ಕರ್ನಾಟಕಪ್ರಮುಖ ಸುದ್ದಿ

ಸಿ.ಎಂ ಕುಮಾರಸ್ವಾಮಿ ಜನತಾ ದರ್ಶನ ಸಮಯ ಬದಲು

ಬೆಂಗಳೂರು (ಆ.28): ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇನ್ನು ಮುಂದೆ ಶನಿವಾರ ಮಾತ್ರವೇ ಸಿಎಂ ಅವರು ಸಾರ್ವಜನಿಕರನ್ನು ಭೇಟಿ ಆಗಲಿದ್ದಾರೆ. ಸಾರ್ವಜನಿಕರು, ಗೃಹ ಕಚೇರಿ ಕೃಷ್ಣಾ, ವಿಧಾನಸೌಧದ ಸಿಎಂ ಕಚೇರಿ, ಜೆ.ಪಿ ನಗರ ನಿವಾಸಗಳಿಗೆ ಅನಿಯಮಿತವಾಗಿ ಭೇಟಿ ನೀಡುತ್ತಿರುವ ಕಾರಣ ಮುಖ್ಯಮಂತ್ರಿಗಳ ನಿಗದಿತ ಕಾರ್ಯಕ್ರಮಗಳಿಗೆ ತೊಂದರೆ ಆಗುತ್ತಿದೆ, ಹೀಗಾಗಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಮುಖ್ಯಮಂತ್ರಿಗಳ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬದಲಾದ ವೇಳಾಪಟ್ಟಿಯ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಮುಖ್ಯಮಂತ್ರಿಗಳು ತಮ್ಮ ಪೂರ್ವ ನಿಗದಿತ ಕಾರ್ಯಕ್ರಮಗಳಿಗೆ ಸರಿಯಾದ ಸಮಯಕ್ಕೆ ಹೋಗಲಾಗುತ್ತಿಲ್ಲವಾದ ಕಾರಣ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಟ್ವಿಟ್ಟರ್‌ನಲ್ಲಿ ಪ್ರಕಟಿಸಿರುವ ಪತ್ರದಲ್ಲಿ ಹೇಳಿದ್ದಾರೆ. ಇಷ್ಟು ದಿನ ಅನಿಯಮಿತವಾಗಿ ಸಮಯಾವಕಾಶ ಸಿಕ್ಕಾಗಲೆಲ್ಲಾ ಅಥವಾ ಪ್ರತಿದಿನ ಬೆಳಿಗ್ಗೆ ಸಮಯ ಗೃಹ ಕಚೇರಿ ಕೃಷ್ಣಾ ಎದುರು ಕುಮಾರಸ್ವಾಮಿ ಅವರು ಸಾರ್ವಜನಿಕರ ಭೇಟಿ ಆಗುತ್ತಿದ್ದರು. ಆದರೆ ಇನ್ನು ಮುಂದೆ ಶನಿವಾರ ಬೆಳಿಗ್ಗೆ 11 ರಿಂದ ಸಂಜೆ 4:30ರ ವರವರೆಗೆ ಮಾತ್ರ ಸಿಎಂ ಅವರು ಸಾರ್ವಜನಿಕರನ್ನು ಭೇಟಿ ಆಗಲಿದ್ದಾರೆ.

ಮುಖ್ಯಮಂತ್ರಿ ಅವರು ಬೆಂಗಳೂರಿನಲ್ಲಿದ್ದಾಗ ಮಾತ್ರವೇ ಶನಿವಾರದಂದು ಸಾರ್ವಜನಿಕರ ದರ್ಶನಕ್ಕೆ ಸಿಗಲಿದ್ದು. ಸಾರ್ವಜನಿಕ ಭೇಟಿಯು ಗೃಹ ಕಚೇರಿ ಕೃಷ್ಣದಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಅವರ ಸಾರ್ವಜನಿಕ ಭೇಟಿ ಸಂದರ್ಭದಲ್ಲಿ ಯಾವುದೇ ಖಾಸಗಿ ದೂರುಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸಿಎಂ ಅವರ ಕಚೇರಿ ಮಾಹಿತಿ ನೀಡಿದೆ. ಸರ್ಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದ ದೂರುಗಳೂ ಸಹ ಸಾರ್ವಜನಿಕ ಭೇಟಿ ಸಂದರ್ಭ ನೀಡುವಂತಿಲ್ಲ. ಸರ್ಕಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಮಾತ್ರವೇ ಸಾರ್ವಜನಿಕರು ನೀಡಬೇಕಿರುತ್ತದೆ.

ವೈದ್ಯಕೀಯ ಪರಿಹಾರ ನಿಧಿಗೆ ಬೇಡಿಕೆ ಇಡುವವರು, ಆಧಾರ್ ಕಾರ್ಡ್‌, ಬಿಪಿಎಲ್ ಕಾರ್ಡ್, ವೈದ್ಯಕೀಯ ಬಿಲ್ ವಿವರ, ಚಿಕಿತ್ಸೆಯ ವಿವರದ ಜೊತೆಗೆ ಲಿಖಿತ ಮನವಿ ಸಲ್ಲಿಸಬೇಕಿದೆ. ಸಾರ್ವಜನಿಕ ಭೇಟಿ ಸಮಯದಲ್ಲಿ ಮುಖ್ಯಮಂತ್ರಿಗಳ ಸಲಹೆ ಸೂಚನೆಯಂತೆ ತೆಗೆದುಕೊಳ್ಳಲಾದ ಕ್ರಮಗಳನ್ನು ಎಸ್‌ಎಂಎಸ್‌ ಮೂಲಕ ದೂರುದಾರರ ಗಮನಕ್ಕೆ ತರಲಾಗುವುದು. (ಎನ್.ಬಿ)

Leave a Reply

comments

Related Articles

error: