ಪ್ರಮುಖ ಸುದ್ದಿ

ಅಸಂಘಟಿತ ವಲಯಕ್ಕೆ ಸಾಮಾಜಿಕ ಭದ್ರತೆ ನೀಡದ ಮಾಸಿಕ ಪಿಂಚಣಿ ಯೋಜನೆ ರದ್ದುಗೊಳಿಸಲು ಒತ್ತಾಯ

ರಾಜ್ಯ( ಬೆಂಗಳೂರು)ಆ.29:- ಅಸಂಘಟಿತ ವಲಯಕ್ಕೆ ಸಾಮಾಜಿಕ ಭದ್ರತೆ ನೀಡದ ಮಾಸಿಕ ಪಿಂಚಣಿ ಯೋಜನೆ ರದ್ದುಗೊಳಿಸಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳಿಗೆ ಒತ್ತಾಯಿಸಿ ಧರಣಿ ನಡೆಸಲಾಯಿತು.

ನಗರದ ಮೌರ್ಯ ವೃತದ ಬಳಿ ಕರ್ನಾಟಕ ರಾಜ್ಯ ಪಿಂಚಣಿ ಪರಿಷತ್ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಸ್ವಾತಂತ್ರ್ಯ ಉದ್ಯಾನವನದವರೆಗೂ ಮೆರವಣಿಗೆ ನಡೆಸಿ, ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕೆಂದು ಆಗ್ರಹಿಸಿದರು. ಅಸಂಘಟಿತ ವಲಯದಲ್ಲಿರುವ ಎಲ್ಲರ ಸಾಮಾಜಿಕ ಭದ್ರತೆ ಮತ್ತು ಘನತೆಯ ಬದುಕಿನ ರಕ್ಷಣೆಗೆ ಬೇಕಾದಷ್ಟು ಮೊತ್ತದ ಮಾಸಿಕ ಪಿಂಚಣಿ ಯೋಜನೆಯನ್ನು ಸರ್ಕಾರವು ಜಾರಿಗೊಳಿಸುವ ಹಕ್ಕೊತ್ತಾಯ ಇಟ್ಟಿದ್ದವು. ಅದರಂತೆಯೇ, ಮನಸ್ವಿನಿ ಹಾಗೂ ಮೈತ್ರಿ ಎಂಬ ಎರಡು ಪಿಂಚಣಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಧರಣಿ ನಿರತರು ಹೇಳಿದರು. ದೇಶದಲ್ಲಿ ಶೇ 84 ರಷ್ಟು ಜನರು ಅಸಂಘಟಿತ ವಲಯದಲ್ಲಿ ಶ್ರಮಿಸುತ್ತಿದ್ದಾರೆ. ಆದರೆ, ಅವರಿಗೆ ಯಾವುದೇ ಭದ್ರತೆ ಸಿಗುತ್ತಿಲ್ಲ. ಪಿಂಚಣಿ, ಇಎಸ್‌ಐ ಸೇರಿದಂತೆ ಹಲವು ಸೌಲಭ್ಯಗಳಿಂದಲೂ ಅವರು ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಸಾಮಾಜಿಕ ಭದ್ರತೆಯ ಭಾಗವಾದ ಪಿಂಚಣಿ ಸೌಲಭ್ಯವನ್ನು ಸಾರ್ವತ್ರಿಕರಣಗೊಳಿಸಬೇಕು ಎಂದು ಮನವಿ ಮಾಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: