ಕರ್ನಾಟಕಮೈಸೂರುಸಿಟಿ ವಿಶೇಷ

ಬೊಂಬೆಮನೆ: ಕಣ್ಮನ ಸೆಳೆಯುತ್ತಿವೆ ಮನಮೋಹಕ ಬೊಂಬೆಗಳು

ಯಶೋಧೆಗೆ ಬಾಯಲ್ಲಿ ವಿಶ್ವರೂಪ ತೋರುತ್ತಿರುವ ಬಾಲಕೃಷ್ಣ, ರಾಧೆಯ ಜಡೆ ಹೆಣೆದು ಅಲಂಕರಿಸುತ್ತಿರುವ ಮಾಧವ, ಕೃಷ್ಣ-ರುಕ್ಮಿಣಿ ಕಲ್ಯಾಣ ಒಂದಾ ಎರಡಾ… ಎಲ್ಲವೂ ಒಂದೇ ಕ್ಷಣದಲ್ಲಿ ನಿಮ್ಮ ಅಕ್ಷಿ ಪಟಲದೊಳಗೆ ಸೆರೆಯಾಗಬಲ್ಲಂತಹ ಒಂದು ಅದ್ಭುತ ವಾತಾವರಣ ಸೃಷ್ಟಿಯಾಗಿರುವುದು ನಜರಾಬಾದ್ ಮುಖ್ಯ ರಸ್ತೆಯಲ್ಲಿರುವ ಪ್ರತಿಮಾ ಗ್ಯಾಲರಿಯಲ್ಲಿರುವ ಬೊಂಬೆ ಮನೆಯಲ್ಲಿ.

ham_8977

ಬೊಂಬೆಗಳನ್ನು ಇಷ್ಟಪಡದವರು ಬಹುಶಃ ಯಾರೂ ಇರಲಿಕ್ಕಿಲ್ಲ. ಯಾಕೆಂದರೆ ಅದರ ರಚನೆಯೇ ನೋಡುಗರ ಮನಸ್ಸನ್ನು ಕದ್ದಿರುತ್ತದೆ. ಇತಿಹಾಸ, ಪುರಾಣ, ಯಾವುದೇ ಪ್ರಸಂಗವನ್ನು ಕಳೆಗಟ್ಟಲು, ರಸವತ್ತಾಗಿಸಲು ವಿವರಿಸಲು ಈ ಗೊಂಬೆಗಳಿಂದ ಮಾತ್ರ ಸಾಧ್ಯ. ಅದೆಷ್ಟೇ ಸ್ಮಾರ್ಟ್ ಫೋನ್‍ಗಳು ಬಂದಿದ್ದರೂ ಗೊಂಬೆಗಳ ಹಬ್ಬ ಮಾತ್ರ ಕಳೆಗುಂದಲ್ಲ.

ಸದ್ದಿಲ್ಲದೆ ಅವತರಿಸುವ ಬೊಂಬೆಗಳು ಕ್ಷಣಮಾತ್ರದಲ್ಲಿ ಮಾಯಾಲೋಕವನ್ನೇ ಸೃಷ್ಟಿಸಿಬಿಡುತ್ತವೆ. ಮೈಸೂರಿನಲ್ಲಿ ದಸರಾ ಹಬ್ಬದ ಸಂಭ್ರಮ ಒಂದೆಡೆಯಾದರೆ, ಇನ್ನೊಂದೆಡೆ ಆರತಿ ಬೆಳಗಿ ಸಂಭ್ರಮಪಡುವ ಬೊಂಬೆ ಹಬ್ಬದ ಗಮ್ಮತ್ತು.  ಪಾಶ್ಚಾತ್ಯ ಸಂಸ್ಕೃತಿಯು ಪರಕಾಯ ಪ್ರವೇಶ ಮಾಡುತ್ತಿದ್ದರೂ ನಮ್ಮ ನೆಲದಲ್ಲಿ ಸಹಜಧರ್ಮದ ಜಾತ್ಯಾತೀತ ಸೊಗಡು ಮಾತ್ರ ಮನೆಮನೆಯಲ್ಲೂ ವಿಜೃಂಭಿಸುತ್ತಿದೆ.

ham_8973

ವರುಷ ವರುಷವೂ ಹೊಸತನ್ನೇನಾದರೂ ಹುಡುಕುವ ಬೊಂಬೆಮನೆಯಲ್ಲಿ ಈ ಬಾರಿ ಮಣ್ಣು ಹಾಗೂ ಕಾಗದ ರಟ್ಟಿನ ದಸರಾ ಜಂಬೂ ಸವಾರಿಯ ಬೊಂಬೆಗಳು, ಲಿಂಗಧೀರರಾದ ವೀರಗಾಸೆಯವರ ಮೇಳ, ಕೆಂಪು ಸೋಮ, ಬಿಳಿ ಸೋಮಗಳು ಆಕರ್ಷಣೆಯ ಕೇಂದ್ರ ಬಿಂದುಗಳಾಗಿವೆ. ಅದರ ಜೊತೆ ಮೈಸೂರಿನ ವಿಶಿಷ್ಟ ವಜ್ರಮುಷ್ಟಿ ಕಾಳಗದ ಬೊಂಬೆಗಳು ಚಿತ್ತಾಕರ್ಷಕವಾಗಿವೆ.

ಅಷ್ಟೇ ಅಲ್ಲ ಪುರಂದರದಾಸ, ಕನಕದಾಸ, ಎಂ.ಎಸ್. ಸುಬ್ಬುಲಕ್ಷ್ಮಿ ಇವರ ಬೊಂಬೆಗಳನ್ನು ಕರ್ನಾಟಕ ಸಂಗೀತದ ತ್ರಿಮೂರ್ತಿಗಳು ಎಂಬ ನಾಮಾಂಕಿತದಿಂದ ಪರಿಚಯಿಸುತ್ತಿದೆ. ಹಿಮಶೀತ ಪ್ರದೇಶದ ಎಸ್ಕಿಮೋಗಳು ಹಾಗೂ ಮರುಭೂಮಿಯ ಅರಬ್ಬೀ ಜನರ ಬೊಂಬೆ ದೃಶ್ಯಗಳು ಕಿನ್ಹಾಳ ಕಲೆಯಲ್ಲಿ ರಚಿತವಾದ ವೈವಿಧ್ಯಮಯ ಕೆಲಸಗಳಲ್ಲಿ ನಿರತ ಲಲನಾಮಣಿಗಳು ಹೊಸ ಸೇರ್ಪಡೆಗಳಾಗಿವೆ.

ಭಾರತ ಗೋವುಗಳ ದೇಶ ಎಂಬುದನ್ನು ಬಿಂಬಿಸಿಸಲು ಈ ಬಾರಿ ವಿಶಿಷ್ಟ ದೇಸಿ ರಾಸುಗಳ ಬೊಂಬೆಗಳಿಗೆ ಆದ್ಯತೆ ನೀಡಲಾಗಿದೆ. 37ಕ್ಕೂ ಅಧಿಕ ರಾಸುಗಳು ನಮ್ಮ ದೇಶದಲ್ಲಿ ದೊರಕುತ್ತಿದ್ದು, ಕೆಲವು ಆಯ್ದ ತಳಿಯ ರಾಸುಗಳ ಬೊಂಬೆಗಳು ಇಲ್ಲಿ ಗಮನ ಸೆಳೆಯುತ್ತಿವೆ.

ಅಮೃತಮಹಲ್, ಮಲೆನಾಡಗಿಡ್ಡ, ಕೇನ್ ಕಥಾ, ರಾಠೀ, ದಾಂಗೀ, ಜವಾರಿ ಹೇಳುತ್ತಾ ಹೋದರೆ ಹನುಮಂತನ ಬಾಲದಂತೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಂದು ಬಹುತೇಕ ಅಳಿವಿನಂಚಿನಲ್ಲಿರುವ ದೇಸೀ ತಳಿಗಳ ಗೋವುಗಳನ್ನು ಕಾಯುತ್ತಾ ನಿಂತಿರುವ ಗೋಪಾಲ, ಗೋಪಾಲಕೃಷ್ಣನನ್ನು ಸುತ್ತುವರಿದಿರುವ ಗೋವುಗಳು, ನಾಡಹಸುಗಳು, ಗೋಪೂಜೆ ಸ್ವೀಕರಿಸಲು ಬರುವ ಸಾಂಪ್ರದಾಯಿಕ ಅಲಂಕಾರದೊಂದಿಗೆ ಮನಸೂರೆಗೊಳ್ಳುತ್ತಿವೆ.

ಬೊಂಬೆಮನೆಯಲ್ಲಿ ರಾಜ-ರಾಣಿ ಬೊಂಬೆಗಳು ಬಾಗಿನ ನೀಡಲು ಸಜ್ಜಾಗುತ್ತಿದ್ದಾರೆ. ಹಾಗಿದ್ದಲ್ಲಿ ಮತ್ತ್ಯಾಕೆ ತಡ. ನೀವೂ ಒಮ್ಮೆ ನೋಡಿ ಆನಂದಿಸಬಹುದಲ್ಲ.

Leave a Reply

comments

Related Articles

error: