ಪ್ರಮುಖ ಸುದ್ದಿ

ಸಂತ್ರಸ್ತರ ಮೇಲೆ ನಿಗಾ : ಆರೋಗ್ಯ ಮತ್ತು ಶುಚಿತ್ವದ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸಲಹೆ

ರಾಜ್ಯ(ಮಡಿಕೇರಿ) ಆ.30 :- ಮಳೆಗಾಲ ಮತ್ತು ಪ್ರಕೃತಿ ವಿಕೋಪದದಿಂದಾಗುವ ಪ್ರವಾಹದ ಸಂಧರ್ಭದಲ್ಲಿ ನೀರಿನಿಂದ ಹರಡಬಹುದಾದ ರೋಗಗಳಲ್ಲಿ ಮುಖ್ಯವಾಗಿ ಕರಳು ಬೇನೆ, ಕಾಲರಾ, ಕಾಮಾಲೆ, ವಿಷಮ ಶೀತಜ್ವರ, ಇಲಿಜ್ವರ, ಅತಿಸಾರ, ಹುಳುಗಳಿಂದ ಉಂಟಾಗುವ ಕಾಯಿಲೆಗಳು ಹಾಗೂ ಇನ್ನಿತರ ರೋಗಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಆದ್ದರಿಂದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ನೈರ್ಮಲ್ಯ ಹಾಗೂ ಸ್ವಚ್ಛತೆಯನ್ನು ಕಾಪಾಡುವುದರ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದರ ಮೂಲಕ ಸಾಂಕ್ರಾಮಿಕ ರೋಗಗಳು ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ  ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾ.ಪಂ.ಗಳು ಕೆಲವು ಮಾರ್ಗಸೂಚಿ ಅನುಸರಿಸುವಂತೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಕೋರಿದ್ದಾರೆ.   ಕುಡಿಯುವ ನೀರಿನ ಮೂಲಗಳಿಂದ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸುವುದು. ಎಲ್ಲಾ ಕುಡಿಯುವ ನೀರಿನ ಮೂಲಗಳನ್ನು ಸೂಪರ್ ಕ್ಲೋರಿನೇಷನ್ ಮಾಡಿಸುವುದು. ಕ್ಲೋರಿನೇಷನ್ ಮಾಡಿಸಿದ ನಂತರ ಅಗತ್ಯ ಕ್ಲೋರಿನ್ ಪ್ರಮಾಣ ಕುಡಿಯುವ ನೀರಿನಲ್ಲಿ ಇರುವಂತೆ ಕ್ರಮವಹಿಸುವುದು. ಪರಿಸರ ನೈರ್ಮಲ್ಯ ಮತ್ತು ಶುಚಿತ್ವ ಕಾಪಾಡಲು ಸಕಲ ಕ್ರಮಗಳನ್ನು ವ್ಯವಸ್ಥೆ ಮಾಡುವುದು. ಪ್ರವಾಹ/ ನೆರೆಹಾವಳಿ ಬಗ್ಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ಜನರಿಗೆ ಸೂಕ್ತ ಆರೋಗ್ಯ ಶಿಕ್ಷಣ ನೀಡುವುದು. ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾ.ಪಂ.ಗಳ ಸದಸ್ಯರು, ಸಮಾಜ ಸೇವಕರು, ಸ್ಥಳೀಯ ಮುಖಂಡರು, ಸ್ವಯಂ ಸೇವಾ ಸಂಸ್ಥೆಗಳು ಮುಂತಾದ ಎಲ್ಲರ ಸಹಕಾರ, ಸಹಭಾಗಿತ್ವವನ್ನು ಪಡೆದುಕೊಂಡು ರೋಗ ನಿಯಂತ್ರಣ ಕ್ರಮ ಅನುಷ್ಠಾನಗೊಳಿಸುವುದು.  ಕುಡಿಯುವ ನೀರಿನ ಕೊಳವೆ ಬಿರುಕು ಬಿಟ್ಟು, ಒಳಚರಂಡಿಗೆ ಸಂಪರ್ಕ ಹೊಂದಿ ಅಥವಾ ತುಕ್ಕು ಹಿಡಿದ ಕೊಳವೆಯಿಂದ ನೀರನ್ನು ಜನರು ಕುಡಿದು ಆರೋಗ್ಯ ಕೆಡದಂತೆ ಮತ್ತು ನಿರುಪಯುಕ್ತ ನೀರು ಸಹ ಶುದ್ದೀಕರಿಸಿದ ನೀರಿನ ಜೊತೆ ಬೆರೆಯದಂತೆ ಎಚ್ಚರವಹಿಸುವುದು. ಕುಡಿಯಲು ಉಪಯೋಗಿಸುವ ತೆರೆದ ಬಾವಿಯನ್ನು ಎತ್ತರದ ತಡೆಗೋಡೆಗಳಿಂದ ಕಟ್ಟಿ ರಕ್ಷಿಸುವುದು. ಕುಡಿಯುವ ನೀರಿನ ಮೂಲಗಳಿಗೆ ಕ್ಲೋರಿನೇಷನ್ ಮಾಡುವುದು. ನೀರು ಸರಬರಾಜು ಟ್ಯಾಂಕ್ ಗಳನ್ನು ಕನಿಷ್ಠ ಒಂದು ವಾರಕ್ಕೊಮ್ಮೆ ಚೆನ್ನಾಗಿ ತೊಳೆದು ಶುಚಿಗೊಳಿಸುವುದು. ಮತ್ತು ಮುಚ್ಚಳದಿಂದ ಮುಚ್ಚುವುದು. ನೀರು ಸರಬರಾಜು ಪೈಪುಗಳು ಒಡೆದಿವೆಯೇ ಎಂಬುದನ್ನು ಮತ್ತು ಬೋರ್‍ವೆಲ್‍ಗಳ ಪ್ಲಾಟ್ ಫಾರಂ ಪರಿಶೀಲಿಸಿ ನೀರಿನ ಮೂಲ ಕಲುಷಿತವಾಗದಂತೆ ತಕ್ಷಣ ಸರಿಪಡಿಸುವುದು. ಕುಡಿಯುವ ನೀರಿನ ಮೂಲಗಳಿಂದ ಕನಿಷ್ಠ ಮೂರು ತಿಂಗಳಿಗೊಮ್ಮೆ ಮತ್ತು ಜಾತ್ರೆಗಳು ಪ್ರಾರಂಭವಾಗುವ ಮೊದಲು ಕಡ್ಡಾಯವಾಗಿ ಮಾದರಿಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ, ಫಲಿತಾಂಶದ ಆಧಾರದನ್ವಯ ಕ್ಲೋರಿನೇಷನ್ ಮಾಡಿಸುವುದು. ನೀರಿನ ಪ್ರಮಾಣಕ್ಕನುಗುಣವಾಗಿ ಕ್ಲೋರಿನೇಷನ್ ಮಾಡುವುದು.   ಕುಡಿಯುವ ನೀರಿನ ಸುರಕ್ಷತೆ ಬಗ್ಗೆ ಚರ್ಚಿಸಲು ಗ್ರಾಮಪಂಚಾಯತಿ ಮಟ್ಟದಲ್ಲಿ ಸಮನ್ವಯ ಸಮಿತಿ ರಚಿಸಿಕೊಂಡು ಅಗತ್ಯ ಕ್ರಮ ವಹಿಸುವುದು. ಕುಡಿಯುವ ನೀರಿನ ಮೂಲಸ್ಥಾನದ ಹತ್ತಿರ ಮಲವಿಸರ್ಜನೆ ಮಾಡಬಾರದು. ಬಟ್ಟೆಗಳನ್ನು ತೊಳೆಯಬಾರದು, ಕಸವನ್ನು ಬಿಸಾಡದಂತೆ ಎಚ್ಚರವಹಿಸುವುದು. ಅಸುರಕ್ಷಿತವಾದ ಹೊಳೆ ನೀರು ಮತ್ತು ಕೆರೆ ನೀರನ್ನು ಕುಡಿಯಲು ಉಪಯೋಗಿಸದಂತೆ, ಮತ್ತು ಇದರಿಂದ ಸಾಂಕ್ರಾಮಿಕ ರೋಗಗಳು ಉಂಟಾಗುತ್ತವೆ ಎಂದು ಜನರಲ್ಲಿ ಅರಿವು ಮೂಡಿಸುವುದು. ಹಾಗೂ ಸಾರ್ವಜನಿಕರು ಕುಡಿಯುವ ನೀರಿನ ಮೂಲಗಳ ಹತ್ತಿರ ಪ್ರಾಣಿಗಳ ಮಲವಿಸರ್ಜನೆ ಸಂಪರ್ಕ ಹೊಂದದಂತೆ ಎಚ್ಚರವಹಿಸುವುದು. ಸುರಕ್ಷತೆಗಾಗಿ ಎಲ್ಲಾ ಮನೆಗಳ ಬಾವಿಗಳು ಮತ್ತು ಇನ್ನಿತರ ಕುಡಿಯುವ ನೀರಿನ ಮೂಲಗಳಿಂದ ಕೊನೆ ಪಕ್ಷ 20 ಮೀಟರ್ ದೂರದಲ್ಲಿ ಶೌಚಾಲಯಗಳಿರಬೇಕು. ಸಾಧ್ಯವಾದಷ್ಟು ಶೌಚಾಲಯಗಳನ್ನು ನೀರಿನ ಮೂಲದ ಕೆಳಮಟ್ಟದಲ್ಲಿ ಇರುವಂತೆ ಎಚ್ಚರವಹಿಸುವುದು.  ಹೋಟೆಲು, ಬೇಕರಿ, ಮಿಠಾಯಿ ಅಂಗಡಿ, ಕಲ್ಯಾಣ ಮಂಟಪ, ವಸತಿ ಗೃಹಗಳ ನೈರ್ಮಲ್ಯವನ್ನು ಕಾಪಾಡುವಂತೆ ಸೂಚಿಸುವುದಲ್ಲದೇ, ಗ್ರಾಹಕರಿಗೆ ಬಿಸಿ ನೀರು ಮತ್ತು ಬಿಸಿ ಆಹಾರ ಪದಾರ್ಥಗಳನ್ನು ಸಬರಾಜುಮಾಡುವಂತೆ ಸೂಚಿಸಬೇಕು. ಸ್ವಚ್ಛತೆಯನ್ನು ಮತ್ತು ಆರೋಗ್ಯ ನೈರ್ಮಲ್ಯತೆಯನ್ನು ಕಾಪಾಡಲು ಹೋಟೆಲು ಮಾಲೀಕರು ಮತ್ತು ಪದಾದಿಕಾರಿಗಳ ಸಹಕಾರ ಪಡೆದು ಹೋಟೆಲುಗಳಲ್ಲಿ ಬಳಸುವ ತಟ್ಟೆ, ಹಾಗೂ ಇನ್ನಿತರ ಪಾತ್ರೆಗಳನ್ನು ತೊಳೆದು ಕುದಿಯುವ ನೀರಿನಲ್ಲಿ ಮುಳುಗಿಸಿ ಉಪಯೋಗಿಸುವಂತೆ ತಿಳಿಹೇಳಬೇಕು. ಸಿದ್ದಪಡಿಸಿದ ಆಹಾರ ಪದಾರ್ಥಗಳ ಮೇಲೆ ನೊಣಗಳು ಕೂರದಂತೆ ಮುಚ್ಚಿಡಲು ಸೂಚಿಸಬೇಕು.   ಹೊಟೇಲು ಸಿಬ್ಬಂದಿ ಪ್ರತಿ ಆರು ತಿಂಗಳಿಗೊಮ್ಮೆ ವ್ಯೆದ್ಯಕೀಯ ತಪಾಸಣೆ ಮಾಡಿಸಿ, ರೋಗ ಮುಕ್ತ ಪ್ರಮಾಣ ಪತ್ರ ಹೊಂದಿರಬೇಕು. ರಸ್ತೆ ಬದಿಗಳ ಚರಂಡಿಯಲ್ಲಿ ನೀರು ತುಂಬಿ ಮೇಲ್ಬಾಗದಲ್ಲಿ ಹರಿದು, ಜನರು ಅದರ ಮೇಲೆ ನಡೆದಾಡಿ ಕಾಯಿಲೆ ಹರಡುವ ಸಾದ್ಯತೆ ಇರುವುದರಿಂದ, ಕಲುಷಿತ ನೀರು ಚರಂಡಿಯಲ್ಲಿ ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡುವುದು. ಮತ್ತು ತಿಪ್ಪೆಗುಂಡಿಗಳನ್ನು ಸ್ಥಳಾಂತರಗೊಳಿಸಿ ತ್ಯಾಜ್ಯ ವಸ್ತುಗಳ ಸೂಕ್ತ ವಿಲೇವಾರಿ ಗೊಳಿಸುವುದು.

ಎಲ್ಲಾ ಮೀನು, ಮಾಂಸ ಮಾರಾಟದ ಸ್ಥಳಗಳಲ್ಲಿ ನೈರ್ಮಲ್ಯ ಕಾಪಾಡುವಂತೆ ಸೂಚಿಸುವುದು, ಗ್ರಾಮಾಂತರ ಮತ್ತು ಪಟ್ಟಣ ಪ್ರದೇಶದಲ್ಲಿ ನೀರು ನಿಂತು ಜೌಗು ಪ್ರದೇಶವಾಗಿರುವ ಸ್ಥಳಗಳನ್ನು ಗುರುತಿಸಿ ಅವುಗಳನ್ನು ಸ್ವಚ್ಛಗೊಳಿಸುವುದು ಹಾಗೂ ಕಸದ ಗುಂಡಿಗಳನ್ನು ಮುಚ್ಚುವುದು. ಗ್ರಾಮದ ಒಳಭಾಗದಲ್ಲಿರುವ ಕಸದ ಗುಂಡಿಗಳನ್ನು ಗ್ರಾಮದ ಹೊರಗಡೆ ಸಾಗಿಸುವ ಬಗ್ಗೆ ತುರ್ತು ಕ್ರಮ ತೆಗೆದುಕೊಳ್ಳುವುದು.     ಡೆಂಗ್ಯೂ ಮತ್ತು ಚಿಕುನ್‍ಗುನ್ಯ ರೋಗಗಳನ್ನು ಹರಡುವ ರೋಗವಾಹಕ ಸೊಳ್ಳೆಗಳ ಉತ್ಪತ್ತಿತಾಣಗಳು ಸಾಮಾನ್ಯವಾಗಿ ನೀರು ಶೇಖರಣಾ ತೊಟ್ಟಿಗಳು ಹಾಗೂ ಮನೆಯ ಸುತ್ತ ಮುತ್ತಲಿನ ಪರಿಸರದಲ್ಲಿ ಮಳೆ ನೀರು ಸಂಗ್ರಹವಾಗುವ ಎಳೆನೀರು ಚಿಪ್ಪು, ಹಳೇ ಟೈರುಗಳು, ಪ್ಲಾಸ್ಟಿಕ್ ಹಾಗೂ ಗಾಜಿನ ಹಳೆಯ ವಸ್ತುಗಳು ಆಗಿರುತ್ತವೆ. ಡೆಂಗಿ ಮತ್ತು ಚಿಕುನ್‍ಗುನ್ಯ ರೋಗಗಳನ್ನು ನಿಯಂತ್ರಿಸಲು ಈಡಿಸ್ ಸೊಳ್ಳೆಗಳ ಉತ್ಪತ್ತಿಯನ್ನು ನಿರ್ಮೂಲನೆ ಮಾಡುವುದು ಅತಿ ಮುಖ್ಯವಾದ ಕ್ರಮವಾಗಿರುತ್ತದೆ. ಸೊಳ್ಳೆ ನಿಯಂತ್ರಣ ಚಟುವಟಿಕೆಗಳನ್ನು ತೀವ್ರವಾಗಿ ಕೈಗೊಳ್ಳಲು ಸಮುದಾಯದ ಸಹಭಾಗಿತ್ವ ಅತ್ಯಾವಶ್ಯಕವಾಗಿದ್ದು,  ಸಮುದಾಯದಲ್ಲಿ ಈ ಬಗ್ಗೆ ಅರಿವು ಮೂಡಿಸಲು ಹಾಗೂ ಅವರ ದೈನಂದಿನ ಚಟುವಟಿಕೆಗಳಲ್ಲಿ ನೀರು ಶೇಖರಣೆಗಳ ಬಗ್ಗೆ ಸೂಕ್ತ ಬದಲಾವಣೆಗಳನ್ನು ತರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.

ನಗರ, ಪಟ್ಟಣ ಪ್ರದೇಶಗಳಲ್ಲಿನ ಮನೆಗಳ ಹಾಗೂ ಸುತ್ತಮುತ್ತಲ ಪರಿಸರದಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ತಡೆಗಟ್ಟುವ ಹಾಗೂ ನಿರ್ಮೂಲನಾ ಕ್ರಮಗಳನ್ನು ಕೈಗೊಳ್ಳುವುದು. ಸೂಕ್ತ ಮಾಹಿತಿ ಶಿಕ್ಷಣ ಮತ್ತು ಸಂಪರ್ಕ ಮಾದ್ಯಮಗಳಿಂದ ಸಮುದಾಯದಲ್ಲಿ ಅರಿವು ಮೂಡಿಸುವುದು. ಇದಕ್ಕಾಗಿ ಸ್ಥಳೀಯ ಸಂಸ್ಥೆಗಳ ಸದಸ್ಯರುಗಳಿಗೆ ಈ ರೋಗಗಳ ಬಗ್ಗೆ ಮತ್ತು ಅವುಗಳು ಹರಡದಂತೆ ಮಾಹಿತಿ ಶಿಬಿರಗಳನ್ನು ಏರ್ಪಡಿಸುವುದು.

ಸೊಳ್ಳೆ ಕಚ್ಚುವಿಕೆಯಿಂದ ಪಾರಾಗಲು (ಡೆಂಗಿ, ಚಿಕುನ್‍ಗುನ್ಯ ರೋಗಗಳು ಹರಡದಂತೆ) ಮಲಗುವಾಗ ಯಾವಾಗಲೂ ಸೊಳ್ಳೆ ಪರದೆಯನ್ನು ಉಪಯೋಗಿಸುವಂತೆ ಸಮುದಾಯವನ್ನು ಪ್ರೇರೇಪಿಸುವುದು. ನೈರ್ಮಲ್ಯ ಸಮಿತಿಗೆ ಮಂಜೂರಾದ ಅನುದಾನವನ್ನು ಉಪಯೋಗಿಸಿ ಸೂಕ್ತ ನೈರ್ಮಲ್ಯ ಕ್ರಮಗಳನ್ನು ಮತ್ತು ಫಾಗಿಂಗ್ ಮಾಡಲು ಆರೋಗ್ಯ ಇಲಾಖೆಯ ತಾಂತ್ರಿಕ ಸಹಕಾರದೊಂದಿಗೆ ಗ್ರಾ.ಪಂ.ಗಳು ಕ್ರಮವಹಿಸುವುದು.

ಪ.ಪಂ.ಮತ್ತು ಗ್ರಾ.ಪಂ.ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿರುವ ಮತ್ತು ಹೊಸದಾಗಿ ಮಂಜೂರಾಗುವ/ಮಂಜೂರಾದ ಅಭಿವೃದ್ದಿ ಯೋಜನೆಗಳು, ನೀರಾವರಿ ಕಾಮಗಾರಿಗಳು, ಕಲ್ಲು ಗಣಿಗಾರಿಕೆ, ಕಟ್ಟಡ ನಿರ್ಮಾಣ ಮತ್ತಿತರಗಳಿಂದ ಉಂಟಾಗುವ ಕಾರ್ಮಿಕರ / ಕೂಲಿಕಾರರ ವಲಸೆಯ ಸಂದರ್ಭದಲ್ಲಿ ಆರೋಗ್ಯ ತಪಾಸಣೆ ಹಾಗೂ ರಕ್ತಲೇಪನ ಪರೀಕ್ಷೆಯನ್ನು ಕಡ್ಡಾಯಗೊಳಿಸುವುದು.  ಇಂತಹ ಗುಂಪುಗಳ ವಸಾಹತುಗಳನ್ನು ನಿಯಮಿತವಾಗಿ ಸರ್ವೇ ಕ್ಷಣೆಗೆ ಒಳಪಡಿಸುವುದು ಮತ್ತು ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿ ಮಾಡುವುದು. ಈ ಬಗ್ಗೆ ಎಲ್ಲಾ ಪ.ಪಂ.ಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು.

ಸಾಂಕ್ರಾಮಿಕ ರೋಗಗಳು ಹರಡದಂತೆ ನಗರ ಪ್ರದೇಶದ ಭಾಗಗಳಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ನಿಲ್ಲದಂತೆ ಸರಾಗವಾಗಿ ಹರಿಯುವ ವ್ಯವಸ್ಥೆ ಕೈಗೊಳ್ಳಲು, ಚರಂಡಿಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಲಾರ್ವನಾಶಕ ಔಷಧಗಳನ್ನು ಸಿಂಪಡಿಸಲು ಕ್ರಮ ಕೈಗೊಳ್ಳುವಂತೆ ನಗರಸಭೆ, ಮುಖ್ಯಾಧಿಕಾರಿಗಳು, ಪಟ್ಟಣ ಪಂಚಾಯಿತಿ ಇವರು ಅಗತ್ಯ ಕ್ರಮವಹಿಸುವುದು.    ಈ ಕಾರ್ಯಕ್ರಮಗಳ ಬಗ್ಗೆ ನಗರಸಭೆ, ಪ.ಪಂ.ಗಳು ಹಾಗೂ ಗ್ರಾ.ಪಂ.ಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದ್ದಾರೆ.       (ಕೆಸಿಐ,ಎಸ್.ಎಚ್)

Leave a Reply

comments

Related Articles

error: