ಪ್ರಮುಖ ಸುದ್ದಿ

ಕೊಡಗಿಗೆ ಪ್ರಧಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ,  20 ಸಾವಿರ ಕೋಟಿ ರೂ.ಗಳ ಪರಿಹಾರ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ

ರಾಜ್ಯ(ಮಡಿಕೇರಿ)ಆ.31:- ಮಹಾಮಳೆಯಿಂದ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ತಲ್ಲಣಿಸಿರುವ ಕೊಡಗಿಗೆ ಪ್ರಧಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ,  ಜಿಲ್ಲೆಯ ನವನಿರ್ಮಾಣಕ್ಕೆ  20 ಸಾವಿರ ಕೋಟಿ ರೂ.ಗಳ ಪರಿಹಾರ ಒದಗಿಸುವಂತೆ ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳ ಸಹಕಾರದೊಂದಿಗೆ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಜಿಲ್ಲಾ ಕೇಂದ್ರ ಮಡಿಕೇರಿಗೆ ಶುಕ್ರವಾರ ಸಂಜೆ ಕನ್ನಡ ಪರ ಸಂಘಟನೆಗಳ ಪ್ರಮುಖರೊಂದಿಗೆ ಬೆಂಗಳೂರಿನಿಂದ ಪ್ರತಿಭಟನಾ ರ್ಯಾಲಿ ಮೂಲಕ ಆಗಮಿಸಿದ ವಾಟಾಳ್ ನಾಗರಾಜ್, ಇಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತದಲ್ಲಿ ವೀರ ಸೇನಾನಿಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಬಳಿಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದರು.

ಕೆಲ ಕಾಲ ಘೋಷಣೆಗಳ ಸಹಿತ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್ ಮತ್ತು ವಿವಿಧ ಸಂಘÀಟನೆಗಳ ಪ್ರಮುಖರು, ಅತಿವೃಷ್ಟಿಯಿಂದ ಕೊಡಗಿನ ಹಲವೆಡೆಗಳಲ್ಲಿ ಸಂಭವಿಸಿದ ಗುಡ್ಡ ಕುಸಿತ, ಪ್ರವಾಹದಿಂದ ಅಪಾರ ಹಾನಿ ಉಂಟಾಗಿದೆÉ. ನೆರೆಯ ಕೇರಳದ ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು  ಕೊಡಗಿಗೂ ಭೇಟಿ ನೀಡಿ, ಇಲ್ಲಿನ ಹಾನಿಯ ಬಗ್ಗೆ ಪರಿಶೀಲನೆ ನಡೆಸುವುದರೊಂದಿಗೆ, ಮತ್ತೆ ಕೊಡಗನ್ನು ಕಟ್ಟಲು ಅಗತ್ಯ ಪರಿಹಾರನ್ನು ಒದಗಿಸಲೇಬೇಕೆಂದು ಆಗ್ರಹಿಸಿದರು.

ಭಾರೀ ಮಳೆಯಿಂದ  ಕಾಣಿಸಿಕೊಂಡ ಪ್ರವಾಹ, ಗುಡ್ಡ ಕುಸಿತಗಳಿಂದ ಆಸ್ತಿಪಾಸ್ತಿಗಳನ್ನು ಕಳೆದುಕೊಂಡ ನೂರಾರು ಸಂತ್ರಸ್ತರ ಪುನರ್ವಸತಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಸಾವನ್ನಪ್ಪಿದವರ ಸಂತ್ರಸ್ತ ಕುಟುಂಬಗಳಿಗೆ ತಲಾ 25 ಲಕ್ಷ ಪರಿಹಾರವನ್ನು ಒದಗಿಸಲು ಕೇಂದ್ರ ಮುಂದಾಗಬೇಕೆಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕನ್ನಡ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ,  ಅಖಿಲ ಕರ್ನಾಟಕ ಡಾ.ರಾಜ್ ಕುಮಾರ್ ಅಭಿಮಾನಿ ಸಂಘ, ಕನ್ನಡ ಜಾಗೃತಿ ವೇದಿಕೆಯ  ಪ್ರಮುಖರು ಪಾಲ್ಗೊಂಡಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: