ್ ನದಿ ಪಾತ್ರದಲ್ಲಿ ಪ್ರವಾಹ ಉಂಟಾಗಬಾರದಿತ್ತು. ಆದರೆ, ಈ ಬಾರಿ ಹಾಗಾಗಿಲ್ಲ.

ಇವೆರಡೂ ಡ್ಯಾಮ್‌ಗಳಿಂದ ಸರಿಯಾದ ಮುನ್ಸೂಚನೆಯಿಲ್ಲದೆ ಭಾರಿ ಮಳೆಯಲ್ಲಿಯೇ ದೊಡ್ಡ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ. ಅದರಿಂದಾಗಿ ಪ್ರವಾಹ ಇನ್ನಷ್ಟು ಹೆಚ್ಚಾಗಿದೆ. ವಾಸ್ತವವಾಗಿ, ಈ ಡ್ಯಾಮ್‌ಗಳಿಲ್ಲದೆ ಇದ್ದಿದ್ದರೆ ಈ ವರ್ಷ ಕೇರಳದಲ್ಲಿ ಇಷ್ಟೊಂದು ದೊಡ್ಡ ಪ್ರವಾಹ ಸಂಭವಿಸುತ್ತಲೇ ಇರಲಿಲ್ಲ ಎನ್ನಲಾಗಿದೆ.

ಅಣೆಕಟ್ಟೆ ಮತ್ತು ಜಲಾಶಯಗಳು ಕೇವಲ ನೀರು ಹಿಡಿದಿಟ್ಟುಕೊಳ್ಳುವ ಕೆಲಸವನ್ನಷ್ಟೇ ಮಾಡುವುದಿಲ್ಲ, ಇವು ನೆರೆಯನ್ನು ಕೂಡ ನಿಯಂತ್ರಿಸುತ್ತವೆ. ಅಣೆಕಟ್ಟೆಗಳನ್ನು ನಿರ್ಮಿಸುವ ಉದ್ದೇಶದಲ್ಲಿ ಪ್ರವಾಹ ನಿಯಂತ್ರಣವೂ ಒಂದು. ಆದರೆ, ಪ್ರವಾಹ ನಿಯಂತ್ರಿಸಬೇಕು ಅಂದರೆ ಮಳೆಗಾಲ ಜೋರಾಗುವ ವೇಳೆಗೆ ಡ್ಯಾಮ್‌ಗಳು ಖಾಲಿಯಿರಬೇಕು. ಆದರೆ, ಕೇರಳದಲ್ಲಿ ಹಾಗೆ ಮಾಡಿಲ್ಲ. ಜುಲೈ ಅಂತ್ಯದ ವೇಳೆಗೆ, ಅಂದರೆ ಮಳೆಗಾಲ ಜೋರಾಗುವ ವೇಳೆಗೆ ಇಡುಕ್ಕಿ ಡ್ಯಾಂ ಬಹುತೇಕ ಭರ್ತಿಯಾಗಿತ್ತು.

30 ವರ್ಷದಲ್ಲಿ ಮೊದಲ ಬಾರಿ ಡ್ಯಾಂ ತುಂಬುತ್ತಿದೆ ಎಂದು ಎಲ್ಲರೂ ಖುಷಿಪಡುತ್ತಿದ್ದರು. ಆಗಸ್ಟ್‌ನಲ್ಲಿ ಮಳೆ ಇನ್ನೂ ಜೋರಾದಾಗ ಈಗಾಗಲೇ ನೆರೆಹಾವಳಿ ಶುರುವಾಗಿದ್ದ ಪ್ರದೇಶಕ್ಕೆ ಇದೇ ಇಡುಕ್ಕಿ ಡ್ಯಾಮ್‌ನಿಂದ ನೀರು ಬಿಡಲಾಯಿತು. ಇದು ಪ್ರವಾಹದ ತೀವ್ರತೆಯನ್ನು ಇನ್ನಷ್ಟು ಹೆಚ್ಚಿಸಿತು.

ಕೇರಳದ ಶೇ.57 ರಷ್ಟು ಡ್ಯಾಮ್‍ಗಳು ವಿದ್ಯುತ್ ಉತ್ಪಾದನೆಗೆಂದು ನಿರ್ಮಾಣವಾದುವು. ಅವುಗಳನ್ನು ಕೇರಳ ರಾಜ್ಯ ವಿದ್ಯುತ್ ಮಂಡಳಿ ನೋಡಿಕೊಳ್ಳುತ್ತದೆ. ಇನ್ನುಳಿದ ಅಣೆಕಟ್ಟೆಗಳನ್ನು ನೀರಾವರಿ ಇಲಾಖೆ ನಿರ್ವಹಿಸುತ್ತದೆ. ಎರಡೂ ಸಂಸ್ಥೆಗಳು ವಿದ್ಯುತ್ ಹಾಗೂ ನೀರಾವರಿಗೆ ಹೆಚ್ಚೆಚ್ಚು ನೀರು ಸಂಗ್ರಹಿಸಿಕೊಳ್ಳುವ ಕುರಿತು ಮಾತ್ರ ಯೋಚನೆ ಮಾಡುತ್ತವೆಯೇ ಹೊರತು ಪ್ರವಾಹ ನಿಯಂತ್ರಣದ ಬಗ್ಗೆ ಯೋಚಿಸುವುದಿಲ್ಲ.

ಕೇರಳ ರಾಜ್ಯದ ಬಹುತೇಕ ಭಾಗ ಪಶ್ಚಿಮಘಟ್ಟ ಪ್ರದೇಶವಾಗಿದೆ. ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯ ಸರ್ಕಾರಗಳು ಪರಿಸರಕ್ಕೆ ಹಾನಿಯಾಗುವಂತಹ ಯೋಜನೆಗಳನ್ನು ಜಾರಿಗೊಳಿಸಬಾರದು ಎಂದು ಪರಿಸರ ತಜ್ಞರ ವರದಿಗಳು ಎಚ್ಚರಿಸಿದ್ದರೂ ಈ ವರದಿಗಳಿಗೆ ಕಿಂಚಿತ್ತೂ ಬೆಲೆ ಕೊಡದೆ ಯದ್ವಾತದ್ವಾ ಡ್ಯಾಮ್‍ ಕಟ್ಟುತ್ತಿವೆ. ಕಾಡು ಕಡಿದು ಮನುಷ್ಯನ ವಾಸವೂ ಹೆಚ್ಚಾಗುತ್ತಿದೆ.

ಡ್ಯಾಮ್‌ಗಳ ಕಳಪೆ ನಿರ್ವಹಣೆಯಿಂದಾಗಿ ಅಪಾಯ ಮೈಮೇಲೆ ಎಳೆದುಕೊಂಡ ಮೇಲೆ ಕೇರಳ ಸರ್ಕಾರ ಮುಂದಿನ ವರ್ಷಗಳಲ್ಲಿ ಹೀಗಾಗದಂತೆ ನೋಡಿಕೊಳ್ಳಲು ಸಮಗ್ರ ವೈಜ್ಞಾನಿಕ ಡ್ಯಾಂ ನಿರ್ವಹಣೆ ವ್ಯವಸ್ಥೆ ಅಳವಡಿಸಿಕೊಳ್ಳಲು ನಿರ್ಧರಿಸಿದೆ. ಇದು ಸಂಪೂರ್ಣ ಕಂಪ್ಯೂಟರೀಕೃತ ವ್ಯವಸ್ಥೆಯಾಗಿದ್ದು, ಯಾವಾಗ ನೀರು ಬಿಡಬೇಕು, ಎಷ್ಟು ಸಂಗ್ರಹಿಸಬೇಕು ಎಂಬುದೆಲ್ಲ ಮೊದಲೇ ಯೋಜಿಸಿದ ರೀತಿಯಲ್ಲಿ ವೈಜ್ಞಾನಿಕವಾಗಿ ತನ್ನಿಂತಾನೇ ನಿರ್ಧಾರವಾಗುತ್ತದೆ. ಅಣೆಕಟ್ಟೆಯ ಗೇಟು ತೆರೆಯುವುದು ಮತ್ತು ಮುಚ್ಚುವುದು ಮಾತ್ರ ಮನುಷ್ಯನ ಕೆಲಸ. ಏನೇ ಆಗಲಿ ಮನುಷ್ಯನಿಗೆ ಕೆಟ್ಟಮೇಲೆಯೇ ಬುದ್ದಿ ಬರುವುದು ಎನ್ನುವುದು ಕೇರಳದ ವಿಷಯದಲ್ಲಿ ಸಾಬೀತಾಗಿದೆ. (ಎನ್.ಬಿ)

Leave a Reply

comments

Related Articles

error: