ಪ್ರಮುಖ ಸುದ್ದಿ

ಮೇಲುಕೋಟೆಯ ಪವಿತ್ರ ಪಂಚಕಲ್ಯಾಣಿ ಸಮುಚ್ಛಯದ ಸುತ್ತ ರಕ್ಷಣಾಬೇಲಿ, ಪರಿಸರ ಸ್ವಚ್ಛಗೊಳಿಸಲು ಅಗತ್ಯ ಕ್ರಮ : ಗವಿಸಿದ್ಧಯ್ಯ ಭರವಸೆ

ರಾಜ್ಯ(ಮಂಡ್ಯ)ಆ.28:- ಮೇಲುಕೋಟೆಯ ಪವಿತ್ರ ಪಂಚಕಲ್ಯಾಣಿ ಸಮುಚ್ಛಯದ ಸುತ್ತ ರಕ್ಷಣಾಬೇಲಿ ಅಳವಡಿಸಿ ಪರಿಸರವನ್ನು ಸ್ವಚ್ಛಗೊಳಿಸಲು ತಕ್ಷಣವೇ ಅಗತ್ಯ ಕ್ರಮ ಜರುಗಿಸುವುದಾಗಿ ರಾಜ್ಯ ಪುರಾತತ್ವ ಇಲಾಖೆಯ ಮೈಸೂರು ವಿಭಾಗೀಯ ನಿರ್ದೇಶಕ ಗವಿಸಿದ್ಧಯ್ಯ ಭರವಸೆ ನೀಡಿದ್ದಾರೆ.

ಕಲ್ಯಾಣಿ ಅಶುಚಿತ್ವದ ಬಗ್ಗೆ ಮಾಧ್ಯಮಗಳ ವರದಿ ಹಾಗೂ ಇಲಾಖೆಯ ಆಯುಕ್ತ ವೆಂಕಟೇಶ್ ನೀಡಿದ ತುರ್ತು ಸೂಚನೆಯಂತೆ ಮೇಲುಕೋಟೆಗೆ ಭೇಟಿ ನೀಡಿದ ಅವರು ಕಲ್ಯಾಣಿಯ ಮೆಟ್ಟಿಲುಗಳು, ಭುವನೇಶ್ವರಿ ಮಂಟಪ, ವಾಹನ ಪಾರ್ಕಿಂಗ್ ಸ್ಥಳ ಹಾಗೂ ಎಲ್ಲಾ ಕಡೆಯ ಪ್ರವೇಶ ದ್ವಾರಗಳನ್ನು ಪರಿಶೀಲಿಸಿದರು. ಪರಿಸರದ ಅಶುಚಿತ್ವ ಕಂಡು ತೀವ್ರ ಬೇಸರ ವ್ಯಕ್ತಪಡಿಸಿದ ಅವರು ಕಲ್ಯಾಣಿಯ ಸುತ್ತಲೂ ಯಾರೂ ಅತಿಕ್ರಮ ಪ್ರವೇಶಿಸದಂತೆ ರಕ್ಷಣಾ ಬೇಲಿ ಅಳವಡಿಸಲಾಗುತ್ತದೆ. ಪ್ರವೇಶ ದ್ವಾರಗಳಲ್ಲಿ ಗೇಟ್ ಅಳವಡಿಸುವ ಮೂಲಕ ಪ್ರವಾಸಿ ವಾಹನಗಳು ಕಲ್ಯಾಣಿಯ ಆವರಣದೊಳಕ್ಕೆ ಪ್ರವೇಶಿಸದಂತೆ ಎಚ್ಚರ ವಹಿಸಲಾಗುತ್ತದೆ ಎಂದರು.

ಸ್ಥಳೀಯ ಕಾಲೇಜು ವಿದ್ಯಾರ್ಥಿಗಳ ಸಹಕಾರದಲ್ಲಿ ತಕ್ಷಣ ಸ್ವಚ್ಛತಾ ಜಾಗೃತಿ ಅಭಿಯಾನ ನಡೆಸಿ ಕಲ್ಯಾಣಿಯ ಮೆಟ್ಟಿಲುಗಳ ಮೇಲೆ ಬೆಳೆದಿರುವ ಗಿಡಗಂಟೆಗಳನ್ನು ಸ್ವಚ್ಛಗೊಳಿಸಿ ಮತ್ತೆ ಗಿಡಗಂಟೆಗಳು ಬೆಳೆಯದಂತೆ ಪಾಂಟಿಂಗ್ ಮಾಡಲಾಗುತ್ತದೆ. ಕಲ್ಯಾಣಿಯ ಸ್ವಚ್ಛತೆ ಕಾಪಾಡುವ ಸಂಬಂಧ ಹೆಚ್ಚಿನ ಸೂಚನಾಫಲಕ ಅಳವಡಿಸುವ ಜೊತೆಗೆ ಪಾರಂಪರಿಕ ಶೈಲಿಯ ಕಸದ ಡಬ್ಬಿಗಳನ್ನು ಅಳವಡಿಸಲಾಗುತ್ತದೆ. ಇಲಾಖೆ ಮತ್ತು ಭದ್ರತಾಸಿಬ್ಬಂದಿಯನ್ನೂ ಸಹ ನೇಮಿಸಲಾಗುತ್ತದೆ. ಪ್ರವಾಸಿವಾಹನಗಳ ಶುಲ್ಕ ಪಡೆಯುವ ಗ್ರಾಮ ಪಂಚಾಯತ್ ಮತ್ತು ಚಲನ ಚಿತ್ರೀಕರಣಗಳ ಶುಲ್ಕ ಪಡೆಯುವ ದೇವಾಲಯದ ಆಡಳಿತ ಭವ್ಯ ಸ್ಮಾರಕಗಳನ್ನು ಹೊಂದಿರುವ ಕಲ್ಯಾಣಿ ಸಮುಚ್ಛಯದ ನಿರಂತರ ಸ್ವಚ್ಛತಾ ನಿರ್ವಹಣೆಗೆ ತಕ್ಷಣದಿಂದಲೇ ವ್ಯವಸ್ಥೆ ಮಾಡಬೇಕೆಂದು ಪತ್ರ ಬರೆಯಲಾಗುತ್ತದೆ ಎಂದರು.

ಕಲ್ಯಾಣಿಯ ಪರಿಸರ ಸ್ವಚ್ಛತೆ ಹಾಗೂ ಭವ್ಯ ಸ್ಮಾರಕಗಳ ರಕ್ಷಣೆಯ ಸಂಬಂಧ ಸಭೆ ನಡೆಸಲು ಕೋರಿ ಪ್ರಾಚ್ಯವಸ್ತು ಇಲಾಖೆಯಿಂದ ಮಂಡ್ಯ ಜಿಲ್ಲಾಧಿಕಾರಿಗಳನ್ನು ಕೋರಲಾಗುತ್ತದೆ. ಕಲ್ಯಾಣಿಯ ಅಶುಚಿತ್ವದ ಸ್ಥಿತಿಗತಿ ಕೈಗೊಳ್ಳಬೇಕಾದ ನಿರಂತರ ಸ್ವಚ್ಛತೆ ಹಾಗೂ ರಕ್ಷಣಾ ಕ್ರಮದ ಸಮಗ್ರ ವರದಿಯನ್ನು ಆಯುಕ್ತರಿಗೆ ಸಲ್ಲಿಸಲಾಗುತ್ತದೆ. ನಮ್ಮ ಆಯುಕ್ತರೂ ಸಹ ಕಲ್ಯಾಣಿಯ ಪರಿಸರ ರಕ್ಷಣೆಗೆ ಕಾಯಕಲ್ಪ ನೀಡಲು ಆಸಕ್ತಿವಹಿಸಿದ್ದಾರೆ. ಮೇಲುಕೋಟೆಯ ಪದವಿ ಕಾಲೇಜಿನಲ್ಲಿ ಹೆರಿಟೇಜ್ ಕ್ಲಬ್ ಆರಂಭಿಸಿ ಕಾಲೇಜು ವಿದ್ಯಾರ್ಥಿಗಳನ್ನು ಸ್ಮಾರಕ ರಕ್ಷಣೆಯಲ್ಲಿ ತೊಡಗಿಸಲಾಗುತ್ತದೆ ಎಂದರು.

ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ನಂಜೇಗೌಡ ಮಾತನಾಡಿ ಕಲ್ಯಾಣಿಯ ಸುತ್ತ ರಕ್ಷಣಾ ಬೇಲಿ ಅಳವಡಿಸಿ ಸೂಕ್ತ ರಕ್ಷಣೆಮಾಡಿ, ಮೆಟ್ಟಿಲುಗಳ ಮೇಲೆ ಗಿಡಗಂಟೆಗಳು ಬೆಳೆಯದಂತೆ ಪ್ರಾಚ್ಯವಸ್ತು ಇಲಾಖೆಯಿಂದ ಮಾಡಿಕೊಟ್ಟರೆ ನಿರಂತರ ಸ್ವಚ್ಛತೆಗೆ ಕ್ರಮ ವಹಿಸಲಾಗುತ್ತದೆ. ತೆಪ್ಪಕೊಳವನ್ನು ಜೀರ್ಣೋದ್ಧಾರ ಮಾಡಿ ಮಂಟಪದ ಮುಂಭಾಗ ರೈತರ ಬೆಳಗಿನ ಮಾರುಕಟ್ಟೆ ಮಾಡಲು ಗ್ರಾಮಪಂಚಾಯಿತಿ ಆಸಕ್ತಿ ವಹಿಸಿದೆ ಇದಕ್ಕೆ ಇಲಾಖೆ ಅನುಮತಿ ನೀಡಬೇಕು ಎಂದರು.

ತೆಪ್ಪಕೊಳ, ದುರಸ್ತಿ ಕಾರ್ಯ ಪ್ರಗತಿಯಲ್ಲಿರುವ ಚೆಲುವನಾರಾಯಣ ಸ್ವಾಮಿಯವರ ಪುರಾತನ ವಾಹನೋತ್ಸವ ಮಂಟಪ, ಹಾಗೂ ಇತರ ಪ್ರಾಚ್ಯವಸ್ತು ಸ್ಥಳಗಳನ್ನು ವೀಕ್ಷಿಸಿದ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಮೇಲುಕೋಟೆಯ ಎಲ್ಲಾ ಪುರಾತನ ಕಟ್ಟಡಗಳನ್ನೂ ಪರಂಪರೆಯ ಕೊಂಡಿಯಾಗಿ ಉಳಿಸಲು ಅಗತ್ಯ ಕ್ರಮ ಜರುಗಿಸಲಾಗುತ್ತದೆ. ಮೇಲುಕೋಟೆಯ ನಾಗರಿಕರು ಅಗತ್ಯ ಸಹಕಾರ ನೀಡಬೇಕು ಎಂದರು ಈವೇಳೆ ಪ್ರಾಚ್ಯವಸ್ತು ಇಲಾಖೆಯ ಇಂಜಿನಿಯರ್ ಸತೀಶ್, ದೇವಾಲಯದ ಆಡಳಿತ ಮಂಡಳಿ ಸಿಬ್ಬಂದಿ ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: