ಮೈಸೂರು

ಜಕಣಾಚಾರಿ ಸಂಸ್ಮರಣಾ ದಿನಾಚರಣೆ: ‘ಬೇಲೂರು ಚಲೋ’ ಡಿ.28′

ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಅಂಗವಾಗಿ ಬೇಲೂರಿನ ಚೆನ್ನಕೇಶವ ದೇವಾಲಯದಲ್ಲಿ ಜಕಣಾಚಾರಿ ಪ್ರತಿಮೆ ಪ್ರತಿಷ್ಠಾಪಿಸಲು ಒತ್ತಾಯಿಸಿ ಹಾಸನದಿಂದ ಬೇಲೂರಿನವರೆಗೂ ಪಾದಯಾತ್ರೆಯಲ್ಲಿ ‘ಬೇಲೂರು ಚಲೋ’ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾಧ್ಯಕ್ಷ ಎನ್. ನಂದಕುಮಾರ್ ತಿಳಿಸಿದರು.

ಅವರು, ಗುರುವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಡಿ.28 ರಂದು 11 ಗಂಟೆಗೆ ಹಾಸನದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ  ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳು ಜರುಗಲಿದ್ದು   ಗೃಹಸಚಿವ ಡಾ. ಜಿ. ಪರಮೇಶ್ವರ್ ಉದ್ಘಾಟಿಸುವರು. ವಿಶ್ವಕರ್ಮ ಪೀಠಾಧಿಪತಿ ಸಾನಿಧ್ಯ ವಹಿಸುವರು. ಮಠಾಧಿಪತಿ ಒಕ್ಕೂಟದ ಅಧ್ಯಕ್ಷ ಕಾಳಹಸ್ತೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸುವರು. ಬೇಲೂರಿನ ಶಾಸಕ ವೈ.ಎನ್. ರುದ್ರೇಶ್ ಗೌಡ ಧ್ವಜಾರೋಹಣ ನೆರವೇರಿಸಲಿದ್ದಾರೆ. ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ. ನಂಜುಂಡಿ ಉಪಸ್ಥಿತರಿರುವರು.

ಪಾದಯಾತ್ರೆ: ಜವಳಿ ಮತ್ತು ಮುಜರಾಯಿ ಖಾತೆ ಸಚಿವ ರುದ್ರಪ್ಪ ಲಂಬಾಣಿ ಹಾಗೂ ಹಿರಿಯ ಮುಖಂಡ ಸಿ.ಎಂ. ಇಬ್ರಾಹಿಂ ಪಾದಯಾತ್ರೆಗೆ ಚಾಲನೆ ನೀಡುವರು.

ಪಾದಯಾತ್ರಿಗಳು ಡಿ.31ರಂದು ಬೇಲೂರು ತಲುಪಲಿದ್ದಾರೆ ಜ.1ರಂದು ರಾಜ್ಯಮಟ್ಟದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಬೇಲೂರಿನ ಚೆನ್ನಕೇಶವ ದೇವಸ್ಥಾನದ ಮುಂಭಾಗದ ಬೃಹತ್ ಮೈದಾನದಲ್ಲಿ ಹಮ್ಮಿಕೊಂಡಿದ್ದು 50 ರಿಂದ 60 ಸಾವಿರ ಸಮಾಜ ಬಾಂಧವರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.

ರಾಜ್ಯದ ಒಂದು ವಿವಿಗೆ ಜಕಣಾಚಾರಿ ಹೆಸರಿಡಲು ಒತ್ತಾಯಿಸಲಾಗುವುದು ಹಾಗೂ ಆತನ ಜೀವಾಧಾರಿತ ದಾಖಲೆಗಳನ್ನು ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವಿಶ್ವಕರ್ಮ ಸಮಾಜದ ಮುಖಂಡರಾದ ಶ್ರೀಕಂಠ ನಾಗರಾಜು, ಮೈಸೂರು ತಾಲ್ಲೂಕಾಧ್ಯಕ್ಷ ಬಸವರಾಜು, ವಿಶ್ವಕರ್ಮ ನಿಗಮ ಮಂಡಳಿ ನಿರ್ದೇಶಕ ಬಸವರಾಜು ಉಪಸ್ಥಿತರಿದ್ದರು.

Leave a Reply

comments

Related Articles

error: