ಪ್ರಮುಖ ಸುದ್ದಿ

ಸೋಮವಾರಪೇಟೆ ತಾಲೂಕಿನಲ್ಲಿ ಅನೇಕ ರಸ್ತೆಗಳು ಕುಸಿತ : ಸಂಘ ಸಂಸ್ಥೆಗಳಿಂದ ರಸ್ತೆ ದುರಸ್ತಿಗೆ ಆಸಕ್ತಿ

ರಾಜ್ಯ(ಮಡಿಕೇರಿ)ಆ.27:- ಜಿಲ್ಲೆಯಲ್ಲಿ ಸುರಿದ ಮಾಹಾಮಳೆಗೆ ಸೋಮವಾರಪೇಟೆ ತಾಲೂಕಿನಲ್ಲಿ ಅನೇಕ ರಸ್ತೆಗಳು ಕುಸಿದಿದ್ದು, ಸಂಚಾರಕ್ಕೆ ಅಣಿಗೊಳಿಸಲು ಕೆಲ ಸಂಘ ಸಂಸ್ಥೆಗಳು ಆಸಕ್ತಿ ವಹಿಸುತ್ತಿವೆ.

ಮನೆ ,ಆಸ್ತಿಪಾಸ್ತಿಗಳನ್ನು ಕಳೆದುಕೊಂಡ ಜನತೆ ತಮ್ಮ ಮನೆಗಳಿಗೆ ತೆರಳುವ ದಾರಿಯನ್ನು ಹುಡುಕುತ್ತಿದ್ದಾರೆ. ರಸ್ತೆಗಳಲ್ಲಿ ಸಂಪೂರ್ಣ ಕೆಸರು ತುಂಬಿದೆ. ಗ್ರಾಮಾಂತರ ಪ್ರದೇಶಗಳಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೂ ಕುಸಿದಿದೆ. ಸೋಮವಾರಪೇಟೆಯಿಂದ ಮಡಿಕೇರಿಗೆ ತೆರಳಬೇಕಾದವರು ಮಾದಾಪುರ-ಸುಂಟಿಕೊಪ್ಪ-ಮಾರ್ಗ ಬಳಸಬೇಕಾಗಿದೆ.

ಮಾದಾಪುರ ಮಾರ್ಗವಾಗಿ ಗರ್ವಾಲೆ, ಸೂರ್ಲಬ್ಬಿ ಸಂಚಾರ ಬಂದ್ ಆಗಿದೆ. ಶಿರಂಗಳ್ಳಿ ಸಮೀಪ ಬರೆ ಕುಸಿದು ರಸ್ತೆ ಬಂದ್ ಆಗಿದೆ. ಈ ನಿಟ್ಟಿನಲ್ಲಿ ಮೊದಲು ಸಂಪರ್ಕ ವ್ಯವಸ್ಥೆಯನ್ನು ಸರಿಪಡಿಸುವ ಉದ್ದೇಶದಿಂದ ಸಿದ್ದಾಪುರ ಬಿ.ಬಿ.ಟಿ.ಸಿ. ಸಂಸ್ಥೆಯ ವತಿಯಿಂದ ಕಳ್ಳಿಚಂಡ ಬೋಪಣ್ಣ ನೇತೃತ್ವದಲ್ಲಿ 60 ಮಂದಿಯ ತಂಡ ಸ್ವಯಂ ಪ್ರೇರಣೆಯಿಂದ ಪ್ರಕೃತಿ ವಿಕೋಪಕ್ಕೆ ಒಳಗಾದ ಮೇಕೇರಿ, ಮಕ್ಕಂದೂರು, ಮಡಿಕೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಸಮೀಪದ ರಸ್ತೆಗಳಲ್ಲಿ ಬಿದ್ದಿರುವ ಮಣ್ಣು ಮತ್ತು ಮರದ ಕೊಂಬೆಗಳನ್ನು ತೆರವುಗೊಳಿಸುವ ಕೆಲಸವನ್ನು ಕಳೆದ 2 ದಿನಗಳಿಂದ ಮಾಡುತ್ತಿದ್ದಾರೆ.

ಜಿಲ್ಲೆಯ ಇನ್ನಷ್ಟು ಸಂಘ ಸಂಸ್ಥೆಗಳು ಶ್ರಮದಾನ ನಡೆಸುವ ಮೂಲಕ ರಸ್ತೆ ಸಂಪರ್ಕ ಸುಧಾರಣೆಗೆ ಪ್ರಯತ್ನಿಸಬೇಕಾಗಿದೆ ಎಂದು ಬೋಪಣ್ಣ ಮತ್ತು ಇತರರು ಮನವಿ ಮಾಡಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: