ಕರ್ನಾಟಕಪ್ರಮುಖ ಸುದ್ದಿಮೈಸೂರು

ಯಡಿಯೂರಪ್ಪ ಐಟಿ ಇಲಾಖೆಯ ಏಜೆಂಟರೇ? ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಇಬ್ಬರು ಸಚಿವರು ಹಾಗೂ ವಿಧಾನಪರಿಷತ್ ಸದಸ್ಯರೋರ್ವರು ಐಟಿ ಕೈಯ್ಯಲ್ಲಿ ಸದ್ಯದಲ್ಲೇ ಸಿಕ್ಕಿಬೀಳುತ್ತಾರೆಂದು ಹೇಳಲು ಯಡಿಯೂರಪ್ಪನವರು ಐಟಿ ಇಲಾಖೆಯ ಏಜೆಂಟರೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು.

ಮೈಸೂರಿನಲ್ಲಿ ಶುಕ್ರವಾರ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮದವರೊಂದಿಗೆ ಮಾತನಾಡಿದರು. ಜವಾಬ್ದಾರಿಯುತ ಸ್ಥಾನದಲ್ಲಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬೇಜವಾಬ್ದಾರಿ ಹೇಳಿಕೆಗಳನ್ನು ಕೊಡಬಾರದು. ಯಾವ ಆಧಾರದ ಮೇಲೆ ಹಾಗೇ ಆರೋಪ ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದರು.

ಬಿಜೆಪಿ-ಜೆಡಿಎಸ್ ಎರಡೂ ಪಕ್ಷಗಳೂ ತಾವೇ ಅಧಿಕಾರಕ್ಕೆ ಬಂದವರಂತೆ ವರ್ತಿಸುತ್ತಿದ್ದಾರೆ. ನಾವು ಜೆಡಿಎಸ್ ಪಕ್ಷದಲ್ಲಿದ್ದಾಗಲೇ ಅಧಿಕಾರಕ್ಕೆ ಬರಲಾಗಲಿಲ್ಲ. ಜನತೆ ಆಶೀರ್ವಾದ ಮಾಡಬೇಕಷ್ಟೇ. ಇವರೆಲ್ಲಾ ಏನೇ ಮಾಡಿದರೂ ಮುಂದಿನ ಬಾರಿಯೂ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರೋದು ಎಂದು ಹೇಳಿದರು.

ರಂಗಾಯಣ ಕಲಾವಿದರ ಸಮಸ್ಯೆಗಳ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ರಂಗಾಯಣ ಕಲಾವಿದರ ಸಮಸ್ಯೆಗಳ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ಜೊತೆ ಚರ್ಚಿಸುತ್ತೇನೆ ಎಂದರು.

ನೀಟ್ ಪರೀಕ್ಷೆ ಕನ್ನಡದಲ್ಲಿ ಬರೆಯಲು ಅವಕಾಶ ಕೊಡದಿರುವ ಕುರಿತು ಪ್ರಶ್ನಿಸಿದಾಗ ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಮುಖ್ಯಕಾರ್ಯದರ್ಶಿಗೆ ಹೇಳಿದ್ದೇನೆ. ಕನ್ನಡವೂ ಸಹ ಎಲ್ಲ ಭಾಷೆಗಳಂತೆ ರಾಷ್ಟ್ರೀಯ ಭಾಷೆಯಾಗಿದ್ದು ಕನ್ನಡಕ್ಕೆ ಅವಕಾಶ ಕೊಡದ ಕುರಿತು ನಮ್ಮ ರಾಜ್ಯದ ಸಂಸದರು ಸಂಸತ್ ನಲ್ಲಿ ಧ್ವನಿ ಎತ್ತಬೇಕಿತ್ತು ಎಂದರು.

ಈ ಸಂದರ್ಭ ಕಾಂಗ್ರೆಸ್ ಕೆಲವು ಮುಖಂಡರು ಸಿಎಂ ಸಿದ್ದರಾಮಯ್ಯ ಜೊತೆಗಿದ್ದರು.

Leave a Reply

comments

Related Articles

error: