ಪ್ರಮುಖ ಸುದ್ದಿ

ಸಲ್ಲೇಖನ ವೃತ ಕೈಗೊಂಡ ಜೈನ ಮುನಿ ತರುಣ ಸಾಗರ ಮಹಾರಾಜರ ನಿಧನ : ಗಣ್ಯರಿಂದ ಸಂತಾಪ

ದೇಶ(ನವದೆಹಲಿ)ಸೆ.1:- ಜೈನ ಮುನಿ ತರುಣ ಸಾಗರ ಮಹಾರಾಜರು ಸಲ್ಲೇಖನ ವೃತ ಕೈಗೊಂಡು ನಿಧನರಾಗಿದ್ದಾರೆ. 51ರ ಹರೆಯದವರಾದ ಅವರು ಇಂದು ದೆಹಲಿಯಲ್ಲಿ ಕೊನೆಯುಸಿರೆಳೆದರು.

ಅವರು ಕಾಮಾಲೆಯಿಂದ ಬಳಲುತ್ತಿದ್ದರು. ಅವರ ಅಂತಿಮ ಯಾತ್ರೆಯು ದೆಹಲಿಯ ಕೃಷ್ಣಾನಗರದಲ್ಲಿರುವ  ರಾಧಾಪುರಿಯಿಂದ ಆರಂಭವಾಗಲಿದೆ. ಅಂತಿಮ ಸಂಸ್ಕಾರವು ದೆಹಲಿಯಿಂದ 25ಕಿ.ಮೀ ದೂರದಲ್ಲಿರುವ ತರುಣಸಾಗರ ತೀರ್ಥದಲ್ಲಿ ಮಧ್ಯಾಹ್ನ 3ಗಂಟೆಗೆ ನಡೆಯಲಿದೆ. ಅವರು ಪ್ರಭಾವಿ ಪ್ರವಚನಗಳನ್ನು ನೀಡುವುದರಲ್ಲಿ ಖ್ಯಾತರಾಗಿದ್ದರು. ಅವರ ಪ್ರವಚನಗಳು ಪುಸ್ತಕರೂಪವನ್ನು ಪಡೆದುಕೊಂಡಿವೆ. 1967ರ ಜೂನ್ 26ರಂದು ಮಂಧ್ಯಪ್ರದೇಶದ ದಮೋಹದಲ್ಲಿ ಜನಿಸಿದ ಅವರು 14ನೇ ವರ್ಷದಲ್ಲಿಯೇ ದೀಕ್ಷೆ ಪಡೆದಿದ್ದರು.

ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಗೃಹಮಂತ್ರಿ ರಾಜನಾಥ್ ಸಿಂಗ್, ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಜೊತೆ ಇದ್ದ ಹಳೆಯ ಭಾವಚಿತ್ರವನ್ನು ಟ್ವೀಟರ್ ನಲ್ಲಿ ಪ್ರಕಟಿಸಿದ ಪ್ರಧಾನಿ ನರೇಂದ್ರ ಮೋದಿಯವರು ‘ಮುನಿ ತರುಣ ಸಾಗರರ ನಿಧನದಿಂದ ಅತೀವ ದುಃಖವಾಗಿದೆ. ನಾವು ಅವರನ್ನು ಅವರ ಉತ್ತಮ ವಿಚಾರ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳಿಗಾಗಿ ಸ್ಮರಿಸುತ್ತೇವೆ. ಅವರ ಉತ್ತಮ ವಿಚಾರಗಳು ಜನರಿಗೆ ಸದಾ ಪ್ರೇರಣೆಯನ್ನು ನೀಡಲಿವೆ’ ಎಂದಿದ್ದಾರೆ.

‘ಜೈನ ಮುನಿ ತರುಣಸಾಗರರು ಮಹಾಸಮಾಧಿ ತೆಗೆದುಕೊಳ್ಳುವ ಸುದ್ದಿ ಆಘಾತವುಂಟು ಮಾಡಿದೆ. ಅವರು ಸ್ಪೂರ್ತಿಯ ಮೂಲ, ಸಹಾನುಭೂತಿ, ಕರುಣೆಯಿಂದ ಕೂಡಿದವರಾಗಿದ್ದರು. ಅವರ ನಿರ್ವಾಣದಿಂದ ಭಾರತೀಯ ಸಂತ ಸಮಾಜಕ್ಕೆ ಶೂನ್ಯ ಆವರಿಸಿದೆ.  ನಾನು ಮುನಿಗಳ ಪಾದದಲ್ಲಿ ಗೌರವ ಸಮರ್ಪಿಸುತ್ತೇನೆ’ ಎಂದು ಗೃಹಸಚಿವ ರಾಜನಾಥ್ ಸಿಂಗ್ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಕೂಡ ಟ್ವೀಟರ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: