ಪ್ರಮುಖ ಸುದ್ದಿ

ಗುಂಡ್ಲುಪೇಟೆಯ ಕಾಡಂಚಿನ ಭಾಗದಲ್ಲಿ ತ್ಯಾಜ್ಯ ಸುರಿಯುವ ಅಪಾಯಕಾರಿ ದಂದೆ ಮತ್ತೆ ಆರಂಭ : ಗ್ರಾಮಸ್ಥರಲ್ಲಿ ಆತಂಕ

ರಾಜ್ಯ(ಚಾಮರಾಜನಗರ)ಆ.29:-  ಕೇರಳದ ಕಸಾಯಿಖಾನೆ ಮತ್ತು ಖಾಸಗಿ ನರ್ಸಿಂಗ್ ಹೋಂ ಇತರೆ ಮೂಲದ ತ್ಯಾಜ್ಯವನ್ನು ಗಡಿ ತಾಲೂಕಾದ ಗುಂಡ್ಲುಪೇಟೆಯ ಕಾಡಂಚಿನ ಭಾಗದಲ್ಲಿ ವಿಲೇವಾರಿ ಮಾಡುವ ಅಕ್ರಮ ದಂದೆ ಮತ್ತೆ ಶುರುವಾಗಿದೆ. ಗಡಿ ಭಾಗದಲ್ಲಿ ಕಸ ತಂದು ಸುರಿಯುವ ಅಪಾಯಕಾರಿ ದಂದೆ ಮತ್ತೆ ಮುಂದುವರಿದಿರುವುದು ಕಾಡಂಚಿನ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.

ಗುಂಡ್ಲುಪೇಟೆ ಪಟ್ಟಣದ ಕಲ್ಯಾಣಿ ಕೊಳದ ಬಳಿ ಖಾಸಗಿ ಜಮೀನು ಮಾಲೀಕರು ಕೇರಳದ ಕಸ ವಿಲೇವಾರಿಗೆ ಅವಕಾಶ ಮಾಡಿದ್ದು, ಜೆಸಿಬಿ ಯಂತ್ರದ ಸಹಾಯದಿಂದ ಆಳವಾಗಿ ತೆಗೆದ ಗುಂಡಿಯಲ್ಲಿ ಒಂದು ಲೋಡ್ ತ್ಯಾಜ್ಯವನ್ನು ತಂದು ಸುರಿದು ಮಣ್ಣು ಮುಚ್ಚಿರುವ ಪ್ರಕರಣ ಈಚೆಗೆ ಬೆಳಕಿಗೆ ಬಂದಿದೆ.

ಕೇರಳ ರಾಜ್ಯದಿಂದ ತಾಲೂಕಿನ ಕಡೆ ಯಾವುದೇ ವಾಹನ ಬರಬೇಕಾದರೂ ತನಿಖಾ ಠಾಣೆಗಳಲ್ಲಿ ತಪಾಸಣೆ ನಡೆಸಿಯೇ ಇತ್ತ ಸುಳಿಯಬೇಕು. ಹೀಗಿದ್ದರೂ ತ್ಯಾಜ್ಯ ತುಂಬಿದ ಲಾರಿಗಳು ತಾಲೂಕು ಪ್ರದೇಶವನ್ನು ಎಗ್ಗಿಲ್ಲದೇ ಪ್ರವೇಶಿಸುತ್ತಿವೆ. ಪರಿಸ್ಥಿತಿ ಹೀಗಿರುವಾಗ ಈ ದಂದೆಯಲ್ಲಿ ಯಾರು ಶಾಮೀಲಾಗಿದ್ದಾರೆ ಎಂಬುದನ್ನು ಸುಲಭವಾಗಿ ಊಹಿಸಬಹುದು. ಹತ್ತಿರ ಸುಳಿಯಲು ಸಾಧ್ಯವಾಗದ ಪ್ರಮಾಣದಲ್ಲಿ ತ್ಯಾಜ್ಯ ತುಂಬಿದ ಕಂಟೇನರ್ ಕೆಟ್ಟ ವಾಸನೆ ಬೀರುತ್ತದೆ. 100 ಮೀ. ಹೆಚ್ಚಿನ ಅಂತರದಲ್ಲೇ ವಾಸನೆ ತಿಳಿಯುತ್ತದೆ. ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿರುವ ಮೂಲೆಹೊಳೆ, ಮದ್ದೂರು ಬಳಿ ಅರಣ್ಯ ಇಲಾಖೆ ಮತ್ತು ಪೊಲೀಸ್ ಚೆಕ್‍ಪೋಸ್ಟ್‍ಗಳಿವೆ. ಇಲ್ಲಿ ವಾಹನಗಳನ್ನು ತಪಾಸಣೆ ಮಾಡಲಾಗುತ್ತದೆ. ಈ ರೀತಿ ಇದ್ದರೂ ತ್ಯಾಜ್ಯ ತುಂಬಿದ ವಾಹನ ರಾಜ್ಯಕ್ಕೆ, ಅದರಲ್ಲೂ ಪಟ್ಟಣದ ಹೊರವಲಯಕ್ಕೆ ಬಂದಿದ್ದು ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಕೇರಳವನ್ನು ರಸ್ತೆ ಮಾರ್ಗದಲ್ಲಿ ದೇಶದ ವಿವಿಧ ಮೂಲೆಗಳನ್ನು ಬೆಸೆಯುವುದು ರಾಷ್ಟ್ರೀಯ ಹೆದ್ದಾರಿ 766 ಆಗಿದೆ. ಹೀಗಾಗಿ ಕರ್ನಾಟಕ ಸೇರಿ ವಿವಿಧ ರಾಜ್ಯಗಳಿಂದ ಕೇರಳಕ್ಕೆ ಸರಕು ಸಾಗಣೆಯಾಗುತ್ತದೆ. ಹೀಗೆ ನಮ್ಮ ರಾಜ್ಯದಿಂದ ಸರಕು ತುಂಬಿಕೊಂಡು ಹೋದ ವಾಹನಗಳು ಸರಕು ಇಳಿಸಿ ಖಾಲಿ ಬರುವಾಗ, ಅಂತಹ ಲಾರಿಗಳನ್ನು ಗುರುತು ಮಾಡುವ ಮಧ್ಯವರ್ತಿಗಳು ಚಾಲಕ ಮತ್ತು ಕ್ಲೀನರ್‍ಗೆ ಹಣದಾಸೆ ತೋರಿಸಿ ತ್ಯಾಜ್ಯ ತುಂಬಿ ಕಳುಹಿಸುತ್ತಾರೆ. ಅದರಲ್ಲೂ ಕರ್ನಾಟಕದ ನೋಂದಣಿ ಸಂಖ್ಯೆ ಇರುವ ಸರಕು ಸಾಗಣೆ ವಾಹನಗಳೇ ಅವರ ಆಯ್ಕೆಯಾಗಿರುವ ಕಾರಣ ಹೊರಗೆ ಹೋಗುವ ವಾಹನಗಳೆಂದು ಕೇರಳ ಚೆಕ್‍ ಪೋಸ್ಟ್‍ನಲ್ಲಿ ತಪಾಸಣೆ ಮಾಡುವುದಿಲ್ಲ. ನಮ್ಮದೇ ರಾಜ್ಯದ ವಾಹನಗಳೆಂದು ಇಲ್ಲಿನ ಚೆಕ್‍ ಪೋಸ್ಟ್‍ಗಳಲ್ಲೂ ನಿರ್ಲಕ್ಷ್ಯ ವಹಿಸಲಾಗುತ್ತದೆ. ಅಲ್ಲದೇ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ರಾತ್ರಿ 9ಕ್ಕೆ ಸಂಚಾರ ಬಂದ್ ಆಗುವ ಸಮಯದಲ್ಲಿ ವೇಗವಾಗಿ ಸಾಗಿ ಬರುವ ವಾಹನಗಳ ನಡುವೆ ತ್ಯಾಜ್ಯ ತುಂಬಿದ ಲಾರಿಯನ್ನು ಪಾಸ್ ಮಾಡುವ ಮಾರ್ಗ ಕಂಡುಕೊಳ್ಳಲಾಗಿದೆ. ಹೀಗಾಗಿ ರಾಜ್ಯದ ನೋಂದಣಿ ಸಂಖ್ಯೆ ಇರುವ ಕಂಟೇನರ್ ವಾಹನ ತ್ಯಾಜ್ಯ ಹೊತ್ತು ಬಂದಿದ್ದು, ಗಡಿ ದಾಟಿ ಬಂದರೆ ತ್ಯಾಜ್ಯ ತುಂಬಿದ ವಾಹನವನ್ನು ರಾಜ್ಯದ ಯಾವುದೇ ಮೂಲೆಗಾದರೂ ಕೊಂಡು ಹೋಗುವುದು ಸುಲಭ ಎಂಬುದು ದಂದೆಕೋರರಿಗೆ ತಿಳಿದಿದೆ.

ಹಾಗಾಗಿ ತಾಲೂಕಿನ ಕೆಲ ಮಧ್ಯವರ್ತಿಗಳ ಮೂಲಕವೇ ತಾಲೂಕಿನ ತೆರೆದ ಬಾವಿ, ಖಾಸಗಿಯವರ ಜಮೀನು, ವೀರನಪುರ ಬಳಿಯ ನಲ್ಲೂರು ಅಮಾನಿಕೆರೆ ಆವರಣ ಸೇರಿದಂತೆ ಹಲವಾರು ಭಾಗಗಳನ್ನು ತ್ಯಾಜ್ಯ ಸುರಿಯಲು ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ಇದರಿಂದ ದುಷ್ಪರಿಣಾಮ ತಪ್ಪಿದ್ದಲ್ಲ ಎಂಬಂತಾಗಿದೆ.

ತಾಲೂಕಿನಲ್ಲಿ ಬೆಳೆದ ಹೆಚ್ಚಿನ ತರಕಾರಿಯನ್ನು ವ್ಯಾಪಾರಸ್ಥರು ಕೇರಳಕ್ಕೆ ಕೊಂಡು ಹೋಗುತ್ತಾರೆ. ಟೀ ಎಸ್ಟೇಟ್ ಇತರೆ ತೋಟಗಳಿಗೆ ಬೇಕಾದ ಫಲವತ್ತತೆ ನೀಡುವ ಉತ್ತಮ ಗುಣಮಟ್ಟದ ಕೊಟ್ಟಿಗೆ ಗೊಬ್ಬರ ತಾಲೂಕಿನಿಂದ ಸಾಗಣೆ ಆಗುತ್ತದೆ. ಆದರೆ, ಆ ರಾಜ್ಯದ ಅಪಾಯಕಾರಿ ತ್ಯಾಜ್ಯವನ್ನು ಸುರಿಯಲು ಗುಂಡ್ಲುಪೇಟೆ ತಾಲೂಕನ್ನು ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಜನರಲ್ಲಿ ಬೇಸರ ಮೂಡಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: