ಮೈಸೂರು

ಬ್ಯೂಟಿಷಿಯನ್ ಮಾಡಿದ ಅವಾಂತರದಿಂದ ಕೂದಲು ಕಳೆದುಕೊಂಡ ವಿದ್ಯಾರ್ಥಿನಿ : ಮನನೊಂದು ಆತ್ಮಹತ್ಯೆ

ಮೈಸೂರು,ಸೆ.2:- ಹೇರ್ ಸ್ಟ್ರೈಟ್ನಿಂಗ್ ಮಾಡಿಸಿಕೊಂಡ ಬೆನ್ನಲ್ಲೆ ಕೂದಲು ಉದುರಿದಕ್ಕೆ ಮನನೊಂದ ವಿದ್ಯಾರ್ಥಿನಿಯೋರ್ವಳು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೃತಳನ್ನು ಮೈಸೂರಿನಲ್ಲಿ ಕಾಣೆಯಾಗಿದ್ದ , ಹಾಲಿ ಮೈಸೂರಿನಲ್ಲಿ ಪಿಜಿಯಲ್ಲಿ ವಾಸ್ತವ್ಯವಿದ್ದ ಕೊಡಗಿನ ನಿಟ್ಟೂರು ಗ್ರಾಮದ ನಿವಾಸಿ  ವಿದ್ಯಾರ್ಥಿನಿ ಜಿ. ನೇಹಾ ಗಂಗಮ್ಮ (19)  ಎಂದು ಗುರುತಿಸಲಾಗಿದ್ದು, ನಿಟ್ಟೂರು ಲಕ್ಷ್ಮಣತೀರ್ಥ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.  ಮೃತದೇಹ ಹೊರ ತೆಗೆದಿರುವ ಪೊನ್ನಂಪೇಟೆ ಪೊಲೀಸರು ಶವವನ್ನು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಶವಗಾರದಲ್ಲಿ ಇರಿಸಿದ್ದಾರೆ. ಶನಿವಾರ ಸಂಜೆ ಹೊಳೆಯಲ್ಲಿ  ಮೃತದೇಹ ತೇಲುತ್ತಿರುವುದನ್ನು ಕಂಡ  ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈಕೆ ಮೈಸೂರು ಖಾಸಗಿ ಕಾಲೇಜಿನಲ್ಲಿ ಬಿಬಿಎ ಪದವಿ ವ್ಯಾಸಂಗ ಮಾಡುತ್ತಿದ್ದಳು. ಗೋಕುಲಂನಲ್ಲಿರುವ ಕೂರ್ಗ್ ಪಿಜಿಯಿಂದ ಕಾಲೇಜಿಗೆ ತೆರಳುವುದಾಗಿ ಹೇಳಿ ಆಗಸ್ಟ್ 28 ರಂದು ತೆರಳಿದವಳು ಮರಳಿ ಬಂದಿರಲಿಲ್ಲ. ಹೀಗಾಗಿ ಪಿಜಿ ಮಾಲೀಕ ಕಾರ್ಯಪ್ಪ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮೃತ ವಿದ್ಯಾರ್ಥಿನಿ  ಜಿ. ನೇಹಾ ಗಂಗಮ್ಮ  ಮೈಸೂರಿನ ರೋಹಿಣಿ ಬ್ಯೂಟಿ ಝೋನ್ ನಲ್ಲಿ ಹೇರ್ ಸ್ಟ್ರೈಟಿಂಗ್ ಮಾಡಿಸಿಕೊಂಡಿದ್ದಳು. ಹೇರ್ ಸ್ಟ್ರೈಟ್ನಿಂಗ್ ಮಾಡಿಸಿಕೊಂಡ ಬಳಿಕ  ಕೂದಲು ಉದುರಲು ಆರಂಭಿಸಿದೆ. ಈ ವೇಳೆ ಮನನೊಂದ ಈಕೆ ಕಾಲೇಜಿಗೆ ಹೋಗಲು ಹಿಂದೇಟು ಹಾಕುತ್ತಿದ್ದಳು. ಆದರೆ ಆಕೆಯ ಪೋಷಕರು ಸಮಾಧಾನ ಪಡಿಸಿ ಕಾಲೇಜಿಗೆ ಕಳುಹಿಸಿದ್ದರು. ಎನ್ನಲಾಗಿದೆ. ಆದರೆ  ನೇಹ ಗಂಗಮ್ಮ  ಕೂದಲು ಉದುರುವಿಕೆಯಿಂದ ಮನನೊಂದು ಅಗಸ್ಟ್ 28ರಂದು ಲಕ್ಷ್ಮಣ ತೀರ್ಥ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗುತ್ತಿದೆ. ನೇಹಾ ಗಂಗಮ್ಮ ಪೋಷಕರು ರೋಹಿಣಿ ಬ್ಯೂಟಿ ಝೋನ್ ವಿರುದ್ಧ ದೂರು ನೀಡಿದ್ದಾರೆ. ಪೊನ್ನಂಪೆಟೆ ಠಾಣೆಯಲ್ಲಿಯೂ ದೂರು ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: