ಕರ್ನಾಟಕಪ್ರಮುಖ ಸುದ್ದಿ

ಉಗ್ರ ಸಂಘಟನೆಗಳ ಹತ್ತಿಕ್ಕಲು ಅಕ್ಟೋಪಸ್ ಪಡೆ ರಚನೆ: ರಾಜ್ಯ ಸರ್ಕಾರಕ್ಕೆ ಎಸ್‍ಐಟಿ ವರದಿ?

ಬೆಂಗಳೂರು (ಆ.28): ಮತೀಯ ಸಂಘಟನೆಗಳ ಚಟುವಟಿಕೆ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಗೆ ನಡೆಯುವ ವಿಚಾರವಾದಿಗಳ ಹತ್ಯೆಗಳು ಹಾಗೂ ಭಯೋತ್ಪಾದಕ ಪ್ರಕರಣಗಳಲ್ಲಿ ರಾಜ್ಯ ಪೊಲೀಸರು ತಾಳಿರುವ ಉದಾಸೀನತೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ವಿಶೇಷ ತನಿಖಾ ದಳ-ಎಸ್‌ಐಟಿ, ತನಿಖಾ ಸುಧಾರಣೆ ಸಂಬಂಧ ಹಿರಿಯ ಅಧಿಕಾರಿಗಳಿಗೆ ಸಮಗ್ರ ವರದಿ ಸಲ್ಲಿಸಿದ್ದು, ರಾಜ್ಯದಲ್ಲಿ ಆಕ್ಟೊಪಸ್ ಪಡೆ ರಚಿಸುವಂತೆ ಶಿಫಾರಸು ಮಾಡಿದೆ.

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಕೊಲೆ ಪ್ರಕರಣದ ಆರೋಪಿಗಳನ್ನು ಸೆರೆ ಹಿಡಿಯುವ ಮೂಲಕ ದೇಶದಲ್ಲಿ ಹರಡಿದ್ದ ಸೈದ್ಧಾಂತಿಕ ಭಿನ್ನಾಭಿಪ್ರಾಯಕ್ಕಾಗಿ ವಿಚಾರವಾದಿಗಳ ಹತ್ಯೆ ಜಾಲದ ‘ವ್ಯೂಹ’ ಛಿದ್ರಗೊಳಿಸುವಲ್ಲಿ ಯಶಸ್ವಿಯಾದ ಎಸ್‌ಐಟಿ, ಈಗ ತೆಲಂಗಾಣ ಹಾಗೂ ಆಂಧ್ರಪ್ರದೇಶದ ‘ಅಕ್ಟೋಪಸ್‌ – ಆರ್ಗನೈಸೇಶನ್‌ ಫಾರ್‌ ಕೌಂಟರ್‌ ಟೆರರಿಸ್ಟ್‌ ಆಪರೇಷನ್‌’ ಮಾದರಿಯಲ್ಲಿ ರಾಜ್ಯದಲ್ಲಿ ಉಗ್ರ ನಿಗ್ರಹ ಪಡೆ ಸ್ಥಾಪಿಸುವ ಅಗತ್ಯವನ್ನು ಒತ್ತಿ ಹೇಳುವ ವರದಿ ನೀಡಿದೆ.

ದೇಶದಲ್ಲಿ ಮತೀಯ ಮತ್ತು ಭಯೋತ್ಪಾದಕ ಸಂಘಟನೆಗಳ ಪತ್ತೇದಾರಿಕೆಯಲ್ಲಿ ಹೆಸರು ಗಳಿಸಿರುವ ತೆಲಂಗಾಣ ಹಾಗೂ ಆಂಧ್ರಪ್ರದೇಶ ಪೊಲೀಸ್‌ ಮಾದರಿಯಲ್ಲಿ ನಮ್ಮಲ್ಲೂ ವ್ಯವಸ್ಥೆ ರೂಪಿಸಬೇಕಿದೆ. ಇದಕ್ಕೆ ಅಗತ್ಯವಾದ ತರಬೇತಿ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಎಸ್‌ಐಟಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಇಷ್ಟೇ ಅಲ್ಲದೆ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ನಿರ್ದಿಷ್ಟಸಂಘಟನೆಗಳ ಕುರಿತ ದತ್ತಾಂಶವು ಪೊಲೀಸ್‌ ಇಲಾಖೆಯಲ್ಲಿ ಸಮಗ್ರವಾಗಿ ಲಭ್ಯವಿಲ್ಲ. ಏನಾದರೂ ಘಟನೆಗಳು ಸಂಭವಿಸಿದರೆ ಹೊರ ರಾಜ್ಯಗಳ ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ನೆರವು ಪಡೆಯಬೇಕಾಗುತ್ತದೆ. ಇಂತಹ ಮೂಲಭೂತ ಸಮಸ್ಯೆಗಳು ತನಿಖಾ ಮೇಲೆ ಪರಿಣಾಮ ಉಂಟು ಮಾಡುತ್ತಿದೆ. ಆದರೆ ಭಯೋತ್ಪಾದಕ ಸಂಘಟನೆಗಳ ಮೇಲೆ ನಿಗಾವಹಿಸಲೆಂದೇ ರಚಿತವಾಗಿರುವ ಆಂತರಿಕ ಭದ್ರತಾ ವಿಭಾಗ ಹಾಗೂ ಗುಪ್ತದಳದ ಕಾರ್ಯನಿರ್ವಹಣೆ ಕುರಿತು ನೇರವಾಗಿ ಅಸಮಾಧಾನ ವ್ಯಕ್ತಪಡಿಸದ ಎಸ್‌ಐಟಿ, ಭವಿಷ್ಯದ ದೃಷ್ಟಿಯಿಂದ ರಾಜ್ಯದ ಮತೀಯ ಸಂಘಟನೆಗಳ ಬಗ್ಗೆ ನಿಗಾವಹಿಸುವುದು ಅಗತ್ಯವಿದೆ ಎಂದು ಸ್ಪಷ್ಟನುಡಿಗಳಲ್ಲಿ ಅಭಿಪ್ರಾಯ ತಿಳಿಸಿದೆ ಎನ್ನಲಾಗಿದೆ. (ಎನ್.ಬಿ)

Leave a Reply

comments

Related Articles

error: