ಪ್ರಮುಖ ಸುದ್ದಿ

ತೋಟಗಾರಿಕೆ ಹಾನಿಗೆ ವಿಶೇಷ ಪರಿಹಾರ ಪ್ಯಾಕೇಜ್ ಬೇಕು : ಕೃಷಿ ಸಚಿವ ಶಿವಶಂಕರ ರೆಡ್ಡಿ

ರಾಜ್ಯ(ಮಡಿಕೇರಿ) ಆ.29 :- ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ತೋಟಗಾರಿಕಾ ಕ್ಷೇತ್ರಕ್ಕೆ 82 ಕೋಟಿ ರೂ.ಗಳಷ್ಟು ನಷ್ಟವಾಗಿದ್ದು, ‘ವಿಶೇಷ ಪರಿಹಾರ ಪ್ಯಾಕೇಜ್’ ಘೋಷಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುವುದಾಗಿ ಕೃಷಿ ಸಚಿವ ಶಿವಶಂಕರ ರೆಡ್ಡಿ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 12 ಸಾವಿರ ಹೆಕ್ಟೇರ್ ತೋಟಗಾರಿಕಾ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ ಎಂದರು. ನೂತನ ತಂತ್ರಜ್ಞಾನದ ಆ್ಯಪ್ ಬಳಸಿ ಬೆಳೆ ನಷ್ಟದ ಕುರಿತು ಸರ್ವೇ ಮತ್ತು ಸಮೀಕ್ಷೆ ನಡೆಸಿ ವರದಿ ತಯಾರಿಸಲಾಗುವುದು ಎಂದು ಸಚಿವರು ತಿಳಿಸಿದರು.

ಜಿಲ್ಲಾ ವ್ಯಾಪ್ತಿಯ 8500 ಹೆಕ್ಟೇರ್ ಕರಿಮೆಣಸು, 800 ಹೆಕ್ಟೇರ್ ಬಾಳೆ, 600 ಹೆಕ್ಟೇರ್ ಶುಂಠಿ, 1200 ಹೆಕ್ಟೇರ್ ಅಡಿಕೆ, 9800 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿ, 4000 ಹೆಕ್ಟೇರ್ ಪ್ರದೇಶದ ಮೆಕ್ಕೆಜೋಳ ನಾಶವಾಗಿದೆ. ಎಲ್ಲವೂ ಒಟ್ಟಾಗಿ 35 ಸಾವಿರ ಹೆಕ್ಟೇರ್ ಪ್ರದೇಶದ ಕೃಷಿ ಬೆಳೆ ನಾಶವಾಗಿದೆ. ಕಾಫಿ ಬೆಳೆ ಶೇ.90 ರಷ್ಟು ಭಾಗ ನಷ್ಟವಾಗಿದ್ದು, ಇದರ ಅಂದಾಜು 350 ಕೋಟಿ ರೂ. ಎಂದು ಅಂದಾಜಿಸಿರುವುದಾಗಿ ಮಾಹಿತಿ ನೀಡಿದರು.

ದಾಖಲೆ ಮಳೆ

ಆಗಸ್ಟ್ ಒಂದು ತಿಂಗಳಿನಲ್ಲೆ ಕೊಡಗಿನಲ್ಲಿ 900 ಮಿ.ಮೀ.ಗೂ ಅಧಿಕ ಮಳೆಯಾಗಿದ್ದು, ಪ್ರಕೃತಿ ವಿಕೋಪ ಸಂಭವಿಸಿದ ಒಂದು ವಾರದಲ್ಲಿ ದಾಖಲೆಯ 450 ಮಿ.ಮೀ. ಮಳೆಯಾಗಿದೆಯೆಂದು ಸಚಿವ ಶಿವಶಂಕರ್ ರೆಡ್ಡಿ ತಿಳಿಸಿದರು. ತೋಟಗಾರಿಕಾ ಬೆಳೆಗಳ ನಷ್ಟದ ಸಮೀಕ್ಷೆ ನಡೆಸಲು ಈಗಾಗಲೆ 60 ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಶೇ.30 ರಷ್ಟು ಸರ್ವೇ ಕಾರ್ಯ ಪೂರ್ಣಗೊಂಡಿದೆ. ಇನ್ನು 15 ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಂಡು ಅಧಿಕಾರಿಗಳು ವರದಿ ನೀಡಲಿದ್ದಾರೆ ಎಂದು ಸಚಿವರು ತಿಳಿಸಿದರು. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮುಂದಿನ 15 ದಿನಗಳಲ್ಲಿ ಪರಿಹಾರ ವಿತರಿಸುವ ಪ್ರಕ್ರಿಯೆ ನಡೆಯಲಿದೆ ಎಂದರು.

ಶಾಸಕ ಅಪ್ಪಚ್ಚು ರಂಜನ್ ಈ ಸಂದರ್ಭ ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: