ಪ್ರಮುಖ ಸುದ್ದಿ

ಭಾರತೀಯ ಅಂಚೆ ಇಲಾಖೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ವ್ಯವಸ್ಥೆಗೆ ಚಾಲನೆ ನೀಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ

ರಾಜ್ಯ(ಬೆಂಗಳೂರು)ಸೆ.1:-  ‘ಮನೆ ಮನೆಗೂ ತಮ್ಮ ಬ್ಯಾಂಕ್’ ಅಡಿಬರಹದಲ್ಲಿ ದೇಶದ ಅತಿ ದೊಡ್ಡ ಬ್ಯಾಂಕಿಂಗ್ ಜಾಲವನ್ನಾಗಿಸಲು ಭಾರತೀಯ ಅಂಚೆ ಇಲಾಖೆ ಮುಂದಡಿ ಇಟ್ಟಿದೆ. ಭಾರತೀಯ ಅಂಚೆ ಇಲಾಖೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಆರಂಭಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಇಂದು ದೆಹಲಿಯಲ್ಲಿ ನೂತನ ಬ್ಯಾಂಕಿಂಗ್ ವ್ಯವಸ್ಥೆಗೆ ಚಾಲನೆ ನೀಡಲಿದ್ದಾರೆ.

ಖಾಸಗಿ ಪೇಮೆಂಟ್ ಬ್ಯಾಂಕ್​ಗಳಿಗೆ ಪೈಪೋಟಿ ನೀಡಲು ಹಾಗೂ ಸರಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸುವ ಉದ್ದೇಶ ದಿಂದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಆರಂಭಿಸ ಲಾಗುತ್ತಿದೆ. ಅದರ ಮೂಲಕ ಯಾವುದೇ ಠೇವಣಿ, ಹೆಚ್ಚಿನ ದಾಖಲೆಗಳಿಲ್ಲದೆ ಖಾತೆ ತೆರೆಯುವ ಅವಕಾಶ ನೀಡಲಾಗುತ್ತಿದೆ. ದೇಶಾದ್ಯಂತ ಏಕಕಾಲಕ್ಕೆ 650 ಶಾಖೆ ಸೇರಿ 3,250 ಸೇವಾ ಕೇಂದ್ರಗಳಿಗೆ ಚಾಲನೆ ದೊರೆಯಲಿದೆ. ಡಿಸೆಂಬರ್ ಅಂತ್ಯದೊಳಗೆ ಎಲ್ಲ 1.55 ಲಕ್ಷ ಸೇವಾ ಕೇಂದ್ರಗಳಲ್ಲಿ ಈ ಸೇವೆ ಸಿಗಲಿದೆ. ಕರ್ನಾಟಕದಲ್ಲಿ 31 ಶಾಖೆಗಳಲ್ಲಿ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದ್ದು, ಅದಕ್ಕೆ 50 ಅಂಚೆ ಕಚೇರಿ ಸಂಪರ್ಕ ಕಲ್ಪಿಸಲಾಗಿದೆ. ಡಿ. 31ರೊಳಗೆ ರಾಜ್ಯದಲ್ಲಿನ ಎಲ್ಲ 10 ಸಾವಿರ ಅಂಚೆ ಕಚೇರಿಯಲ್ಲೂ ನೂತನ ಸೇವೆ ಲಭ್ಯವಾಗಲಿದೆ.

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್​ನಲ್ಲಿ ಯಾವುದೇ ರೀತಿಯ ಸಾಲ ನೀಡುವುದಿಲ್ಲ. 1 ಲಕ್ಷದವರೆಗೆ ಖಾತೆಯಲ್ಲಿ ಹಣವಿಡಬಹುದು. ಹೆಚ್ಚಿನ ಹಣ ಖಾತೆಗೆ ಹಾಕಿದರೆ ಖಾತೆದಾರರ ಹೆಸರಿನಲ್ಲಿ ಅಂಚೆ ಕಚೇರಿಯಲ್ಲಿನ ಉಳಿತಾಯ ಖಾತೆಗೆ ಜಮಾ ಮಾಡಲಾಗುತ್ತದೆ. ಖಾತೆಯಲ್ಲಿ ಹಣ ಖರ್ಚಾದಂತೆಲ್ಲ ಉಳಿತಾಯ ಖಾತೆಯಲ್ಲಿನ ಹಣವನ್ನು ಈ ಖಾತೆಗೆ ವರ್ಗಾಯಿಸಲಾಗುತ್ತದೆ.

ಬ್ಯಾಂಕ್ ಖಾತೆ ತೆರೆಯುವವರಿಗೆ ಕ್ಯೂಆರ್ ಕೋಡ್ ಇರುವ ಕಾರ್ಡ್ ನೀಡಲಾಗುತ್ತದೆ. ಅದರಿಂದ ವಿವಿಧ ಬಿಲ್ ಪಾವತಿ, ಶಾಪಿಂಗ್ ಮಾಡಬಹುದು. ಆದರೆ, ಬಿಲ್ ಪಾವತಿ, ಶಾಪಿಂಗ್​ಗೆ ಮಾತ್ರ ಬಳಸಬಹುದು. ಹೀಗಾಗಿ ಎಟಿಎಂ ಗಳಿಂದ ಹಣ ತೆಗೆಯಲು ಬರುವುದಿಲ್ಲ. ಆದರೆ, ಆನ್​ಲೈನ್ ಬ್ಯಾಂಕಿಂಗ್ ಮೂಲಕ ಹಣ ವರ್ಗಾಯಿಸಲು ಅವಕಾಶವಿದೆ.

ಖಾತೆ ತೆರೆಯಲು ಈಗಿನ ಬ್ಯಾಂಕಿಂಗ್ ವ್ಯವಸ್ಥೆಯಂತೆ ಹೆಚ್ಚು ದಾಖಲೆಗಳ ಅವಶ್ಯಕತೆಯಿಲ್ಲ. ಆಧಾರ್ ಗುರುತಿನ ಚೀಟಿ, ಮೊಬೈಲ್ ಸಂಖ್ಯೆಯಿದ್ದರೆ ಸಾಕು. ಅರ್ಜಿ ತುಂಬುವುದೂ ಬೇಡ.

ಖಾತೆದಾರರು ನೀಡುವ ಮೊಬೈಲ್ ಸಂಖ್ಯೆಗೆ ಬರುವ ಒನ್ ಟೈಂ ಪಾಸ್​ವರ್ಡ್ (ಒಟಿಪಿ) ಇದ್ದರೆ ಮಾತ್ರ ಖಾತೆ ನಿರ್ವಹಿಸಬಹುದು. ಕಾರ್ಡ್ ಇಲ್ಲದಿದ್ದರೂ ಖಾತೆದಾರರು ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಮೂಲಕ ಹಣ ವರ್ಗಾಯಿಸಬಹುದು.

ಈಗಿನ ಮನಿ ಆರ್ಡರ್ ವ್ಯವಸ್ಥೆಯನ್ನು ಕ್ರಮೇಣ ರದ್ದುಗೊಳಿಸಲಾಗುತ್ತಿದ್ದು, ಪೂರಕವಾಗಿ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಕೆಲಸ ಮಾಡಲಿದೆ. ಅದರಂತೆ ದೇಶದಲ್ಲಿನ 3 ಲಕ್ಷಕ್ಕೂ ಹೆಚ್ಚಿನ ಅಂಚೆ ಬಟವಾಡೆ ಸಿಬ್ಬಂದಿ ಡಿಜಿಟಲ್ ವ್ಯವಸ್ಥೆ ಮೂಲಕ ಹಣ ವರ್ಗಾಯಿಸುವ ಕೆಲಸ ಮಾಡಲಿದ್ದಾರೆ. ಅದರಂತೆ ಅಂಚೆ ಬಟವಾಡೆ ಸಿಬ್ಬಂದಿಗೆ ಮೊಬೈಲ್ ನೀಡಲಾಗಿದ್ದು, ಅದರಲ್ಲಿ ಹಣ ವರ್ಗಾವಣೆ ಅಪ್ಲಿಕೇಷನ್ ಅಳವಡಿಸಲಾಗಿದೆ. ಯಾರಿಗೆ ಹಣ ಬಂದಿದೆಯೋ ಅವರ ಮನೆಗೆ ತೆರಳಿ ಅಪ್ಲಿಕೇಷನ್ ಮೂಲಕ ಅವರ ಖಾತೆಗೆ ಹಣ ವರ್ಗಾಯಿಸಲಾಗುತ್ತದೆ.

ರಾಜ್ಯದಲ್ಲಿ 26 ಲಕ್ಷ ಅಂಚೆ ಇಲಾಖೆ ಉಳಿತಾಯ ಖಾತೆಗಳನ್ನು ಈಗಾಗಲೆ ತೆರೆಯಲಾಗಿದೆ. ಅವುಗಳನ್ನೆಲ್ಲ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಜತೆಗೆ ಸಂಪರ್ಕಿಸಲಾಗುತ್ತದೆ. ಹಾಗೆಯೇ, ರಾಜ್ಯ ಸರ್ಕಾರದಿಂದ ವಿವಿಧ ಅನುದಾನ ಪಡೆಯುವ ಫಲಾನುಭವಿಗಳ ಖಾತೆಯನ್ನು ಇದರ ಮೂಲಕವೇ ತೆರೆಯಲು ಸರ್ಕಾರ ಸೂಚಿಸಿದೆ. ಅದರಂತೆ ಹೆಚ್ಚುವರಿಯಾಗಿ 14 ಲಕ್ಷ ಖಾತೆಗಳನ್ನು ತೆರೆಯಲಾಗುತ್ತಿದೆ. ಜತೆಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿ ಬರುವ ವೇತನ ಸೇರಿ ಇನ್ನಿತರ ಯೋಜನೆಗಳ ಸಬ್ಸಿಡಿ ಹಣವೂ ಇದಕ್ಕೇ ಜಮೆಯಾಗಲಿದೆ. ಆ ಮೂಲಕ ಬ್ಯಾಂಕ್ ವ್ಯವಹಾರ ವೃದ್ಧಿಗೊಳಿಸುವ ಯೋಜನೆ ರೂಪಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: