ಮೈಸೂರು

ಕ್ರಿಯಾಶೀಲತೆ ಒರೆಗೆ ಹಚ್ಚಿದ ಚಿತ್ತಾಕರ್ಷಕ ಕರಕುಶಲ ವಸ್ತುಪ್ರದರ್ಶನಕ್ಕೆ ಇಂದು  ಚಾಲನೆ

ಮೈಸೂರು, ಆ.31:- ನಗರದ ಹೆಬ್ಬಾಳ್ ರಿಂಗ್ ರಸ್ತೆಯಲ್ಲಿರುವ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಇಂದಿನಿಂದ ಸೆಪ್ಟೆಂಬರ್ 9ರವರೆಗೆ 10 ದಿವಸಗಳ ಕಾಲ ಆಯೋಜಿಸಿರುವ ಬೃಹತ್ ಕರಕುಶಲ ವಸ್ತುಪ್ರದರ್ಶನಕ್ಕೆ  ಪೊಲೀಸ್ ಅಕಾಡೆಮಿ  ನಿರ್ದೇಶಕ ವಿಪುಲ್ ಕುಮಾರ್ ವಿದ್ಯುಕ್ತವಾಗಿ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

ಬಳಿಕ ಅವರು ಮಾತನಾಡಿದ ಅವರು  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂತಹ ಮೇಳಗಳು ನಡೆಯುತ್ತಿರುವುದು ಸಂತೋಷದ ವಿಷಯ. ಗ್ರಾಹಕರು ಇಲ್ಲಿಗೆ ಬಂದು ತಮಗೆ ಇಷ್ಟವಾದ ವಸ್ತುಗಳನ್ನು ಖರೀದಿ ಮಾಡಬೇಕು ಅಥವಾ ಅವರು ಇಲ್ಲಿಗೆ ಬಂದು ವೀಕ್ಷಿಸಿದರೆ ಸಾಕು, ಮಾರಾಟಗಾರರಿಗೆ ಉತ್ತೇಜನ ಸಿಗುತ್ತದೆ. ಇಲ್ಲಿಗೆ ತಮಿಳುನಾಡಿನಿಂದ ಬಂದಿರುವ ಶೇಖರ್‍ಗೆ ಕನ್ನಡ ಬರುವುದಿಲ್ಲ. ಆದರೂ ಅವರಲ್ಲಿ ಉತ್ಸಾಹ, ಹುಮ್ಮಸ್ಸು ಸಾಕಷ್ಟಿದೆ ಎಂದು ತಿಳಿಸಿದರು.

ಈ ಮೇಳದಲ್ಲಿ ಬಟ್ಟೆ, ಬ್ಯಾಗ್, ಬಾಟಲಿ ಮುಂತಾದವುಗಳ ಮೇಲೆ ವಿಭಿನ್ನವಾದ ಶೈಲಿಯಲ್ಲಿ ಚಿತ್ರಗಳನ್ನು ಬಿಡಿಸಿ, ಹಳೆಯ ವಸ್ತುಗಳನ್ನು ಬಟ್ಟೆಗಳ ಮೂಲಕ ಚಿತ್ತಾಕರ್ಷವಾಗಿ ಕಾಣುವಂತೆ ಮಾಡಲಾಗಿದೆ. ದುಪ್ಪಟ್ಟಾ ಪೇಂಟಿಂಗ್, ಟೈ ಅಂಡ್ ಡೈ, ಬಾಟಲ್ ಆರ್ಟ್ಸ್, ಒನ್ ಸ್ಟ್ರೋಕ್ ಪೇಂಟಿಂಗ್, ಡಿಸೈನರ್ ಬ್ಲೌಸ್, ಸ್ಯಾರಿ ಪೇಂಟಿಂಗ್, ಬ್ಲಾಕ್ ಪೇಂಟಿಂಗ್, ಸ್ಟೇನ್ಸಿಲ್ (ಟೂಥ್ ಬ್ರಷ್), ಶೇಡಿಂಗ್ ಪೇಂಟಿಂಗ್, ಮೀನೈಚರ್ ಪೇಂಟಿಂಗ್, ಶಿಲ್ಪಕಾರ ಪೇಂಟಿಂಗ್ ಸೇರಿದಂತೆ ಕಸೂತಿ, ಹೆಣಿಕೆ, ಸ್ಟೀಚ್ ಈ ಎಲ್ಲಾ ವಸ್ತುಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ. ಮನೆಯಲ್ಲಿನ ಬಳಕೆಯಾಗದ ವಸ್ತುಗಳನ್ನು ಬಳಸಿಕೊಂಡು ವಿವಿಧ ಬಗೆಯಲ್ಲಿ ಬಣ್ಣಗಳನ್ನು ಬಳಿಸಿ ಚಿತ್ತಾಕರ್ಷವಾಗಿ ಕಾಣುವ ವಸ್ತುಗಳನ್ನು ಇಲ್ಲಿ ಇಡಲಾಗಿದೆ. ಮಕ್ಕಳ ಉಡುಗೊರೆಗಳು, ಆಭರಣಗಳು, ಆಟಿಕೆ ಸಾಮಾನುಗಳು, ಬ್ಯಾಗ್, ಟಿಫಿನ್ ಬಾಕ್ಸ್, ಬಾಟಲಿಗಳು ಸೇರಿದಂತೆ ವಿಧ ವಿಧದ ವಸ್ತುಗಳನ್ನು ಆಕರ್ಷಕವಾಗಿ ಕಾಣುವಂತೆ ವಸ್ತುಪ್ರದರ್ಶನದಲ್ಲಿ ಇಡಲಾಗಿದೆ.

ವಸ್ತುಪ್ರದರ್ಶನವು ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಸಾರ್ವಜನಿಕರಿಗೆ ಉಚಿತವಾಗಿ ತೆರೆದಿರುತ್ತದೆ. ಕಾರ್ಯಕ್ರಮದಲ್ಲಿ ಸಂತಾನಂ, ಮೇಳದ ಸಂಯೋಜನಾಧಿಕಾರಿ ರಾಕೇಶ್ ರಾಯ್ ಮುಂತಾದವರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: