ಪ್ರಮುಖ ಸುದ್ದಿ

ಹೂ ಮಾರುತ್ತಿದ್ದ ಬಾಲಕಿಯನ್ನು ನೋಡಿ ಮಿಡಿಯಿತು ನಾಡಿನ ದೊರೆಯ ಹೃದಯ

ರಾಜ್ಯ(ಮಂಡ್ಯ)ಆ.29:-  ರಸ್ತೆ ಬದಿ ಹೂ ಮಾರುತ್ತಿದ್ದ ಪುಟ್ಟ ಬಾಲಕಿಯನ್ನು ಕಂಡು ಕಾರು ನಿಲ್ಲಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಾಲಕಿಯ ಕಷ್ಟ ಸುಖ ವಿಚಾರಿಸಿ ವಿದ್ಯಾಭ್ಯಾಸದ ಬಗ್ಗೆ ಮಾಹಿತಿ ಪಡೆದ ಘಟನೆ ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲೂಕಿನ, ಬೆಳಗೂಳ ಗ್ರಾಮದ ಬಳಿ ನಡೆದಿದೆ.

ಇಂದು ಬೆಳಗ್ಗೆ ಕೆ.ಆರ್.ಎಸ್‌ನಿಂದ ರಾಮನಗರಕ್ಕೆ ಹೋಗುವ ಸಂದರ್ಭದಲ್ಲಿ ಬಾಲಕಿಯೊಬ್ಬಳು ಬೆಳಗೂಳ ಗ್ರಾಮದ ಬಳಿ ರಸ್ತೆ ಬದಿ  ಹೂವನ್ನು ಮಾರುತ್ತಿದ್ದಳು. ಚಿಕ್ಕ ಬಾಲಕಿ ಶಾಲೆಗೆ ಹೋಗುವುದು ಬಿಟ್ಟು ಹೂವನ್ನು ಮಾರುತ್ತಿರುವುದನ್ನು ಗಮನಿಸಿ ತಕ್ಷಣ ಚಾಲಕನಿಗೆ ಕಾರು ನಿಲ್ಲಿಸಲು ತಿಳಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮೊದಲು ಬಾಲಕಿಯ ಬಳಿ ಹೂವನ್ನು ಕೊಂಡುಕೊಂಡಿದ್ದಾರೆ. ನಂತರ ಬಾಲಕಿಯ ಬಳಿ ಆಕೆಯ ಕಷ್ಟ ಸುಖ ವಿಚಾರಿಸಿದ್ದಾರೆ. ಬಾಲಕಿ ಶಾಲೆಯ ರಜಾ ದಿನ ಮತ್ತು ಬಿಡುವಿನ ವೇಳೆ ಹೂವು ಮಾರುವುದಾಗಿ ತಿಳಿಸಿ ಮನೆಯ ಸಂಕಷ್ಟ ವಿವರಿಸಿದ್ದಾಳೆ. ಬಾಲಕಿಯ ಬಡತನದ ಬಗ್ಗೆ ಕೇಳಿ ಮರುಗಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸ್ಥಳದಲ್ಲಿದ್ದವರಿಗೆ ಬಾಲಕಿಯ ತಂದೆಗೆ ತನ್ನನ್ನು ಕಾಣುವಂತೆ ಸೂಚಿದ್ದಾರೆ. ಅಷ್ಟೇ ಅಲ್ಲದೇ ಬಾಲಕಿಯ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಭರವಸೆ ನೀಡಿ ಅಲ್ಲಿಂದ ತೆರಳಿದ್ದಾರೆ. ಸಿ.ಎಂ.ಕುಮಾರಸ್ವಾಮಿ‌ ಯವರು ಮಾತನಾಡಿಸಿದ್ದಕ್ಕೆ ಹೂ ಮಾರುತ್ತಿದ್ದ ಬಾಲಕಿ ಶಾಬಾಬ್ತಾಜ್ ಸಂತಸಗೊಂಡರೆ, ಸ್ಥಳೀಯರು ಸಿ.ಎಂ ಹೃದಯ ವೈಶಾಲ್ಯತೆ ಕಂಡು‌ ಮೂಕ ವಿಸ್ಮಿತರಾಗಿದ್ದಾರೆ. ಸ್ಥಳದಲ್ಲಿದ್ದವರೊಬ್ಬರು ಮುಖ್ಯಮಂತ್ರಿಗಳು ಬಾಲಕಿಯನ್ನು ಮಾತನಾಡಿಸುತ್ತಿರುವ ಫೋಟೋ ತೆಗೆದು ಅವರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: