
ಪ್ರಮುಖ ಸುದ್ದಿ
ಬಬ್ಬಿರ ಸರಸ್ವತಿ ಆರೋಪ ದುರುದ್ದೇಶಪೂರಿತ : ಚೇರಂಬಾಣೆ ಕೊಡವ ಸಮಾಜ, ರಿಕ್ರಿಯೇಷನ್ ಕ್ಲಬ್ ಸ್ಪಷ್ಟನೆ
ರಾಜ್ಯ(ಮಡಿಕೇರಿ) ಸೆ.1 : – ಚೇರಂಬಾಣೆಯ ಅರುಣಾ ಜೂನಿಯರ್ ಕಾಲೇಜ್ನಲ್ಲಿ ನಡೆಯುತ್ತಿದ್ದ ಪರಿಹಾರ ಕೇಂದ್ರದ ಚಟುವಟಿಕೆ ಬಗ್ಗೆ ಚೇರಂಬಾಣೆ ಕೊಡವ ಸಮಾಜದ ವಿರುದ್ಧ ಮಾಜಿ ಜಿ.ಪಂ. ಸದಸ್ಯೆ ಬಬ್ಬಿರ ಸರಸ್ವತಿ ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ಕೊಡವರ ತೇಜೋವಧೆ ಮತ್ತು ರಾಜಕೀಯ ಲಾಭದ ದುರುದ್ದೇಶ ಹೇಳಿಕೆಯಲ್ಲಿ ಅಡಗಿದೆ ಎಂದು ಚೇರಬಾಂಣೆ ಕೊಡವ ಸಮಾಜ ಹಾಗೂ ರಿಕ್ರಿಯೇಷನ್ ಕ್ಲಬ್ ಸ್ಪಷ್ಟಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಲಬ್ನ ಅಧ್ಯಕ್ಷ ಹೆಚ್.ಸಿ.ಕುಶಾಲಪ್ಪ, ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಸರ್ವರಿಗೂ ಯಾವುದೇ ಭೇದ ಭಾವವಿಲ್ಲದೆ ಕೊಡವ ಸಮಾಜ ಮತ್ತು ರಿಕ್ರಿಯೇಷನ್ ಕ್ಲಬ್ ಊಟೋಪಚಾರ ಸೇರಿದಂತೆ ಎಲ್ಲಾ ಅನುಕೂಲತೆಗಳನ್ನು ಕಲ್ಪಿಸಿದೆ. ಈ ಬಗ್ಗೆ ಅಧಿಕಾರಿ ವರ್ಗ ಹಾಗೂ ಜಿಲ್ಲಾ ನ್ಯಾಯಾಲಯ ಪ್ರಾಧಿಕಾರ ಸಮಿತಿ ಕೂಡ ಶ್ಲಾಘನೆ ವ್ಯಕ್ತಪಡಿಸಿದೆ. ಇದನ್ನು ಸಹಿಸದ ಬಬ್ಬಿರ ಸರಸ್ವತಿ ಅವರು ಕೊಡವ ಸಮಾಜವನ್ನು ತೇಜೋವಧೆ ಮಾಡುವ ಉದ್ದೇಶದಿಂದಲೇ ಇಲ್ಲಸಲ್ಲದ ಆರೋಪ ಮಾಡಿದ್ದು, ಇದನ್ನು ಖಂಡಿಸುವುದಾಗಿ ತಿಳಿಸಿದರು.
ಪರಿಹಾರ ಕೇಂದ್ರದಲ್ಲಿ ಕೊಡವ ಜನಾಂಗದವರು ಶೇ. 1 ರಷ್ಟು ಕೂಡ ಇಲ್ಲದಿದ್ದರು ಎಲ್ಲಾ ಸಂತ್ರಸ್ತರಿಗಾಗಿ ಕೊಡವ ಸಮಾಜದ ಸದಸ್ಯರು ಹಾಗೂ ಕ್ಲಬ್ನ ಪದಾಧಿಕಾರಿಗಳು ರಾತ್ರಿ ಹಗಲೆನ್ನದೆ ದುಡಿದಿದ್ದಾರೆ. ವೃದ್ಧರು, ಮಹಿಳೆಯರು ಹಾಗೂ ಮಕ್ಕಳಿಗೆ ಬಿಸಿ ನೀರಿನ ವ್ಯವಸ್ಥೆ ಕೂಡ ಒದಗಿಸಲಾಗಿದೆ. ಆರಂಭದ ದಿನಗಳಲ್ಲಿ 680ಕ್ಕೂ ಅಧಿಕ ಸಂತ್ರಸ್ತರಿಗೆ ಆಶ್ರಯ ನೀಡಿ ಅನುಕೂಲತೆಗಳನ್ನು ಕಲ್ಪಿಸಿಕೊಡಲಾಗಿದೆ. ಬಬ್ಬಿರ ಸರಸ್ವತಿ ಅವರು ಕಳೆದ ಹಲವು ವರ್ಷಗಳಿಂದ ಕೊಡವ ವಿರೋಧಿ ಹೇಳಿಕೆಗಳನ್ನು ನೀಡುತ್ತಲೆ ಬಂದಿದ್ದಾರೆ. ಪ್ರಕೃತಿ ವಿಕೋಪದ ಸಂಕಷ್ಟದ ಸಮಯದಲ್ಲು ಜನಾಂಗದ ಮಧ್ಯೆ ವೈಮನಸ್ಸು ಮೂಡಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು.
ರೈತ ಸಂಘದ ಪ್ರತಿನಿಧಿಗಳು ಪರಿಹಾರ ಸಮಾಗ್ರಿಗಳನ್ನು ಪರಿಹಾರ ಕೇಂದ್ರಕ್ಕೆ ತೆಗೆದುಕೊಂಡು ಹೋದ ಸಂದರ್ಭ ಕೊಡವ ಸಮಾಜದ ಪ್ರತಿನಿಧಿಗಳನ್ನು ಟೀಕಿಸಿರುವ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಶ್ನಿಸಲು ಹೋದ ಸಮಾಜದವರ ಮೇಲೆ ಪ್ರತೀಕಾರ ಮನೋಭಾವನೆಯನ್ನು ಸರಸ್ವತಿ ತೋರಿದ್ದಾರೆ.
ಚೇರಂಬಾಣೆ ಕೊಡವ ಸಮಾಜ ಕೇವಲ ಕೊಡವ ನಿರಾಶ್ರಿತರಿಗೆ ಮಾತ್ರ ಸಹಾಯ ಹಸ್ತ ಚಾಚಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದ್ದು, ಕೊಡವ ಸಮಾಜದ ಮೂಲಕ ಪರಿಹಾರ ಸಾಮಾಗ್ರಿಗಳನ್ನು ಸಂಪಾಜೆ, ಕೊಟ್ಟಮುಡಿ, ಉಡೋತ್ ಮೊಟ್ಟೆ, ಚೆಟ್ಟಿಮಾನಿ, ಸಿದ್ದಾಪುರ ಪ್ರದೇಶಗಳಿಗೆ ಕಳುಹಿಸಿ ಕೊಡಲಾಗಿದೆ. ಅಲ್ಲದೆ ಮೂವತೋಕ್ಲು ಪ್ರದೇಶಕ್ಕೂ ನಮ್ಮದೇ ಲಾರಿಯಲ್ಲಿ ಪರಿಹಾರ ಸಾಮಾಗ್ರಿಗಳನ್ನು ತಲುಪಿಸಲಾಗಿದೆ. ಆದರೆ ಕೊಡವ ಸಮಾಜದ ಬಗ್ಗೆ ಅಪವಾದ ಮಾಡಿದ ಬಬ್ಬಿರ ಸರಸ್ವತಿ ಅವರು ಮಂಡ್ಯ ಮತ್ತು ಮೈಸೂರು ರೈತ ಸಂಘದ ವತಿಯಿಂದ ಬಂದ ಪರಿಹಾರ ಸಾಮಾಗ್ರಿಗಳನ್ನು ಚೇರಂಬಾಣೆಯ ಅಸುಪಾಸಿನಲ್ಲಿರುವ ಜನತಾ ಕಾಲೋನಿಗಳಿಗೆ ಕೊಂಡೊಯ್ಯಲು ಪ್ರಯತ್ನಿಸಿದ್ದಾರೆ. ಇದನ್ನು ರೈತ ಸಂಘದವರು ಪ್ರಶ್ನಿಸಿದಾಗ ಸರಸ್ವತಿ ಅವರು ವಾಗ್ವಾದಕ್ಕೆ ಇಳಿದಿದ್ದಾರೆ ಎಂದು ಕುಶಾಲಪ್ಪ ಆರೋಪಿಸಿದರು.
ಪ್ರತಿಷ್ಠಿತ ಸಂಸ್ಥೆಗಳ ಬಟ್ಟೆಗಳನ್ನು ಸಂತ್ರಸ್ತರಿಗೆ ವಿತರಿಸಿಲ್ಲವೆಂದು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ಬಟ್ಟೆಬರೆಗಳ ಪೆಟ್ಟಿಗೆ ಒಳಗೆ ಏನಿದೆ ಎಂದು ನೋಡದೆಯೇ ಸಂತ್ರಸ್ತರಿಗೆ ಹಂಚಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಪರಿಹಾರ ಕೇಂದ್ರದಲ್ಲಿ ಎಲ್ಲಾ ಜಾತಿ ಧರ್ಮದವರನ್ನು ಒಂದೇ ರೀತಿ ನೋಡಲಾಗಿದ್ದು, ಬೆಟ್ಟತ್ತೂರಿನ ಪಳಂಗೋಟು ಗೌಡ ಕುಟುಂಬದ 15 ಮಂದಿ ಸಂತ್ರಸ್ತರು ಪರಿಹಾರ ಕೇಂದ್ರದ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಮ್ಮಿಯಾಲ, ಕಾಲೂರು, 2ನೇ ಮೊಣ್ಣಂಗೇರಿಯ ನಿರಾಶ್ರಿತರು ಕಕ್ಕಬ್ಬೆ, ಬಾಡಗ, ಮಡಿಕೇರಿ, ಅರೆಕಾಡು ಭಾಗದಲ್ಲಿ ತಾತ್ಕಾಲಿಕ ವ್ಯವಸ್ಥೆಯನ್ನು ಕಂಡುಕೊಂಡಿದ್ದಾರೆ. ಇವರಿಗೂ ಕೊಡವ ಸಮಾಜದ ಮೂಲಕ ಸಾಮಾಗ್ರಿಗಳನ್ನು ಸರಬರಾಜು ಮಾಡಲಾಗಿದ್ದು, ಈ ಬಗ್ಗೆ ನಮ್ಮ ಬಳಿ ದಾಖಲೆ ಇದೆ ಎಂದು ಕುಶಾಲಪ್ಪ ಸ್ಪಷ್ಟಪಡಿಸಿದರು. ಪರಿಹಾರ ಕೇಂದ್ರಕ್ಕೆ ನೀಡಬೇಕಾಗಿರುವ ಪರಿಹಾರ ಸಾಮಾಗ್ರಿಗಳು ನೇರವಾಗಿ ಪರಿಹಾರ ಕೇಂದ್ರಕ್ಕೆ ಹೋಗುತ್ತದೆ ಹೊರತು ಕೊಡವ ಸಮಾಜಕ್ಕೆ ಹೋಗಿಲ್ಲ ಎನ್ನುವುದನ್ನು ಮೊದಲು ಬಬ್ಬಿರ ಸರಸ್ವತಿ ಅವರು ತಿಳಿದುಕೊಳ್ಳಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪರಿಹಾರ ಕೇಂದ್ರಕ್ಕೆ ಶೌಚಾಲಯದ ಅವಕಾಶ ಇದ್ದ ಕಾರಣ ಬೆಂಗಳೂರಿನಿಂದ ಸದಸ್ಯರೊಬ್ಬರ ನೆರವಿನಿಂದ ನಾಲ್ಕು ಶೌಚಾಲಯವನ್ನು ತರಿಸಿಕೊಳ್ಳಲಾಗಿದೆ. ಕೊಡವ ಸಮಾಜ ನೀಡಿದ ಸೌಲಭ್ಯಗಳ ಬಗ್ಗೆ ಐಎಎಸ್ ಅಧಿಕಾರಿ, ಕೊಡಗಿನ ಪರಿಹಾರ ಕೇಂದ್ರಗಳ ಉಸ್ತುವಾರಿ ಅನ್ಬು ಕುಮಾರ್ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ನ್ಯಾಯಾಲಯ ಪ್ರಾಧಿಕಾರ ಸಮಿತಿ ಕೂಡ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಅಚ್ಚುಕಟ್ಟಾದ ಸೇವೆಯನ್ನು ಶ್ಲಾಘಿಸಿದೆ. ಹೀಗಿದ್ದೂ ಸರಸ್ವತಿ ಅವರು ಹೋಂಸ್ಟೆಗಳಲ್ಲಿ ಪರಿಹಾರ ಸಾಮಾಗ್ರಿಗಳನ್ನು ದಾಸ್ತನು ಇಡಲಾಗಿದೆ ಎಂದು ಆರೋಪ ಮಾಡುವ ಮೂಲಕ ಸಣ್ಣತನ ಮೆರೆದಿದ್ದಾರೆ. ಆರೋಪ ಮಾಡುವ ಬದಲು ಹೋಂಸ್ಟೇ ಹೆಸರನ್ನು ಬಹಿರಂಗ ಪಡಿಸಲಿ ಎಂದು ಕುಶಾಲಪ್ಪ ಸವಾಲೆಸೆದರು.
ಸಂತ್ರಸ್ತರ ಹೆಸರಿನಲ್ಲಿ ಬಬ್ಬಿರ ಸರಸ್ವತಿ ಅವರು ನಿಯಮ ಬಾಹಿರವಾಗಿ ಹಣ ಸಂಗ್ರಹಿಸಿರುವ ಬಗ್ಗೆ ಸೂಕ್ತ ದಾಖಲೆ ಇದೆ ಎಂದರು. ಮಾನವೀಯತೆ ಮೆರಿದಿರುವ ಕೊಡವ ಸಮಾಜದ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡಿರುವುದನ್ನು ಖಂಡಿಸುವುದಾಗಿ ತಿಳಿಸಿದ ಕುಶಾಲಪ್ಪ, ನಮ್ಮ ಸೇವೆ ಇನ್ನು ಮುಂದೆಯೂ ಮುಂದುವರೆಯಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೊಡವ ಸಮಾಜದ ಅಧ್ಯಕ್ಷ ಕೆ.ಮಣಿಕುಜ್ಞಪ್ಪ, ಕುಮಾರಿ ಕುಜ್ಞಪ್ಪ, ಕಾರ್ಯದರ್ಶಿ ಬಿ.ಬಿ.ಗಣಪತಿ, ಹೋಂಸ್ಟೇ ಅಸೋಸಿಯೇಷನ್ ಉಪಾಧ್ಯಕ್ಷ ಪಟ್ಟಮಾಡ ಮಾದಪ್ಪ ಹಾಗೂ ನಂಜಪ್ಪ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)