ಪ್ರಮುಖ ಸುದ್ದಿ

ಮಹದಾಯಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ : ಒಟ್ಟಾಗಿ ಹೋರಾಟ ಮುಂದುವರಿಸೋಣ : ವಿಪಕ್ಷಗಳಿಗೆ ಸಚಿವ ಡಿಕೆಶಿ ಮನವಿ

ರಾಜ್ಯ(ಬೆಂಗಳೂರು)ಆ.28:- ಮಹಾದಾಯಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಕ್ಕೆ ಅನ್ಯಾಯವಾಗಿದೆ. ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ನಾವು ಒಟ್ಟಾಗಿ ಹೋರಾಟ ಮುಂದುವರೆಸೋಣ ಎಂದು ವಿಪಕ್ಷಗಳಿಗೆ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಡಿ.ಕೆ ಶಿವಕುಮಾರ್, ಹಸಿರುಪೀಠದ ಮುಂದೆ ಹೋಗಲು ಗೋವಾ ನಿರ್ಧಾರ ಮಾಡಿದೆ.  ಬೇರೆ ರಾಜ್ಯದ ಬಗ್ಗೆ ನನಗೇನು ಗೊತ್ತಿಲ್ಲ. ಆದರೆ ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಹೀಗಾಗಿ ಶೀಘ್ರದಲ್ಲೇ ಅಧಿಕಾರಿಗಳ ಜೊತೆ ಸ್ಪಾಟ್ ವಿಸಿಟ್  ಮಾಡುತ್ತೇವೆ.  ಸ್ಥಳ ಪರಿಶೀಲನೆ ಬಳಿಕ ಸಿಎಂ ಜೊತೆ ಸಭೆ ಮಾಡುತ್ತೇವೆ. ಸಿಎಂ ಜೊತೆ ಚರ್ಚೆಯ ನಂತರ ಮುಂದಿನ‌ ಹೆಜ್ಜೆಯಿಡುತ್ತೇವೆ ಎಂದು ತಿಳಿಸಿದ್ದಾರೆ.

ಗೋವಾದವರು ಏನಾದರೂ ಮಾಡಿಕೊಳ್ಳಲಿ. ನಮ್ಮ ರಾಜ್ಯದ ಹಿತ ಕಾಪಾಡುವುದು ನಮಗೆ ಮುಖ್ಯ. ಇದಕ್ಕಾಗಿ ನಾವು ಏನು ಬೇಕಾದರೂ ತ್ಯಾಗ ಮಾಡಲು ಸಿದ್ಧ. ಹೋರಾಟ ಮಾಡಲು ನಾವು ಸಿದ್ಧರಿದ್ದೇವೆ. ಎಲ್ಲಾ ಪಕ್ಷದ ಮುಖಂಡರಿಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ.  ನಮ್ಮ ರಾಜ್ಯಕ್ಕೆ ಅನ್ಯಾಯ ಆಗಿದೆ. ಇದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಇದರಲ್ಲಿ ರಾಜಕೀಯ ಮಾಡುವುದು ಬೇಡ. ನಾವು ಒಟ್ಟಾಗಿ ಹೋರಾಟ ಮುಂದುವರೆಸೋಣ ಎಂದು  ವಿಪಕ್ಷಗಳಿಗೆ ಸಚಿವ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರ ಸಂಬಂಧ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ಹೈಕಮಾಂಡ್ ನಿಂದ ಬುಲಾವ್ ಬಂದಿದೆಯೇ ಎಂದು ಪ್ರಶ್ನಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: