ಪ್ರಮುಖ ಸುದ್ದಿ

ಮೇಕೆದಾಟು ಯೋಜನೆಯ ನಿರ್ಮಾಣಕ್ಕೆ ಸರ್ಕಾರದ ಸಿದ್ಧತೆ, ಕೇಂದ್ರ ಸರ್ಕಾರದ ಅನುಮತಿಯ ನಿರೀಕ್ಷೆಯಲ್ಲಿ : ಸಚಿವ ಡಿ.ಕೆ.ಶಿವಕುಮಾರ್

ರಾಜ್ಯ(ಬೆಂಗಳೂರು)ಆ.30:-  ಮೇಕೆದಾಟು ಯೋಜನೆಯ ನಿರ್ಮಾಣಕ್ಕಾಗಿ ಸರ್ಕಾರ ಸಿದ್ಧತೆ ನಡೆಸಿದ್ದು, ಕೇಂದ್ರ ಸರ್ಕಾರದ ಅನುಮತಿಯ ನಿರೀಕ್ಷೆಯಲ್ಲಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳಲು ಇರುವಂತಹ ಅಡ್ಡಿ ಆತಂಕಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಹಾಗಾಗಿ ಆದಷ್ಟು ಶೀಘ್ರ ಅನುಮತಿ ಸಿಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಮೇಕೆದಾಟು ಯೋಜನೆಗಾಗಿ ಕೃಷಿ, ಅರಣ್ಯ, ಕಂದಾಯ ಭೂಮಿ ಸೇರಿದಂತೆ, ಒಟ್ಟು 4 ಸಾವಿರ ಎಕರೆಗಳಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ. ನಾನು ಪ್ರತಿನಿಧಿಸುವ ಕ್ಷೇತ್ರದ ರೈತರನ್ನೂ ಕೂಡ ಈ ಯೋಜನೆಗೆ ಭೂಮಿ ಕೊಡುವಂತೆ ಮನವೊಲಿಸಿದ್ದೇನೆ. ಹನೂರು ಕ್ಷೇತ್ರದಲ್ಲಿ ಅರಣ್ಯ ಭಾಗವನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು. ಯೋಜನೆಯ ವಿವರಗಳ ಬಗ್ಗೆ ಹೆಚ್ಚು ಮಾಹಿತಿ ನೀಡಲು ನಿರಾಕರಿಸಿದ ಸಚಿವರು ಮೊದಲು ಕೇಂದ್ರ ಸರ್ಕಾರ ಅನುಮತಿ ನೀಡಲಿ. ಮುಂದೆ ಯೋಜನೆಯನ್ನು ಯಾವ ರೀತಿ ಕೈಗೆತ್ತಿಕೊಳ್ಳುತ್ತೇವೆ ಕಾದು ನೋಡಿ ಎಂದು ಹೇಳಿದರು.

ಸುಮಾರು 6 ಸಾವಿರ ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. ಯಾವುದೇ ಹಂತದಲ್ಲಿ ಕೇಂದ್ರದಿಂದ ರಾಜ್ಯದ ಪ್ರಸ್ತಾವನೆಗೆ ಅನುಮತಿ ಸಿಗುವ ಸಾಧ್ಯತೆಗಳಿವೆ ಎಂದು ಹೇಳಿದರು.

ರಾಜ್ಯದಿಂದ ತಮಿಳುನಾಡಿಗೆ ಈವರೆಗೆ 310 ಟಿಎಂಸಿ ನೀರು ಹರಿದುಹೋಗಿದೆ. ಆಗಸ್ಟ್ ಕೊನೆಯವರೆಗೆ 82 ಟಿಎಂಸಿ ನೀರು ಮಾತ್ರ ಹರಿದುಹೋಗಬೇಕಿತ್ತು ಎಂದು ಹೇಳಿದರು.

ವಿಚಾರ ಸಂಕಿರಣ

ನೀರಾವರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ತಜ್ಞರು, ಹೋರಾಟಗಾರರ ಸಲಹೆ ಪಡೆದು ಸದ್ಯದಲ್ಲಿ ವಿಚಾರ ಸಂಕಿರಣ ನಡೆಸುವುದಾಗಿ ತಿಳಿಸಿದ ಸಚಿವ ಶಿವಕುಮಾರ್ ಅವರು, ಈಗಾಗಲೇ 146 ಮಂದಿ ತಜ್ಞರು ತಮ್ಮ ಸಲಹೆಗಳನ್ನು ನೀಡಿದ್ದಾರೆ. ಅಧಿಕಾರಿ ಮಟ್ಟದಲ್ಲಿ ಈ ಸಲಹೆಗಳನ್ನು ಪಟ್ಟಿ ಮಾಡಿ ನಂತರ, ವಿಚಾರ ಸಂಕಿರಣ ನಡೆಸಲಾಗುವುದು ಎಂದರು.

ನಾಲೆಗಳ ಮೂಲಕ ಹರಿಯುವ ನೀರು ಕೆಳ ಹಂತದ ಪ್ರದೇಶಗಳ ಜನರಿಗೆ ಲಭ್ಯವಾಗುತ್ತಿಲ್ಲ. ಈ ನೀರು ಮಧ್ಯಭಾಗದಲ್ಲೇ ದುರುಪಯೋಗವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ನೀರಿನ ಕಳ್ಳತನವನ್ನು ತಡೆಗಟ್ಟಲು ಕೆಇಬಿ ಮಾದರಿಯಲ್ಲಿಯೇ ವಿಚಕ್ಷಣಾ ದಳವನ್ನು ರಚಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.

ಹಾಗಾಗಿ ಗೃಹ ಸಚಿವರಾದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರೊಂದಿಗೆ ಸಭೆ ನಡೆಸಿ, ಪೊಲೀಸ್ ಸಹಕಾರದಿಂದ ನಾಲೆಗಳ ನೀರು ಕೊನೆಯವರೆಗೂ ಹರಿಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸರ್ಕಾರ 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಸ್ನೇಹಮಯಿ ಸರ್ಕಾರ ಇದಾಗಿದೆ ಎಂದು ಹೇಳಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: