ಮೈಸೂರು

ಈಜಲು ತೆರಳಿದ ವಿದ್ಯಾರ್ಥಿ ನೀರಿನ ಸುಳಿಗೆ ಸಿಲುಕಿ ಸಾವು

ಮೈಸೂರು,ಸೆ.2:- ಈಜಲು  ತೆರಳಿದ ವಿದ್ಯಾರ್ಥಿಯೋರ್ವ ನೀರು ಪಾಲಾದ ಘಟನೆ  ಮರದೂರ್ ಬಳಿ ಲಕ್ಷ್ಮಣ ತೀರ್ಥ ನದಿಯಲ್ಲಿ ನಡೆದಿದೆ.

ಮೃತನನ್ನು ಹುಣಸೂರು ಪಟ್ಟಣದ ನಿವಾಸಿ ಸುರೇಶ್ ರಾವ್‌ರವರ ಪುತ್ರ ನಂದನ್ ರಾವ್ ಎಂದು ಗುರುತಿಸಲಾಗಿದ್ದು, ಮರದೂರ್ ಬಳಿ ಲಕ್ಷ್ಮಣ ತೀರ್ಥ ನದಿಯಲ್ಲಿ ಈಜಲು ಹೋಗಿ ಸುಳಿಯಲ್ಲಿ ಸಿಕ್ಕಿ ಮೃತಪಟ್ಟಿದ್ದಾರೆ. ಮರದೂರಿನಲ್ಲಿ ನಾಳೆ ಕ್ರೀಡಾ ಕೂಟ ನಡೆಯಲಿದ್ದು, ಕಬ್ಬಡಿ ಆಟಗಾರರಾಗಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿ ನಂದನ್‌ರಾವ್ ಹಾಗೂ ನಾಲ್ಕು ಮಂದಿನ ಸ್ನೇಹಿತರು ಇಂದು ಸ್ಥಳ ವೀಕ್ಷಣೆಗಾಗಿ ಮರದೂರಿಗೆ ತೆರಳಿದ್ದರು. ನಂತರ ಹೊಳೆ ಬದಿ ಕುಳಿತು ಊಟ ಮಾಡಲು ತೆರಳಿದ್ದ ಸಂದರ್ಭ ನಾಲ್ವರು ಸ್ನೇಹಿತರು ಊಟಕ್ಕೆ ಕುಳಿತರೆ ನಂದನ್ ನದಿಯಲ್ಲಿ ಈಜಲು ಮುಂದಾಗಿದ್ದಾನೆ. ಆ ಜಾಗದಲ್ಲಿ ಸುಳಿ ಇದ್ದು, ನಂದನ್ ಸುಳಿಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ಸ್ನೇಹಿತರ ಕಿರುಚಾಟ ಕೇಳಿ ಪಕ್ಕದ್ದಲ್ಲೇ ಬಟ್ಟೆ ಒಗೆಯುತ್ತಿದ್ದ ಮಹಿಳೆಯರು ಸೀರೆಯ ಸಹಾಯದಿಂದ ನಂದನ್ ನನ್ನು ಹೊರಗೆ ತೆಗೆದು, ಅವನು ಸೇವಿಸಿದ್ದ ನೀರನ್ನು ಸಹ ಆಚೆಗೆ ತೆಗೆದಿದ್ದಾರೆ. ಆದರೆ ದುರಾದೃಷ್ಟವಶಾತ್ ನಂದನ್  ಹೆಚ್ಚಾಗಿ ನೀರು ಸೇವಿಸಿದ್ದರಿಂದ  ಆತ ಅಲ್ಲೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಬಿಳಿಕೆರೆ ಠಾಣೆ ಪೋಲಿಸರು ಆಗಮಿಸಿ, ಪ್ರಕರಣ ದಾಖಲಿಸಿದ್ದಾರೆ. ಶವ ಪರೀಕ್ಷೆ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: