ಪ್ರಮುಖ ಸುದ್ದಿಮೈಸೂರು

ಅರ್ಜುನನನ್ನು ಮುನ್ನಡೆಸುವ ಸಲುವಾಗಿ ಮಾವುತ-ಕಾವಾಡಿ ನಡುವೆ ಮುಸುಕಿನ ಗುದ್ದಾಟ : ಯಾರಾಗಲಿದ್ದಾರೆ ಅರ್ಜುನನ ಸಾರಥಿ?

ಮೊದಲ ತಂಡದಲ್ಲಿ ಬರುತ್ತಿಲ್ಲ ಬಲರಾಮ, ಅಭಿಮನ್ಯು, ದ್ರೋಣ

ಮೈಸೂರು, ಆ. 31:-  ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುವ ದಸರಾ ಗಜಪಡೆಯ ಕ್ಯಾಪ್ಟನ್ ಅರ್ಜುನನನ್ನು ಮುನ್ನಡೆಸುವ ಸಲುವಾಗಿ ಮಾವುತ-ಕಾವಾಡಿ ನಡುವೆ ತೀವ್ರ ಮುಸುಕಿನ ಗುದ್ದಾಟ ಆರಂಭವಾಗಿದೆ.

ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ಬಂದು ಅರಮನೆ ಆವರಣದಿಂದ ಬನ್ನಿಮಂಟಪ ಮೈದಾನದವರೆಗೆ ಸುಮಾರು 7ಕಿ.ಮೀ ದೂರ ಮೆರವಣಿಗೆ ಸಾಗುವ ಮಾರ್ಗದ ಇಕ್ಕೆಲಗಳಲ್ಲಿ ಜಾಗ ಸಿಕ್ಕ ಕಡೆಗಳಲ್ಲೆಲ್ಲಾ ನಿಂತು ನೋಡುವ ಲಕ್ಷೋಪಲಕ್ಷ ಜನರು ಅಂಬಾರಿಯನ್ನು ಹೊತ್ತು ತರುವ ಅರ್ಜುನನನ್ನು ನೋಡುತ್ತಲೇ ಭಕ್ತಿಭಾವದಿಂದ ಜೈಕಾರ ಕೂಗುತ್ತ ಧನ್ಯತೆ ಮೆರೆಯುತ್ತಾರೆ.

ಇಷ್ಟೆಲ್ಲಾ ಗೌಜು-ಗದ್ದಲದ ನಡುವೆ ಗಜ ಗಾಂಭೀರ್ಯದಿಂದ ಸಾಗುವ ಅರ್ಜುನನನ್ನು ಮುನ್ನಡೆಸುವ ಮಾವುತನಿಗೂ ವಿಶೇಷ ಗೌರವ ಸಲ್ಲುತ್ತದೆ. ಇದಕ್ಕಾಗಿಯೇ ಈ ಹಿಂದೆ ಹಲವು ವರ್ಷಗಳ ಕಾಲ ಅರ್ಜುನನ ಮಾವುತನಾಗಿದ್ದ ದೊಡ್ಡಮಾಸ್ತಿ ನಿಧನರಾದ ಬಳಿಕ ಕಳೆದ ಮೂರು ವರ್ಷಗಳಿಂದ ಅರ್ಜುನನನ್ನು ಮುನ್ನಡೆಸುವ ವಿಷಯದಲ್ಲಿ ಮಾವುತ ವಿನು ಮತ್ತು ಕಾವಾಡಿಯಾಗಿರುವ ದೊಡ್ಡಮಾಸ್ತಿಯ ಮಗ ಸಣ್ಣಪ್ಪ (ಮಹೇಶ)ನ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ.

ಮಾವುತ ದೊಡ್ಡಮಾಸ್ತಿ ಜೊತೆಗೆ ಅರ್ಜುನ ಹೊಂದಿಕೊಂಡಿದ್ದರಿಂದ ನಿವೃತ್ತಿ ನಂತರವೂ 2015ರಲ್ಲಿ ದೊಡ್ಡಮಾಸ್ತಿಯನ್ನು ಅರ್ಜುನನನ್ನು ಮುನ್ನಡೆಸಲು ಬಳಸಿಕೊಳ್ಳಲಾಗಿತ್ತು. ದೊಡ್ಡ ಮಾಸ್ತಿ ನಿಧನಾ ನಂತರ 2016ರಲ್ಲಿ ಅರ್ಜುನ ದೊಡ್ಡ ಮಾಸ್ತಿಯ ಕುಟುಂಬದವರ ಜೊತೆಗೆ ಹೊಂದಿಕೊಂಡಿದೆ ಎಂಬ ಕಾರಣಕ್ಕೆ ದೊಡ್ಡ ಮಾಸ್ತಿಯ ಮಗ ಸಣ್ಣಪ್ಪನಿಗೆ ಅಂಬಾರಿ ಆನೆ ಮುನ್ನಡೆಸುವ ಜವಾಬ್ದಾರಿ ನೀಡಲಾಗಿತ್ತು. ಆ ಕಾರ್ಯದಲ್ಲಿ ಸಣ್ಣಪ್ಪ ಯಶಸ್ವಿಯಾಗಿದ್ದ. 2017ರಲ್ಲಿ ಮಾವುತ ಆನೆಯನ್ನು ಮುನ್ನಡೆಸಬೇಕು ಎಂಬ ತೀರ್ಮಾನದಿಂದ ಕಾವಾಡಿ ಸಣ್ಣಪ್ಪನ ಬದಲಿಗೆ ಅರ್ಜುನನ್ನು ಮುನ್ನಡೆಸುವ ಹೊಣೆಯನ್ನು ಮಾವುತ ವಿನುಗೆ ವಹಿಸಲಾಗಿತ್ತು. ವಿನು ಕೂಡ ಅರ್ಜುನನನ್ನು ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದ. ಈ ಬೆಳವಣಿಗೆಯಿಂದ ಅಸಮಾಧಾನಗೊಂಡಿರುವ ಸಣ್ಣಪ್ಪ, ಇದೀಗ ಮತ್ತೂಮ್ಮೆ ತನಗೆ ಅರ್ಜುನನನ್ನು ಮುನ್ನಡೆಸುವ ಅವಕಾಶ ಕೊಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾನೆ. ಈ ಸಂಬಂಧ ಸೆ.2 ರಂದು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. ಮೈಸೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ರಾಮಪ್ಪ ಚಳ್ಳಾಪುರೆ ಮಾತನಾಡಿ ಗಜಪಯಣದ ಸಿದ್ಧತೆಯಲ್ಲಿರುವುದರಿಂದ ಸಣ್ಣಪ್ಪ ಮನವಿ ಕೊಟ್ಟಿರುವುದು ಗಮನಕ್ಕೆ ಬಂದಿಲ್ಲ. ಅಧಿಕಾರಿಗಳು ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.

ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಸೆ.2ರಂದು ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸುತ್ತಿರುವ ಆರು ಆನೆಗಳ ಮೊದಲ ತಂಡದಲ್ಲಿ ಪ್ರಮುಖ ಆನೆಗಳಾದ ಬಲರಾಮ, ಅಭಿಮನ್ಯು, ದ್ರೋಣ ಬರುತ್ತಿಲ್ಲ. ಕಾಡಾನೆ ಸೆರೆ ಕಾರ್ಯಾಚರಣೆಗೆ ಹೋಗಿರುವ ಹಿನ್ನೆಲೆಯಲ್ಲಿ ಅವುಗಳ ಬದಲಿಗೆ ಮೊದಲ ತಂಡದಲ್ಲಿ ಇದೇ ಮೊದಲ ಬಾರಿಗೆ ವಿಕ್ರಮ, ಗೋಪಿ ಆನೆಗಳು ಸ್ಥಾನ ಪಡೆದುಕೊಂಡಿವೆ.

ಅಂಬಾರಿ ಹೊರುವ ಆನೆ ಅರ್ಜುನನ ನೇತೃತ್ವದಲ್ಲಿ ಮೊದಲ ತಂಡದಲ್ಲಿ 6 ಆನೆಗಳು ಆಗಮಿಸುತ್ತಿವೆ. ಪೂರ್ವ ನಿಗದಿ ಪ್ರಕಾರ ಮೊದಲ ತಂಡದಲ್ಲಿ ಬಲರಾಮ, ಅಭಿಮನ್ಯು ಮತ್ತು ದ್ರೋಣ ಬರಬೇಕಿತ್ತು. ಆದರೆ ರಾಮನಗರದಲ್ಲಿ ಜನರಿಗೆ ಉಪಟಳ ನೀಡುತ್ತಿರುವ ಕಾಡಾನೆಯ ಕಾರ್ಯಾಚರಣೆಗೆ ಬಲರಾಮ, ಅಭಿಮನ್ಯು ಮತ್ತು ದ್ರೋಣ ಸೇರಿದಂತೆ ಕೆಲ ಆನೆಗಳನ್ನು ಕಳುಹಿಸಲಾಗಿದೆ. ಕಾಡಾನೆಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸುವ ಹಾಗೂ ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿರುವ ಈ 3 ಆನೆಗಳಿಂದ ಮುಂಚೂಣಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೊದಲ ತಂಡದಲ್ಲಿ, ಎರಡನೇ ತಂಡದ ಬದಲಿ 3 ಆನೆಗಳನ್ನು ಕರೆತರಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: