ಪ್ರಮುಖ ಸುದ್ದಿ

ಬಾರ್-ರೆಸ್ಟೋರೆಂಟ್ ರಸ್ತೆ ಬದಿ ಅಂಗಡಿಗಳಲ್ಲಿ ಧೂಮಪಾನ ಕಡ್ಡಾಯವಾಗಿ ನಿಷೇಧಿಸಿ ಸುತ್ತೋಲೆ ಹೊರಡಿಸಿದ ಬಿಬಿಎಂಪಿ

ರಾಜ್ಯ(ಬೆಂಗಳೂರು)ಆ.30:- ರಾಜಧಾನಿ ಬೆಂಗಳೂರಿನ ಬಾರ್, ರೆಸ್ಟೋರೆಂಟ್, ಪಬ್, ರಸ್ತೆ ಬದಿ ಅಂಗಡಿಗಳಲ್ಲಿ ಧೂಮಪಾನವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಈ ಕುರಿತು ಬಿಬಿಎಂಪಿ ಸುತ್ತೋಲೆಯೊಂದನ್ನು ಹೊರಡಿಸಿದೆ. ಒಂದು ವೇಳೆ ನಿಯಮ ಬಾಹಿರವಾಗಿ ಧೂಮಪಾನಕ್ಕೆ ಅವಕಾಶ ನಿಡಿದರೆ ಅಂತಹ ಬಾರ್, ಹೋಟೆಲ್ ಗಳ ಲೈಸನ್ಸ್ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಈ ಮೂಲಕ ಬೆಂಗಳೂರು ನಗರವನ್ನು ಬಿಬಿಎಂಪಿ ಧೂಮಪಾನ ಮುಕ್ತ ನಗರವನ್ನಾಗಿ ಮಾಡುವ ಉದ್ದೇಶಕ್ಕೆ ಮುಂದಾಗಿದೆ. ಕರ್ನಾಟಕ ಧೂಮಪಾನ ನಿಷೇಧ ಕಾಯ್ದೆ ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಬಿಬಿಎಂಪಿ ಸಭೆಯಲ್ಲಿ ಮೇಯರ್ ಸಂಪತ್ ರಾಜ್ ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ಈಗಾಗಲೇ ಬೆಂಗಳೂರಿನ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್’ಗಳಲ್ಲಿ ಶೇ.14 ರಷ್ಟು ಧೂಮಪಾನ ಸೇವಿಸುತ್ತಾರೆ. ಶೇ.24 ರಷ್ಟು ಮಂದಿ ಕೇವಲ ಹೊಗೆ ಸೇವನೆಯಿಂದಲೇ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಧೂಮಪಾನ ಮಾಡದವರ, ಮಕ್ಕಳ ಹಾಗೂ ಮಹಿಳೆಯರನ್ನು ರಕ್ಷಿಸುವ ನಿಟ್ಟಿನಲ್ಲಿ ಸ್ಮೋಕ್ ಫ್ರೀ ಬೆಂಗಳೂರು ಅಭಿಯಾನಕ್ಕೆ ಬಿಬಿಎಂಪಿ ಚಾಲನೆ ನೀಡಿದೆ.

ಒಂದು ವೇಳೆ ಹೋಟೆಲ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಮಾಲೀಕರು ಕಾನೂನಾತ್ಮಕವಾಗಿ ಧೂಮಪಾನ ವಲಯವನ್ನು ಸ್ಥಾಪಿಸಬೇಕೆಂದರೆ ಪಾಲಿಕೆಯ ತಂಬಾಕು ನಿಯಂತ್ರಣ ಕೋಶದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಧೂಮಪಾನ ವಲಯದಲ್ಲಿ ಯಾವುದೇ ರೀತಿಯ ತಿಂಡಿ, ಊಟ, ಮದ್ಯ, ಸಿಗರೇಟು, ನೀರು, ಟೀ, ಕಾಫಿ ಇತ್ಯಾದಿ ಪದಾರ್ಥಗಳನ್ನು ಸರಬರಾಜು ಮಾಡಬಾರದು. ಕೋಪ್ಟಾ ಕಾಯಿದೆಯನ್ವಯ 30ಕ್ಕೂ ಹೆಚ್ಚು ಆಸನಗಳಿರುವ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ಹೋಟೆಲ್‌, ಪಬ್‌, ಕ್ಲಬ್‌ಗಳಲ್ಲಿ ಧೂಮಪಾನ ವಲಯವನ್ನು ಸ್ಥಾಪಿಸಬಹುದು ಎಂದು ತಿಳಿಸಲಾಗಿದೆ.

ಅಪ್ರಾಪ್ತರು ಮತ್ತು ಧೂಮಪಾನ ಮಾಡದ ಸಾರ್ವಜನಿಕರಿಗೆ ಧೂಮಪಾನ ವಲಯಕ್ಕೆ ಪ್ರವೇಶ ನೀಡಬಾರದು. ಅಲ್ಲಿ ಕುರ್ಚಿ, ಬೆಂಕಿ ಪೊಟ್ಟಣ, ಆ್ಯಶ್‌ ಟ್ರೇ ಇತ್ಯಾದಿ ಧೂಮಪಾನ ಪ್ರಚೋದನಕಾರಿ ವಸ್ತುಗಳನ್ನು ಗ್ರಾಹಕರಿಗೆ ಒದಗಿಸಬಾರದು. ಈ ನಿಯಮಗಳನ್ನು ಉಲ್ಲಂಘಿಸಿದರೆ, ಉದ್ದಿಮೆ ಪರವಾನಗಿಯನ್ನು ರದ್ದು ಮಾಡಲಾಗುವುದು ಎಂದು ಸೂಚಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: