
ಮೈಸೂರು
ಸರ್ಕಾರದ ಮಾಹಿತಿ ರೈತರಿಗೆ ಸಿಗುತ್ತಿಲ್ಲ: ದಯಾನಂದಮೂರ್ತಿ ಬೇಸರ
ಸರ್ಕಾರ ನೀಡುತ್ತಿರುವ ಮಾಹಿತಿಗಳು ಸರಿಯಾದ ರೀತಿಯಲ್ಲಿ ರೈತರಿಗೆ ಲಭ್ಯವಾಗುತ್ತಿಲ್ಲ ಎಂದು ಮೈಸೂರು ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ದಯಾನಂದಮೂರ್ತಿ ಬೇಸರ ವ್ಯಕ್ತ ಪಡಿಸಿದರು.
ಮೈಸೂರಿನ ಮಹಾತ್ಮಾಗಾಂಧಿ ರಸ್ತೆಯಲ್ಲಿರುವ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಸುತ್ತೂರು ಮತ್ತು ಜಿಲ್ಲಾ ಕೃಷಿಕ ಸಮಾಜದ ಆಶ್ರಯದಲ್ಲಿ ಮಾಜಿ ಪ್ರಧಾನಿ ಚರಣ್ ಸಿಂಗ್ ಚೌಧರಿ ಅವರ ಜನ್ಮದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಯಾನಂದಮೂರ್ತಿ ಮಾತನಾಡಿದರು. ಮುಂಚೆ ಶೆ.10 ರಷ್ಟು ಕೃಷಿ ಬೆಳೆಯಲಾಗುತ್ತಿತ್ತು. ಆದರೆ ಇಂದು ಶೇ.1ರಷ್ಟು ಕೃಷಿ ಬೆಳೆಯಲಾಗುತ್ತಿದೆ. ಕೃಷಿಯ ಪ್ರಮಾಣ ಒಂದಕ್ಕಿಳಿದಿದೆ ಇದು ನಮ್ಮ ದುರಂತ. ರೈತರ ಕೃಷಿಗೆ ಆದ್ಯತೆ ನೀಡಬೇಕು. ಇಲ್ಲದಿದ್ದಲ್ಲಿ ಮುಂದೆ ಊಟಕ್ಕೂ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು.
ಸರ್ಕಾರ ರೈತರಿಗೆ ಕೆಲವು ಮಾಹಿತಿಗಳನ್ನು ನೀಡುತ್ತಿದೆ. ಆದರೆ ಅದು ರೈತರನ್ನು ಸರಿಯಾಗಿ ತಲುಪುತ್ತಿಲ್ಲ. ಕೃಷಿಗೆ ಪ್ರೋತ್ಸಾಹ ನೀಡಬೇಕು. ಹಾಗಿದ್ದಾಗ ಮಾತ್ರ ಪ್ರಗತಿ ಸಾಧ್ಯ ಎಂದರು.
ಕಾರ್ಯಕ್ರಮವನ್ನು ಜಿಲ್ಲಾಪಂಚಾಯತ್ ಅಧ್ಯಕ್ಷೆ ನಯೀಮಾ ಸುಲ್ತಾನ ಉದ್ಘಾಟಿಸಿದರು.
ಈ ಸಂದರ್ಭ ಕೃಷಿಯಲ್ಲಿ ಸಾಧನೆಗೈದ ಪಿರಿಯಾಪಟ್ಟಣದ ವೀರಾಜಮ್ಮ, ಹುಣಸೂರಿನ ಜಯಮ್ಮ, ನಂಜನಗೂಡಿನ ರಾಜೇಂದ್ರಕುಮಾರ್, ಕೆ.ಆರ್.ನಗರದ ಪಾಪೇಗೌಡ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಬೀರಿಹುಂಡಿ ಬಸವಣ್ಣ, ತಾಲೂಕು ಪಂಚಾಯತ್ ಉಪಾಧ್ಯಕ್ಷ ಮಂಜು ಮತ್ತಿತರರು ಉಪಸ್ಥಿತರಿದ್ದರು.