ಪ್ರಮುಖ ಸುದ್ದಿ

ಗ್ರಾಮಗಳಿಗೆ ಕೆಎಸ್‍ಆರ್‍ಟಿಸಿ ಬಸ್ ಸಂಚರಿಸಲು ನಿರಾಕರಿಸಿದ ಹಿನ್ನಲೆ ಧರಣಿ

ರಾಜ್ಯ(ಮಡಿಕೇರಿ)ಆ.31:- ಪ್ರಕೃತಿ ವಿಕೋಪದಿಂದ ಸಂತ್ರಸ್ತರಾಗಿರುವ ಗ್ರಾಮಗಳಿಗೆ ಕೆಎಸ್‍ಆರ್‍ಟಿಸಿ ಬಸ್ ಸಂಚರಿಸಲು ನಿರಾಕರಿಸಿದ ಹಿನ್ನಲೆ, ಗ್ರಾಮಸ್ಥರು ಸಂಚಾರ ನಿಯಂತ್ರಕರ ಕಚೇರಿ ಎದುರು ಧರಣಿ ನಡೆಸಿ, ನಂತರ ಬಸ್ ಪಡೆದು ಗ್ರಾಮಕ್ಕೆ ತೆರಳಿದ ಘಟನೆ ಶುಕ್ರವಾರ ನಡೆದಿದೆ.

ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಕ್ಕರಳ್ಳಿ, ಸೂರ್ಲಬ್ಬಿ, ಮಂಕ್ಯಾ, ಕುಂಬಾರಗಡಿಗೆ ಗ್ರಾಮದಿಂದ ಬೆಳಿಗ್ಗೆ ಪಟ್ಟಣಕ್ಕೆ ಬಂದ ಬಸ್, ಮಧ್ಯಾಹ್ನ 1.30 ಕ್ಕೆ ಗಂಟೆಗೆ ವಾಪಾಸ್ಸು ಹೋಗಲು ನಿರಾಕರಿಸಿದ ಕಾರಣ, ಪ್ರಯಾಣಿಕರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದರು.

ಪ್ರಕೃತಿ ವಿಕೋಪದಿಂದ ಜನರು ಸಂಕಷ್ಟದಲ್ಲಿದ್ದಾರೆ. ಪಟ್ಟಣದಿಂದ ಸೂರ್ಲಬ್ಬಿಗೆ ತೆರಳಲು 400 ರೂ.ಗಳನ್ನು ಆಟೋದವರು ಕೇಳುತ್ತಾರೆ. ದುಪ್ಪಟ್ಟು ಬಾಡಿಗೆ ನೀಡಿ ಗ್ರಾಮಗಳಿಗೆ ತಲುಪಲು ಸಾಧ್ಯವಿಲ್ಲ. ಹಲವು ವರ್ಷಗಳಿಂದ ಚಾಲ್ತಿಯಲ್ಲಿದ್ದ ಹಳೆಯ ಮಾರ್ಗಗಳನ್ನು ಕೆಎಸ್‍ಆರ್‍ಟಿಸಿ ತಡೆಹಿಡಿಯುವ ಕೃತ್ಯಕ್ಕೆ ಹಿರಿಯ ಅಧಿಕಾರಿಗಳು ಪ್ರಯತ್ನಪಡುತ್ತಿದ್ದಾರೆ. ಶನಿವಾರದಿಂದ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಸರ್ಕಾರಿ ಬಸ್ ಮೂರು ಬಾರಿ ಸಂಚರಿಸಬೇಕು. ತಪ್ಪಿದಲ್ಲಿ ಗ್ರಾಮದ ಸಂತ್ರಸ್ತರು ಜಿಲ್ಲಾಧಿಕಾರಿಗಳ ಕಚೇರಿ  ಎದುರು ಧರಣಿ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಕೆಲ ಖಾಸಗಿ ವಾಹನ ಮಾಲೀಕರು ಸ್ವಾರ್ಥಕ್ಕಾಗಿ, ಕೆಎಸ್‍ಆರ್‍ಟಿಸಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಗ್ರಾಮಕ್ಕೆ ಸಂಚರಿಸುತ್ತಿದ್ದ ಸರ್ಕಾರಿ ಬಸ್‍ನ್ನು ತಡೆಹಿಡಿಯಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಗರ್ವಾಲೆ ಮಂಡಲ ಪಂಚಾಯಿತಿಯ ಮಾಜಿ ಪ್ರದಾನ ಕೊಚ್ಚೆರ ಓಂಕಾರಪ್ಪ ದೂರಿದರು.

ಈ ಸಂದರ್ಭ ದೂರವಾಣಿ ಮೂಲಕ ಘಟಕದ ವ್ಯವಸ್ಥಾಪಕರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಮತ್ತೋರ್ವ ಅಧಿಕಾರಿ ಇರಸಪ್ಪ ಎಂಬುವವರು ಪ್ರತಿಭಟನೆ ಕಾರರರಿಗೆ ಉಡಾಫೆಯ ಉತ್ತರ ನೀಡಿದ ಹಿನ್ನಲೆಯಲ್ಲಿ ನಿಲ್ದಾಣದಲ್ಲಿದ್ದ ಬಸ್ಸುಗಳನ್ನು ಕಳುಹಿಸಲು ಬಿಡುವುದಿಲ್ಲವೆಂದು ಪ್ರತಿಭಟನಾಕರರು ಎಚ್ಚರಿಸಿದರು. ತಕ್ಷಣವೆ ಗರ್ವಾಲೆ ಮಾರ್ಗಕ್ಕೆ ಬದಲಿ ಬಸ್ಸು ವ್ಯೆವಸ್ಥೆಯನ್ನು ಮಾಡಲಾಯಿತು. ನಾಳೆಯಿಂದ ನಿಗದಿತ ಸಮಯದಲ್ಲೇ ಬಸ್ಸು ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಸಂಚಾರಿ ನಿಯಂತ್ರಕ ಕಾರ್ಯಪ್ಪ ತಿಳಿಸಿದ  ಮೇರೆಗೆ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.

ಪ್ರತಿಭಟನೆಯಲ್ಲಿ ಜನಾಂದೋಲನ ಸಮಿತಿಯ ಕೆ.ಪಿ.ದಿನೇಶ್, ಮಾಜಿ ಸೈನಿಕ ಅಡ್ಡಂಡ ಎಸ್.ಪೂವಯ್ಯ, ಮುದ್ದಂಡ ಎಸ್.ತಿಮ್ಮಯ್ಯ  ಸೇರಿದಂತೆ ಗ್ರಾಮಸ್ಥರು ಪ್ರತಿಭಟನೆಯಲ್ಲಿದ್ದರು.

ನಿರಾಶ್ರಿತರಾಗಿರುವ ಜನರ ಕಷ್ಟಗಳಿಗೆ ಸ್ಪಂದಿಸಬೇಕಾಗಿರುವುದು ಇಲಾಖೆಯ ಅಧಿಕಾರಿಗಳ ಕರ್ತವ್ಯ. ಆದರೆ ಮಡಿಕೇರಿ ಘಟಕದ ಕೆಲವು ಅಧಿಕಾರಿಗಳು ಖಾಸಗಿ ವಾಹನಗಳ ಮಾಲಿಕರೊಂದಿಗೆ ಶಾಮೀಲಾಗಿರುವ ಆರೋಪ ಕೇಳಿಬರುತ್ತಿದೆ. ಡಿಪೋ ವ್ಯವಸ್ಥಾಪಕರು ಇದರ ಬಗ್ಗೆ ಗಮನ ಹರಿಸಬೇಕು. ಬಸ್ ಸಂಚಾರ ಸ್ಥಗಿತಗೊಳಿಸಿದರೆ, ಸಾರಿಗೆ ಸಚಿವರಿಗೆ ದೂರು ನೀಡಲಾಗುವುದು ಎಂದು ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷರು ಎಂ.ಬಿ.ಅಭಿಮನ್ಯು ಕುಮಾರ್ ತಿಳಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: