ಪ್ರಮುಖ ಸುದ್ದಿ

ಪ್ರಾಕೃತಿಕ ವಿಪತ್ತು : ಸರಕಾರ ನಿರ್ಲಕ್ಷಿಸಿದರೆ ನಮ್ಮ ನೆಲೆಯನ್ನು ನಾವೇ ಪುನರ್ ನಿರ್ಮಿಸುತ್ತೇವೆ : ಸಿಎನ್‍ಸಿ ಪ್ರತಿಪಾದನೆ 

ರಾಜ್ಯ(ಮಡಿಕೇರಿ) ಆ.31 : – ಇತ್ತೀಚೆಗೆ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ನೆಲೆ ಕಳೆದುಕೊಂಡವರಿಗೆ ಸರಕಾರ ಸಕಾಲದಲ್ಲಿ ಪುನರ್ ವಸತಿ ಕಲ್ಪಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ನಮ್ಮ ನೆಲೆಯನ್ನು ನಾವೇ ಪುನರ್ ನಿರ್ಮಿಸಿಕೊಳ್ಳುತ್ತೇವೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಪ್ರತಿಪಾದಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಭೂಕುಸಿತದ ಮೂಲಕ ಕೊಡವ ಪ್ರದೇಶಕ್ಕೆ ಹಾನಿಯಾಗಿರುವುದು ಅಂತರರಾಷ್ಟ್ರೀಯ ವಿಪತ್ತಾಗಿದೆ, ಇದನ್ನು ನಿರ್ವಹಣೆ ಮಾಡಲು ಸರಕಾರದಿಂದ ಸಾಧ್ಯವಾಗದಿದ್ದಲ್ಲಿ ನಮಗೆ ಬಿಟ್ಟು ಕೊಡಿ ಎಂದು ಒತ್ತಾಯಿಸಿದರು. ಕೊಡಗು ಕೇಂದ್ರಾಡಳಿತ ಪ್ರದೇಶವಾದರೆ, ಪತನವಾದ ನಮ್ಮ ನೆಲೆಯನ್ನು ನಾವೇ ಪುನರ್ ನಿರ್ಮಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.  ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕನ್ನೊಳಗೊಂಡ ವಾಯವ್ಯ ಕೊಡಗಿನ 6 ನಾಡುಗಳ 35 ಗ್ರಾಮಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ  ಸಂತ್ರಸ್ತರಾದವರಿಗೆ ಅದೇ ಪ್ರದೇಶಗಳಲ್ಲಿ ಶಾಶ್ವತ ಪುನರ್ವಸತಿ ಕಲ್ಪಿಸುವಂತೆ ಒತ್ತಾಯಿಸಿ ಸಂಘಟನೆ ವತಿಯಿಂದ ಸೆ.1 ಮಡಿಕೇರಿಯಲ್ಲಿ ವಾಹನ ಜಾಥಾ ನಡೆಸುವುದರೊಂದಿಗೆ ಜಿಲ್ಲಾಡಳಿತದ ಮೂಲಕ ಕೇಂದ್ರ ಸರಕಾರ ಮತ್ತು ವಿಶ್ವಸಂಸ್ಥೆಯ ಗಮನ ಸೆಳೆಯಲಾಗುವುದು ಎಂದರು.

ಆ.12 ರಿಂದ 19 ರವರೆಗೆ ಕೊಡಗಿನ ವಾಯವ್ಯ ಭಾಗದಲ್ಲಿ ನಡೆದ ಭೀಕರ ಭೂಕುಸಿತವನ್ನು  ಅಂತಾರಾಷ್ಟ್ರೀಯ ವಿಪತ್ತು ಮತ್ತು ರಾಷ್ಟ್ರೀಯ ಉತ್ಪಾತ ಎಂದು ಪರಿಗಣಿಸಬೇಕು. ಆ ಮೂಲಕ ನಿರಾಶ್ರಿತರಿಗೆ ಸಮರೋಪಾದಿಯಲ್ಲಿ ಶಾಸನಬದ್ಧ ಪುನರ್ವಸತಿ ಕಲ್ಪಿಸಲು ಸಿದ್ಧತೆ ಮತ್ತು ಬದ್ಧತೆ ತೋರಬೇಕು ಎಂದು ನಾಚಪ್ಪ ಒತ್ತಾಯಿಸಿದರು. ಭೂಕಂಪನ ಮತ್ತು ಭೂಕುಸಿತದಿಂದ ನಿರಾಶ್ರಿತರಾದ ಸಂತ್ರಸ್ತರ ಶಾಶ್ವತ ಪುನರ್ವಸತಿಗೆ ಒತ್ತಾಯಿಸುವ ನಿಟ್ಟಿನಲ್ಲಿ ಸೆ.1ರಂದು ಸಿ.ಎನ್.ಸಿಯು 24ನೇ ವರ್ಷದ ಸಾರ್ವತ್ರಿಕ ಕೈಲ್‍ಪೊವ್ದ್ ನಮ್ಮೆಯನ್ನು ಸಾಂಕೇತಿಕ ಆಯುಧ ಪೂಜೆ ಮತ್ತು  ಮೌನ ಶೋಕಾಚರಣೆಯ ಮೂಲಕ ವಾಹನ ಜಾಥಾ ನಡೆಸಿ ಹಕ್ಕೊತ್ತಾಯ ಮಂಡಿಸಲಿದೆ ಎಂದು ಹೇಳಿದರು. ಕೊಡಗಿನ ವಾಯುವ್ಯ ಭಾಗದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಕೊಡಗಿನ ಹೃದಯ ಭಾಗದಲ್ಲಿ ನಿರ್ಮಿಸಿರುವ ಹಾರಂಗಿ ಜಲಾಶಯವೇ ಕಾರಣ ಎಂದು ಪ್ರತಿಪಾದಿಸಿದ ನಾಚಪ್ಪ ಅವರು, ಪ್ರಸಕ್ತ ನಿರಾಶ್ರಿತರಾಗಿರುವ ಕುಟುಂಬಗಳಿಗೆ ಆಯಾ ಪ್ರದೇಶಗಳಲ್ಲೇ ಪುನರ್ವಸತಿ ಕಲ್ಪಿಸುವ ಮುನ್ನ ಹಾರಂಗಿ ಜಲಾಶಯವನ್ನು ಸಂಪೂರ್ಣವಾಗಿ ಕಿತ್ತೊಗೆಯಬೇಕು ಎಂದು ಒತ್ತಾಯಿಸಿದರು.   ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕಾರ್ಯ ಪೂರ್ಣಗೊಳ್ಳುವವರೆಗೆ 10 ವರ್ಷಗಳ ಕಾಲ ಅವರ ಜೀವನ ನಿರ್ವಹಣೆಗೆ, ಮಕ್ಕಳ  ವಿದ್ಯಾಭ್ಯಾಸಕ್ಕೆ ಅನಾಥ ಪ್ರಜ್ಞೆ ಕಾಡದಂತೆ ಭರವಸೆ ಮೂಡಿಸುವ ಸಲುವಾಗಿ,  ಸಂತ್ರಸ್ತರು ಬಾಡಿಗೆ ಮನೆ ಪಡೆದುಕೊಂಡು ವಾಸಿಸಲು ಆ ಮನೆ ಬಾಡಿಗೆ ಮತ್ತು ಜೀವನ ನಿರ್ವಹಣೆಗೆ ಆರ್ಥಿಕ ಸಹಾಯದ ವಿಶೇಷ ಪ್ಯಾಕೇಜ್‍ನ ವ್ಯವಸ್ಥೆ   ಮಾಡಬೇಕು ಎಂದರು.

ಜಿಲ್ಲೆಯಲ್ಲಿ ಪ್ರಸಕ್ತ ಸಂಭವಿಸಿರುವ ಪ್ರಕೃತಿ ವಿಕೋಪದ ಹೆಸರಿನಲ್ಲಿ ಸಂತ್ರಸ್ತರಲ್ಲದವರು ಲಾಭ ಪಡೆಯುವ ಸಂಭವವಿದೆ. ಕಾವೇರಿ ನದಿ ದಂಡೆಯಲ್ಲಿ ಅಕ್ರಮವಾಗಿ ನೆಲೆ ನಿಂತು ಪ್ರತಿವರ್ಷ ಗಂಜಿ ಕೇಂದ್ರ ಸೇರಿ ಪರಿಹಾರ ಪಡೆದು ಪ್ರವಾಹ ಇಳಿಮುಖವಾದ ಮೇಲೆ ತಮ್ಮ ಅಕ್ರಮ ನೆಲೆಗಳಿಗೆ ತೆರಳುವವರೂ ಇದ್ದಾರೆ. ವಿಪರೀತ ಮಳೆಯಿಂದಾಗಿ ಕಾಫಿ ತೋಟ ಮತ್ತು ಗದ್ದೆ ಬೆಳೆ ಕಳೆದುಕೊಂಡವರು ನೈಜ ಸಂತ್ರಸ್ತರಾಗಿದ್ದು, ನೈಜ ಭೂಕುಸಿತದಿಂದ ಸಂತ್ರಸ್ತರರಾದವರ  ಕಲ್ಯಾಣಕ್ಕೆ ಮತ್ತು ಪುನರ್ವಸತಿಗೆ ತಲುಪಲಿರುವ ಪ್ಯಾಕೇಜ್‍ನ ದಿಕ್ಕು ತಪ್ಪಿಸಬಾರದು ಎಂದೂ ನಾಚಪ್ಪ ಒತ್ತಾಯಿಸಿದರು.

ಮೈಸೂರು ಪ್ರದೇಶದ ಜನರ ನೀರಿನ ದಾಹ ತಣಿಸಲು (ಉದ್ದಾರಕ್ಕಾಗಿ) 45 ವರ್ಷಗಳ ಹಿಂದೆ ಜನರ ವ್ಯಾಪಕ ವಿರೋಧದ ನಡುವೆಯೂ ಬಲವಂತವಾಗಿ ಕಟ್ಟಲಾದ ಹಾರಂಗಿ ಜಲಾಶಯವನ್ನು ನಿರ್ಮಿಸಲಾಯಿತು. ಪಾಲೇರಿನಾಡ್, ಮುತ್ತ್‍ನಾಡ್, ಪೊರಮಲೆನಾಡ್, ಬದಿಗೇರಿನಾಡ್, ಗಡಿನಾಡ್, ಸೂರ್ಲಬ್ಬಿನಾಡ್ ಮತ್ತು ಮಡಿಕೇರಿನಾಡ್‍ಗಳ ಪರ್ವತ ಶ್ರೇಣಿಗಳಿಂದ ಹುಟ್ಟಿ ಹರಿಯುವ ನದಿಗಳು ಹಾಗು ಮಡಿಕೇರಿ ನಗರ ಮಧ್ಯದಲ್ಲಿ ಹಾದು ಹೋಗುವ ಸಣ್ಣ ನದಿ, ಕೂಟ್‍ಪೊಳೆ, ಬದಿಗೇರಿಪೊಳೆ, ಇಬ್ನಿವಳವಾಡಿ ತೊರೆ, ಕಾಲೂರುಪೊಳೆ, ಪಟ್ಟಿಪೊಳೆ (ಹಟ್ಟಿಹೊಳೆ), ಐಗೂರು ನದಿ, ಮಾದಾಪುರಹೊಳೆ ಗರಗಂದೂರು ಬಳಿ ಸಂಗಮಿಸಿ ಹಾರಂಗಿ ನದಿಯೆಂಬ ಹೆಸರಿನಲ್ಲಿ ಕೂಡಿಗೆಯ ಬಳಿ ಕಾವೇರಿ ನದಿಗೆ ಸೇರುತ್ತದೆ. ಈ ಮೇಲ್ಕಂಡ ಗ್ರಾಮಗಳು ಮತ್ತು ನಾಡುಗಳು ಹಾರಂಗಿಗೆ ಪ್ರಧಾನ ನೀರು ಉತ್ಪಾದಿಸುವ ಕ್ಯಾಚ್‍ಮೆಂಟ್ ಏರಿಯಾವಾಗಿದ್ದರೆ ಮೇಲ್ಕಂಡ ಉಪನದಿಗಳು ಹಾರಂಗಿಗೆ ಸರ್ವ ಋತುವಲ್ಲೂ ನೀರುತ್ಪತಿ ಮಾಡುವ ಜಲನಾಳಗಳನ್ನು ಹೊಂದಿವೆ.

ಈ ನಾಡುಗಳಲ್ಲಿ ಬರುವ ಸುಮಾರು 30-35 ಗ್ರಾಮಗಳು ಭೂಗರ್ಭದಡಿ ಸೇರಿ ಒಂದು ಅಪೂರ್ವ ಕೊಡವ ಜಾನಪದ ನಿಧಿಯೇ ಕಣ್ಮರೆಯಾಗಿದೇಯಲ್ಲದೆ ಒಂದು ಪ್ರಾಚೀನ ನಾಗರೀಕತೆಯ ತೂಗು ತೊಟ್ಟಿಲೇ ಮಣ್ಣಿನಿಂದ ಆವರಿಸಿ ಸರ್ವನಾಶವಾಗಿದೆ ಎಂದು ನಾಚಪ್ಪ ಆರೋಪಿಸಿದರು. ಸರ್ಕಾರ ಎಷ್ಟೇ ಆರ್ಥಿಕ ಪ್ಯಾಕೇಜ್ ನೀಡಿ ಸಬಲೀಕರಣದತ್ತ ಹೆಜ್ಜೆ ಹಾಕಿದರೂ ಈ ಜನ ತಮ್ಮ ಹಿಂದಿನ ಸ್ಥಿತಿಗೆ ಮರಳಲು ಕನಿಷ್ಠ ಒಂದು ಶತಮಾನವೇ ಬೇಕು. ಕಾಲೂರು, 2ನೇ ಮೊಣ್ಣಂಗೇರಿ, ಮದೆನಾಡು-ಜೋಡುಪಾಲ, ಹಮ್ಯಾಲ, ಮಕ್ಕಂದೂರು, ಕಾಂಡನಕೊಲ್ಲಿ, ಹೆಮ್ಮೆತ್ತಾಳ್, ಮೇಘತ್ತಾಳ್, ಮುಕ್ಕೋಡ್ಲು, ಹಟ್ಟಿಹೊಳೆ, ವಣಚಲು, ಕಿರುದಾಲೆ, ಶಿರಂಗಳ್ಳಿ, ಇಗ್ಗೋಡ್ಲು, ಹಾಡಗೇರಿ, ತಂತಿಪಾಲ, ದೇವಸ್ತೂರು, ಆವಂಡಿ, ಗರ್ವಾಲೆ, ಮೂವತ್ತೋಕ್ಲು, ಬೊಳ್ಳರಿಮೊಟ್ಟೆ, ಹಚ್ಚಿನಾಡ್, ಮಾದಾಪುರ, ಕುಮಾರಳ್ಳಿ, ಭಕ್ತಿ, ಕಿಕ್ಕರಳ್ಳಿ, ಕುಂಬಾರ ಗಡಿಗೆ, ಮಂಕ್ಯ ಮತ್ತು ತಾಕೇರಿ ಹಾಗೂ ಹಾರಂಗಿಗೆ ಜಲಮೂಲ ಒದಗಿಸುವ ಸಣ್ಣತೊರೆ ಹುಟ್ಟಿಹರಿಯುವ ಇಬ್ನಿವಳವಾಡಿ ಮತ್ತು ಕೆದಕಲ್ ಗ್ರಾಮಗಳ ಭಾಗಶಃ ಪ್ರದೇಶಗಳು ಸಂಪೂರ್ಣ ಭೂಕುಸಿತಕ್ಕೊಳಪಟ್ಟಿವೆ ಎಂದು ನಾಚಪ್ಪ ಬೇಸರ ವ್ಯಕ್ತಪಡಿಸಿದರು.   (ಕೆಸಿಐ,ಎಸ್.ಎಚ್)

Leave a Reply

comments

Related Articles

error: