ಸುದ್ದಿ ಸಂಕ್ಷಿಪ್ತ

ಸಂತ್ರಸ್ತ ದಿಡ್ಡಳ್ಳಿ ಹಾಡಿ ಜನರಿಗೆ ಸಾಂತ್ವನ ಹೇಳಲು ತೆರಳಲಿರುವ 100 ಜನರ ತಂಡ

ಕೊಡಗು ಜಿಲ್ಲೆ ವಿರಾಜಪೇಟೆಯ ದಿಡ್ಡಳ್ಳಿ ಹಾಡಿಯಲ್ಲಿ ವಾಸಮಾಡಲು ಕಟ್ಟಿಕೊಂಡಿದ್ದ 577 ಕುಟುಂಬಗಳ ಗುಡಿಸಲುಗಳನ್ನು ನೆಲಸಮಗೊಳಿಸಿರುವ ಸರ್ಕಾರದ ನಿರ್ಧಾರ ಖಂಡನಾರ್ಹ. ಗುಡಿಸಲುಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿರುವ ಕುಟುಂಬಗಳಿಗೆ ಸಾಂತ್ವನ ಹೇಳಲು ಸಂಘಟನೆ ವತಿಯಿಂದ ಡಿಸೆಂಬರ್ 23 ರಂದು 100 ಜನರ ತಂಡ ಭೇಟಿ ನೀಡುತ್ತಿರುವುದಾಗಿ ಕರ್ನಾಟಕ ರಾಜ್ಯ ಮೂಲ ಆದಿವಾಸಿಗಳ ರಕ್ಷಣಾ ವೇದಿಕೆ ತಿಳಿಸಿದೆ.

1972 ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ನಾಗರಹೊಳೆ ಮತ್ತು ಬಂಡೀಪುರಗಳನ್ನು ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಿದಾಗ ಆ ಪ್ರದೇಶದಲ್ಲಿ ನೆಲೆಸಿದ್ದ ಆದಿವಾಸಿಗಳನ್ನು ಏಕಾಏಕಿ ಎತ್ತಂಗಡಿಗೊಳಿಸಲಾಯಿತು. ಆದಿವಾಸಿಗಳು ಭಯಪಟ್ಟು ಚೆಲ್ಲಾಪಿಲ್ಲಿಯಾಗಿ ಓಡಿಹೋದರು. ಹೀಗೆ ಸರ್ಕಾರ ಮಾಡಿದ ತಪ್ಪಿನಿಂದಾಗಿ ಆದಿವಾಸಿಗಳು ಕಾಫಿ ತೋಟ ಮತ್ತಿತರ ಕಡೆ ಜೀತದಾಳುಗಳಾಗಿ ಸೇರಿಕೊಳ್ಳುವ ಪರಿಸ್ಥಿತಿ ಬಂತು.

ನಂತರ ಈ ಆದಿವಾಸಿಗಳು ಸಂಘಟಿತರಾಗಿ ಹೋರಾಡಿದ ಪರಿಣಾಮವಾಗಿ ಆದಿವಾಸಿಗಳ ಬೇಡಿಗೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಅರಿವಾದ ಕಾರಣ “ಅನುಸೂಚಿತ ಬುಡಕಟ್ಟುಗಳು 4 ಇತರೆ ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ ಆದೇಶ – ನಿಯಮ 2006 (200762) ಮತ್ತು ನಿಯಮಗಳು 2008 (ನಿಯಮಗಳಿಗೆ ತಿದ್ದುಪಡಿ 2012) ಕಾಯ್ದೆ ಅಸ್ತಿತ್ವಕ್ಕೆ ಬಂದಿದೆ.

ಆದರೆ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದ ಕಾಯ್ದೆಯನ್ನು ತಿರುಚಿದ್ದು, ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿಲ್ಲ. ಇತರ ರಾಜ್ಯಗಳಲ್ಲಿ ಶೇಕಡಾ 90ರಷ್ಟು ಕಾಯ್ದೆ ಅನುಷ್ಠಾನಗೊಂಡಿದ್ದರೆ ಕರ್ನಾಟಕದಲ್ಲಿ ಕಾಯ್ದೆಯ ಸಮರ್ಪಕ ಅನುಷ್ಠಾನವಾಗದೆ ಆದಿವಾಸಿಗಳ ಮಾರಣ ಹೋಮ ನಡೆಯುತ್ತಿದೆ ಎಂದು ಸಂಘಟನೆ ಆರೋಪಿಸಿದೆ.

ಶಾಸಕರಾದ ಕೆ.ಜಿ. ಬೋಪಯ್ಯ ಅವರೂ ಘಟನೆಯ ಕುರಿತು ಸಮರ್ಪಕ ಮಾಹಿತಿ ಇಲ್ಲದೆ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯನ್ನು ಸಂಘಟನೆ ಖಂಡಿಸುತ್ತದೆ. ಶಾಸಕರಾದವರು ತಮ್ಮ ಜವಾಬ್ದಾರಿ ಅರಿತು ಮಾತನಾಡಬೇಕು ಎಂದು ಸಂಘಟನೆಯ ಸದಸ್ಯರು ಆಗ್ರಹಿಸಿದ್ದಾರೆ.

Leave a Reply

comments

Related Articles

error: