ಕರ್ನಾಟಕಪ್ರಮುಖ ಸುದ್ದಿ

ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ : ಹಾಸನ ಬಿಜೆಪಿ ಶಾಸಕನ ವಿರುದ್ಧ ಎಫ್‍ಐಆರ್ ದಾಖಲು

ಹಾಸನ (ಆ.31): ಪೊಲೀಸರಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ ಆರೋಪದ ಮೇಲೆ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಂ ಜೆ.ಗೌಡ ವಿರುದ್ಧ ಹಾಸನ ನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ನಗರಸಭೆ ಚುನಾವಣೆಯ ಸಂಬಂಧ 8ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ವೇಣು ಮತ್ತು ಇನ್ನಿಬ್ಬರು ಅಕ್ರಮವಾಗಿ ಸುಜಲ ಕಾಲೇಜು ರಸ್ತೆಯಲ್ಲಿ ಬುಧವಾರ ಮದ್ಯವನ್ನು ಹಂಚುತ್ತಿರುವ ಬಗ್ಗೆ ಜೆಡಿಎಸ್‌ ಕಾರ್ಯಕರ್ತ ಪ್ರವೀಣ್‌ ಎಂಬುವರು ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಈ ಸಂಬಂಧ ನಗರ ಪೊಲೀಸ್‌ ಠಾಣೆಯ ಸಹಾಯಕ ಉಪ ನಿರೀಕ್ಷಕ (ಎಎಸ್ಸೈ) ಆರ್‌.ಸತ್ಯನಾರಾಯಣ ಹಾಗೂ ಸಿಬ್ಬಂದಿ ಚಿದಾನಂದ್‌ ಸ್ಥಳಕ್ಕೆ ಹೋಗಿದ್ದಾರೆ. ಆಗ 8ನೇ ವಾರ್ಡ್‌ ಬಿಜೆಪಿ ಅಭ್ಯರ್ಥಿ ವೇಣು ಮತ್ತು ಇನ್ನಿಬ್ಬರ ಕೈಯಲ್ಲಿ 180 ಎಂಎಲ್‌ನ 9 ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಹೀಗಾಗಿ ವೇಣು ಮತ್ತು ಇನ್ನಿಬ್ಬರನ್ನು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಆಧಾರದಲ್ಲಿ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಈ ಸಂಬಂಧ ಪ್ರಕರಣವನ್ನು ದಾಖಲಿಸುವ ವೇಳೆ ರಾತ್ರಿ 11.45ರಲ್ಲಿ ಶಾಸಕ ಪ್ರೀತಂ ಜೆ.ಗೌಡ 15 ರಿಂದ 20 ಮಂದಿಯೊಂದಿಗೆ ಪೊಲೀಸ್‌ ಠಾಣೆಗೆ ಆಗಮಿಸಿದ್ದಾರೆ. ಈ ಪ್ರಕರಣವನ್ನು ದಾಖಲಿಸಬೇಡಿ ಎಂದು ಹೇಳಿ ದಸ್ತಗಿರಿ ಮಾಡಿದ್ದ ವೇಣು ಮತ್ತು ಇನ್ನಿಬ್ಬರು ವ್ಯಕ್ತಿಗಳನ್ನು ಠಾಣೆಯಿಂದ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಎಎಸ್ಸೈ ಆರ್‌.ಸತ್ಯನಾರಾಯಣ ದೂರು ನೀಡಿದ ಹಿನ್ನೆಲೆಯಲ್ಲಿ ಶಾಸಕ ಪ್ರೀತಂ ಜೆ.ಗೌಡ ಮೇಲೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣ ದಾಖಲಾಗಿದೆ.

ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಾಸನ ಶಾಸಕ ಪ್ರೀತಂ ಗೌಡ, “ಜೆಡಿಎಸ್‌ನವರು ರಾಜಕೀಯ ದ್ವೇಷದಿಂದ ನನ್ನ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಗೆಲುವನ್ನು ಸಹಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ನಗರದ 8ನೇ ವಾರ್ಡ್‌ನಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಅಭ್ಯರ್ಥಿಗಳ ನಡುವೆ ಮಾತಿಗೆ ಮಾತು ನಡೆದಿದೆ. ಆದರೆ, ಯಾವುದೇ ರೀತಿಯ ಘರ್ಷಣೆಯಾಗಿಲ್ಲ. ನಾನು ಠಾಣೆಗೆ ಹೋಗಿ ಪೊಲೀಸರ ಕರ್ತವ್ಯವನ್ನು ಅಡ್ಡಿ ಪಡಿಸಿಲ್ಲ. ಜೆಡಿಎಸ್‌ನವರು ನನ್ನನ್ನು ರಾಜಕೀಯವಾಗಿ ತುಳಿಯುವ ಹುನ್ನಾರದಿಂದ ಎಫ್‌ಐಆರ್‌ ದಾಖಲಿಸಿದ್ದಾರೆ” ಎಂದು ಆರೋಪಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: