ಮೈಸೂರು

ಪಾಲಿಕೆ ಚುನಾವಣೆ : ಶಾಂತ ರೀತಿಯ ಮತದಾನಕ್ಕಾಗಿ ನಗರದ ಪೊಲೀಸರಿಂದ ಎಲ್ಲಾ ರೀತಿಯ ಅಗತ್ಯ ಕ್ರಮ;ಡಾ.ಎ.ಸುಬ್ರಹ್ಮಣ್ಯೇಶ್ವರರಾವ್

ಮೈಸೂರು,ಆ.30:- ಮೈಸೂರು ಮಹಾನಗರ ಪಾಲಿಕೆ ಚುನಾವಣೆ-2018ರ ಮತದಾನವು ನಾಳೆ(ಆ.31) ನಡೆಯಲಿದೆ.  ಈ ಸಂಬಂಧ ನಗರದಲ್ಲಿ ಯಾವುದೇ ರೀತಿಯ ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆಯಾಗದ ರೀತಿಯಲ್ಲಿ ಶಾಂತ ರೀತಿಯ ಮತದಾನಕ್ಕಾಗಿ ನಗರದ ಪೊಲೀಸರಿಂದ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಮೈಸೂರು ನಗರದ ಪೊಲೀಸ್ ಆಯುಕ್ತರು ಮತ್ತು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿ.ಸಿ.ಪಿ.ಅವರು ನಗರದ ಪೂರ್ಣ ಉಸ್ತುವಾರಿಯಲ್ಲಿರುತ್ತಾರೆ.  ನಗರದ 03 ಉಪ ವಿಭಾಗಗಳ ಉಸ್ತುವಾರಿಗಾಗಿ ಪ್ರತಿ ಉಪ ವಿಭಾಗಕ್ಕೆ ಒಬ್ಬರಂತೆ 03 ಡಿ.ಸಿ.ಪಿ.ರವರುಗಳನ್ನು ನಿಯೋಜಿಸಲಾಗಿದೆ. ಮೈಸೂರು ನಗರ ಪೊಲೀಸ್ ವ್ಯಾಪ್ತಿಗೆ ಒಟ್ಟು 813 ಮತದಾನ ಕೇಂದ್ರಗಳಿದ್ದು, ಇವುಗಳಲ್ಲಿ 375 ಕ್ರಿಟಿಕಲ್ ಮತ್ತು 438 ಸಾಮಾನ್ಯ ಬೂತ್‍ಗಳನ್ನಾಗಿ ಗುರ್ತಿಸಲಾಗಿದೆ. ಬೂತ್‍ಗಳಿಗೆ ಒಟ್ಟು 846 ಪೊಲೀಸ್ ಸಿಬ್ಬಂದಿಗಳು/ ಹೋಮ್ ಗಾರ್ಡ್‍ಗಳನ್ನು ನಿಯೋಜಿಸಲಾಗಿದೆ. ಬೂತ್‍ಗಳ ಮೇಲ್ವಿಚಾರಣೆಗಳಿಗೆ ಪಿ.ಎಸ್.ಐ./ಎ.ಎಸ್.ಐ. ಉಸ್ತುವಾರಿಯುಳ್ಳ 50 ಸೆಕ್ಟರ್ ಮೊಬೈಲ್ ವಾಹನಗಳನ್ನು ನಿಯೋಜಿಸಲಾಗಿದೆ ಎಂದಿದ್ದಾರೆ.  ಪೊಲೀಸ್ ಇನ್ಸಪೆಕ್ಟರ್ ಉಸ್ತುವಾರಿಯುಳ್ಳ 26 ಸೂಪರ್‍ವೈಜರಿ ಮೊಬೈಲ್ ವಾಹನಗಳನ್ನು ನಿಯೋಜಿಸಲಾಗಿದೆ. ಎ.ಸಿ.ಪಿ. ಉಸ್ತುವಾರಿಯುಳ್ಳ 07 ಸಬ್ ಡಿವಿಜನ್ ಮೊಬೈಲ್ ವಾಹನಗಳನ್ನು ನಿಯೋಜಿಸಲಾಗಿದೆ. ಮೊಬೈಲ್ ವಾಹನಗಳಿಗೆ ಅವಶ್ಯಕ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.  ನಗರದ ಚೆಕ್ ಪೋಸ್ಟ್‍ಗಳು, ಚುನಾವಣಾ ನೀತಿ ಸಂಹಿತೆ ಜಾರಿಗಾಗಿ ಇರುವ ಫ್ಲೈಯಿಂಗ್ ಸ್ಕ್ವಾಡ್‍ಗಳು ಮತ್ತು ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಸ್ಥಳಗಳಿಗೆ ಅವಶ್ಯಕ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ನಾಲ್ವರು  ಡಿ.ಸಿ.ಪಿ.ಗಳ ನೇತೃತ್ವದಲ್ಲಿ 7 ಮಂದಿ ಎಸಿಪಿ, 26ಮಂದಿ ಪಿಐ, 11ಮಂದಿ ಪಿಎಸ್ಐ, 56ಮಂದಿ ಎಎಸ್ಐ, 452ಹೆಚ್ ಸಿ, 768 ಪಿಸಿ, 650 ಹೋಂಗಾರ್ಡ್ ಗಳನ್ನು ನೇಮಿಸಲಾಗಿದೆ. 16 ಸಿಎಆರ್, 6ಕೆಎಸ್ ಆರ್ ಪಿ, 20ಮೌಂಟೆಡ್ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆಗಳು ಮತ್ತು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗಳು ಕಂಡು ಬಂದರೆ ಸಾರ್ವಜನಿಕರು ಕೂಡಲೇ ಹತ್ತಿರದ ಪೊಲೀಸ್ ಠಾಣೆ ಅಥವಾ ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 100, 2418339, 2418340ಗೆ ಕರೆ ಮಾಡಿ ಮಾಹಿತಿ ನೀಡಬಹುದು.

ಚುನಾವಣಾ ದಿನ ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ರೀತಿಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಸಾರ್ವಜನಿಕರು ಮತಗಟ್ಟೆಗಳಿಗೆ ಬಂದು ತಮ್ಮ ಮತವನ್ನು ಚಲಾಯಿಸಬೇಕು ಎಂದು ಮೈಸೂರು ನಗರದ ಪೊಲೀಸ್ ಆಯುಕ್ತರು ಕೋರಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: