ಮೈಸೂರು

ಕುವೆಂಪು ಕನ್ನಡ ಸಾಹಿತ್ಯವನ್ನು ಮಹಾನದಿಯಾಗಿಸಿದ್ದಾರೆ: ರಥಯಾತ್ರೆಯಲ್ಲಿ ಡಾ.ಸಿಪಿಕೆ

ಕುವೆಂಪು ಅವರ 112 ನೇ ಜನ್ಮದಿನದ ಪ್ರಯುಕ್ತ ವಿಶ್ವಮಾನವ ಪರಿಕಲ್ಪನೆ ಪ್ರಚುರಪಡಿಸುವ ಉದ್ದೇಶದಿಂದ ಒಂದು ವಾರದ ಕಾಲ ಮೈಸೂರು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾದ ರಥಯಾತ್ರೆಗೆ ವಿವಿ ಮೊಹಲ್ಲಾದ ಉದಯರವಿಯಲ್ಲಿ ಚಾಲನೆ ನೀಡಲಾಯಿತು.

ಕುವೆಂಪು ನಿವಾಸದ ಎದುರು ಅವರ ಪುತ್ರಿ ತಾರಿಣಿ ಚಿದಾನಂದ ಗೌಡ ಕನ್ನಡ ಧ್ವಜ ಹಿಡಿದು ರಥಕ್ಕೆ ಹಸಿರು ನಿಶಾನೆ ತೋರಿದರು. ಈ ಸಂದರ್ಭ ಉಪಸ್ಥಿತರಿದ್ದ ಹಿರಿಯ ಸಾಹಿತಿ ಡಾ.ಸಿ.ಪಿ.ಕೆ ಮಾತನಾಡಿ, ತೊರೆಯಂತಿದ್ದ ಕನ್ನಡ ಸಾಹಿತ್ಯವನ್ನು ಮಹಾನದಿಯಾಗಿಸಿದ ಕೀರ್ತಿ ಕುವೆಂಪು ಅವರಿಗೆ ಸಲ್ಲಬೇಕು. ಅವರು ಮಕ್ಕಳ ಸಾಹಿತ್ಯದಿಂದ ಮಹಾ ಕಾವ್ಯದವರೆಗೆ ಕೃಷಿ ಮಾಡಿದ್ದಾರೆ. ವಿಶ್ವಮಾನವ ಪರಿಕಲ್ಪನೆಯನ್ನು ಬಿತ್ತುವ ಮೂಲಕ ಎಲ್ಲರ ಹೃದಯವನ್ನೂ ಗೆದ್ದರು. ಅವರ ಸಾಹಿತ್ಯದಲ್ಲಿ ಸಂವಿಧಾನದ ಆಶಯವೇ ಅಡಗಿದ್ದು, ಅವರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದರು.

ಈ ಸಂದರ್ಭ ವಿಶ್ರಾಂತ ಕುಲಪತಿ ಪ್ರೊ. ಜೆ. ಶಶಿಧರ ಪ್ರಸಾದ್, ವಿಧಾನ ಪರಿಷತ್ ಮಾಜಿ ಸದಸ್ಯ ಡಿ. ಮಾದೇಗೌಡ, ಕೇಂದ್ರ ಸರ್ಕಾರದ ಕ್ಷೇತ್ರ ಮತ್ತು ಪ್ರಚಾರ ನಿರ್ದೇಶಕಿ ಪೂರ್ಣಿಮಾ, ಪ್ರಾಧ್ಯಾಪಕ ಪ್ರೊ. ಎಂ. ಕೃಷ್ಣೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಜನಚೇತನ ಟ್ರಸ್ಟ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಹಾಗೂ ಗ್ರಾಮೀಣ ಟ್ರಸ್ಟ್ ಆಶ್ರಯದಲ್ಲಿ ಸಂಚರಿಸಿದ ರಥವು ಗೋಕುಲಂನ ನಿರ್ಮಲ ಕಾನ್ವೆಂಟ್, ಒಂಟಿಕೊಪ್ಪಲು ದೇವಸ್ಥಾನ, ಕೆ.ಆರ್.ಎಸ್ ರಸ್ತೆ, ರಿಂಗ್ ರಸ್ತೆಯ ಮೂಲಕ ಬನ್ನೂರಿಗೆ ಪಯಣ ಬೆಳೆಸಿತು.

ಕರುಣಾಮಯಿ ಫೌಂಡೇಶನ್, ರಂಗರಾವ್ ಸ್ಮಾರಕ ಅಂಧ ಮಕ್ಕಳ ಶಾಲೆ ಹಾಗೂ ವಿಶ್ವಮಾನವ ಪ್ರೌಢಶಾಲೆಯ ವಿದ್ಯಾರ್ಥಿಗಳು ವಾದ್ಯ ನುಡಿಸುತ್ತ ಹೆಜ್ಜೆ ಹಾಕಿದರು.

Leave a Reply

comments

Related Articles

error: