ಪ್ರಮುಖ ಸುದ್ದಿ

ಆಡಳಿತದಲ್ಲಿ ಕನ್ನಡ ಅನುಷ್ಠಾನವನ್ನು ಮಾಡದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ

ರಾಜ್ಯ(ಬೆಂಗಳೂರು)ಸೆ.1:- ಆಡಳಿತದಲ್ಲಿ ಕನ್ನಡ ಅನುಷ್ಠಾನವನ್ನು ಮಾಡದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಅವರು ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಸಚಿವಾಲಯ ಹಂತದಲ್ಲಿ ಕನ್ನಡ ಜಾರಿಗೆ ಕೈಗೊಂಡಿರುವ ತೀರ್ಮಾನವನ್ನು ಆದ್ಯತೆ ಮೇರೆಗೆ ಅನುಷ್ಠಾನಿಸಬೇಕು. ಇದನ್ನು ಮಾಡದ ಇಲಾಖೆ ಮುಖ್ಯಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಡಾ.ಸರೋಜಿನಿ ಮಹಿಷಿ ವರದಿಯ ಪರಿಷ್ಕೃತ ವರದಿ ಜಾರಿಗೆ ಕಾರ್ಮಿಕ ಇಲಾಖೆಯಿಂದ ಕಾಯಿದೆ ರೂಪಿಸಲು ಸಂಬಂಧಿಸಿದವರಿಗೆ ನಿರ್ದೇಶಿಸಬೇಕು ಎಂದು ಸಿದ್ದರಾಮಯ್ಯ ಅವರು ಸಲಹೆ ನೀಡಿದ್ದಾರೆ.

ಸರಕಾರಿ ಶಾಲೆಗಳ ಸಬಲೀಕರಣ ಸಮಿತಿಯ ವರದಿಗೆ ಸಂಪುಟ ಒಪ್ಪಿಗೆ ಪಡೆದು ಕಾಯಿದೆಯಾಗಿ ಜಾರಿಗೊಳಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡವನ್ನು ಕಡ್ಡಾಯ ಭಾಷೆಯಾಗಿ ಕಲಿಸುವ ಸರಕಾರಿ ಆದೇಶ ಉಲ್ಲಂಘನೆ ಪ್ರಕರಣಗಳಲ್ಲಿ ಶಿಸ್ತುಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ವಾಣಿಜ್ಯ ಸಂಸ್ಥೆ/ಅಂಗಡಿಗಳ ನಾಮಫಲಕಗಳು ಕಡ್ಡಾಯವಾಗಿ ಕನ್ನಡದಲ್ಲಿರುವಂತೆ ಭಾಷಾ ಕಾಯಿದೆ ರೂಪಿಸುವ ಹೊಣೆಯನ್ನು ಕನ್ನಡ-ಸಂಸ್ಕೃತಿ ಇಲಾಖೆಗೆ ವಹಿಸಬೇಕು. ಉನ್ನತ ಶಿಕ್ಷಣದಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯ ಬೋಧನೆಗೆ ಡಾ. ಹಿ.ಚಿ.ಬೋರಲಿಂಗಯ್ಯ ಸಮಿತಿ ವರದಿ ಶಿಫಾರಸು ಜಾರಿಗೆ ಕ್ರಮ ಹಾಗೂ ನಾನಾ ಇಲಾಖೆಗಳ ಅಂತರ್ಜಾಲದಲ್ಲಿ ಕನ್ನಡಕ್ಕೆ ಪ್ರಾಶಸ್ತ್ಯ ಕಲ್ಪಿಸಲು ಇ-ಆಡಳಿತಕ್ಕೆ ನಿರ್ದೇಶನ ನೀಡುವಂತೆ ಪ್ರಾಧಿಕಾರದ ಅಧ್ಯಕ್ಷರು ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್‌ಗೆ ಬರೆದಿರುವ ಪತ್ರದಲ್ಲಿ ವಿನಂತಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: