ಮೈಸೂರು

ಅಪ್ರಾಪ್ತ ನಾದಿನಿ ಮೇಲೆ ಅತ್ಯಾಚಾರ : ವ್ಯಕ್ತಿಗೆ ಹತ್ತು ವರ್ಷ ಕಠಿಣ ಶಿಕ್ಷೆ

ಮೈಸೂರು,ಆ.31:- ಅಪ್ರಾಪ್ತ ನಾದಿನಿ  ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಯೋರ್ವನಿಗೆ ಮೈಸೂರಿನ ಪೋಕ್ಸೋ ವಿಶೇಷ ನ್ಯಾಯಾಲಯವು 10 ವರ್ಷಗಳ ಕಾಲ ಶಿಕ್ಷೆ , ಹಾಗೂ 55ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.

ಕೆ.ಆರ್. ನಗರ ಮಾಯಿಗೌಡನಹಳ್ಳಿಯ ಮಹದೇವ(28) ಶಿಕ್ಷೆಗೆ ಗುರಿಯಾದವನಾಗಿದ್ದಾನೆ. ಈತ ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸಿಮೆಂಟ್ ಇಟ್ಟಿಗೆ ಫ್ಯಾಕ್ಟರಿ ಭದ್ರತಾ ಸಿಬ್ಬಂದಿಯ ವಸತಿ ಗೃಹದಲ್ಲಿ ವಾಸವಿದ್ದ. 2015 ಮಾರ್ಚ್ 20 ರಂದು  ಪತ್ನಿಯ ತಂಗಿ ನಾದಿನಿ ಊರಿನಿಂದ ಮನೆಗೆ ಬಂದಿದ್ದಳು. ಆಗ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ನನ್ನೊಂದಿಗೆ  ಸಹಕರಿಸದಿದ್ದರೆ ನಿನ್ನ ಅಕ್ಕ, ಅಕ್ಕನ ಮಗು, ಮನೆಯವರೆನ್ನೆಲ್ಲಾ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದ. ಬೆದರಿಕೆ ಹಾಕಿ ಅಪ್ರಾಪ್ತ ನಾದಿನಿ ಮೇಲೆ ನಿರಂತರ  ಅತ್ಯಾಚಾರ ನಡೆಸಿದ್ದ. ಆರು ತಿಂಗಳವರೆಗೆ ನಿರಂತರ ಅತ್ಯಾಚಾರವೆಸಗಿ ಗರ್ಭಿಣಿಯನ್ನಾಗಿಸಿದ್ದ. ದೈಹಿಕ ಬದಲಾವಣೆಯಿಂದ ವಿಷಯ ತಿಳಿದು ಅಪ್ರಾಪ್ತೆಯ ತಾಯಿ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ವಿಜಯ ನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗಲೇ ಅಪ್ರಾಪ್ತೆ ಮಗುವಿಗೆ ಜನ್ಮ ನೀಡಿದ್ದು, ಬಾಲಕಿ ಜನ್ಮ ನೀಡಿದ ಮಗುವಿನ ಜೈವಿಕ ತಂದೆ ಮಹದೇವ ಎಂಬುದು  ಡಿಎನ್‌ಎ ಪರೀಕ್ಷೆಯ ಮೂಲಕ ಸಾಬೀತಾಗಿದ್ದು, ನ್ಯಾಯಾಧೀಶೆ ಬಿ.ಎಸ್. ಜಯಶ್ರೀ ಹತ್ತು ವರ್ಷಗಳ ಕಾಲ ಕಠಿಣ ಶಿಕ್ಷೆ , 55ಸಾವಿರ ರೂ.ದಂಡ ವಿಧಿಸಿ ಆದೇಶಿಸಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಬಿ.ಸಿ.ಶಿವರುದ್ರ ಸ್ವಾಮಿ ವಾದ ಮಂಡಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: