ಪ್ರಮುಖ ಸುದ್ದಿ

ರಸ್ತೆಗಳ ಪುನರ್ ನಿರ್ಮಾಣಕ್ಕೆ ಬಾರ್ಡರ್ ರೋಡ್ ಆರ್ಗನೈಸೇಷನ್ ಬಲ : ತಂತ್ರಜ್ಞರ ತಂಡದಿಂದ ಪರಿಶೀಲನೆ

ರಾಜ್ಯ(ಮಡಿಕೇರಿ )ಆ.30 :- ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಎರಡು ವಾರಗಳಿಂದ ಸುರಿದ ಭಾರೀ ಮಳೆಗೆ ಉಂಟಾದ ಪ್ರಾಕೃತಿಕ ವಿಕೋಪಗಳಿಂದ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಜಿಲ್ಲೆಯ ಹಲವು ರಸ್ತೆಗಳು ಅತ್ಯಂತ ಗಂಭೀರ ಸ್ವರೂಪದ ಹಾನಿಗೀಡಾಗಿದ್ದು, ಇವುಗಳನ್ನು ಪುನರ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸೇನೆಯ ತಾಂತ್ರಿಕ ನೆರವನ್ನು ಪಡೆಯಲಾಗುತ್ತಿದೆ.

ಈ ದಿಸೆಯಲ್ಲಿ ಈಗಾಗಲೆ ಬಾರ್ಡರ್ ರೋಡ್ ಆರ್ಗನೈಸೇಷನ್‍ನ ಮೂರು ಮಂದಿ ತಂತ್ರಜ್ಞರ ತಂಡ ಜಿಲ್ಲೆಗೆ ಆಗಮಿಸಿದ್ದು, ಭೂ ಕುಸಿತ ಹಾಗೂ ಪ್ರವಾಹದಿಂದ ಭಾರೀ ಪ್ರಮಾಣದಲ್ಲಿ ಹಾನಿಗೀಡಾಗಿರುವ ರಸ್ತೆಗಳ ಪರಿಶೀಲನಾ ಕಾರ್ಯವನ್ನು ಸ್ಥಳೀಯ ಇಂಜಿನಿಯರ್‍ಗಳ ಸಹಯೋಗದೊಂದಿಗೆ ಆರಂಭಿಸಿದೆ. ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಿಲ್ಲೆಗೆ ಭೇಟಿ ನೀಡಿ, ಹಾನಿಗೀಡಾದ ಪ್ರದೇಶಗಳನ್ನು ಪರಿಶೀಲಿಸಿದ ಬಳಿಕ ಬಾರ್ಡರ್ ರೋಡ್ ಆರ್ಗನೈಸೇಷನ್‍ನ ತಂತ್ರಜ್ಞರ ತಂಡವನ್ನು ಕಳುಹಿಸುವುದಾಗಿ ವಾಗ್ದಾನ ನೀಡಿದ್ದರು. ಅದರಂತೆ ಮೂವರು ಸದಸ್ಯರುಗಳನ್ನು ಒಳಗೊಂಡ ತಂಡ ನಗರಕ್ಕೆ ಆಗಮಿಸಿದ್ದು, ಅತಿವೃಷ್ಟಿ ಹಾನಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಹದಗೆಟ್ಟ ರಸ್ತೆ ಮತ್ತು ಸೇತುವೆ ಪುನರ್‍ನಿರ್ಮಾಣಕ್ಕೆ ಸಂಬಂಧಿಸಿದಂತೆ  ತಾಂತ್ರಿಕ  ಸಲಹೆಗಳನ್ನು ಸ್ಥಳೀಯ ಇಂಜಿಯರ್‍ಗಳಿಗೆ ನೀಡುತ್ತಿದೆ.

ಈ ತಂಡವು ಈಗಾಗಲೆ ಉತ್ತರಾಖಂಡ್ ಸೇರಿದಂತೆ ರಾಷ್ಟ್ರದ ವಿವಿಧ ದುರ್ಗಮ ಪ್ರದೇಶಗಳಲ್ಲಿ ರಸ್ತೆ ಮತ್ತು ಸೇತುವೆಗಳ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡ ಅನುಭವವನ್ನು ಹೊಂದಿದ್ದು, ಅದರ ಆಧಾರದಲ್ಲಿ ಕೊಡಗಿನ ಹವಾಮಾನಕ್ಕೆ ಅನುಗುಣವಾಗಿ ಯಾವ ರೀತಿಯಲ್ಲಿ ದೀರ್ಘ ಕಾಲ ಬಾಳಿಕೆ ಬರುವಂತಹ ನಿರ್ಮಾಣ ಕಾಮಗಾರಿ ನಡೆಸಬೇಕೆಂದು ಮಹತ್ವದ ಸಲಹೆಗಳನ್ನು ನೀಡಲಿದೆ. ಈ ತಂಡದ ಸಲಹೆ ಅನ್ವಯ ಜಿಲ್ಲೆಯಲ್ಲಿ ರಸ್ತೆ ಮತ್ತು ಸೇತುವೆಗಳ ಪುನರ್ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದ್ದಾರೆ.

ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿರುವ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳು ಮುಂದುವರೆದಿದ್ದು, ಭೂ ಸೇನೆ ಮತ್ತು ನೌಕಾಪಡೆಯ ತಂಡಗಳು ಹಿಂದಿರುಗಿರುವುದರಿಂದ, ಕೇಂದ್ರೀಯ ಮೀಸಲು ಪಡೆಯ ನೆರವನ್ನು ಪಡೆಯಲಾಗಿದೆ. ಇದರೊಂದಿಗೆ ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್, ಕೆಎಸ್‍ಆರ್‍ಪಿ, ಗರುಡ ತಂಡಸೇರಿದಂತೆ ವಿವಿಧ ರಕ್ಷಣಾ ತಂಡಗಳು ತಾತ್ಕಾಲಿಕ ರಸ್ತೆ ನಿರ್ಮಾಣ ಸೇರಿದಂತೆ, ನಾಪತ್ತೆಯಾದವರ ಶೋಧಕಾರ್ಯವನ್ನು ಮುಂದುವರಿಸಿವೆ ಎಂದು ಅವರು ಮಾಹಿತಿ ನೀಡಿದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: