ಪ್ರಮುಖ ಸುದ್ದಿಮೈಸೂರು

ನಾಡಹಬ್ಬ ದಸರೆಗೆ ಪ್ರವಾಸಿಗರನ್ನು ಸೆಳೆಯಲು ಇದೇ ಮೊದಲ ಬಾರಿಗೆ ಬಿಎಂಎಕ್ಸ್ ಸೈಕ್ಲಿಂಗ್ ಹಾಗೂ ಮೋಟೋಕ್ರಾಸ್ ಸಾಹಸ ಪ್ರದರ್ಶನ

ಮೈಸೂರು,ಸೆ.3:- ಪ್ರವಾಸಿಗರನ್ನು ನಾಡಹಬ್ಬ ದಸರೆಗೆ ಸೆಳೆಯುವ ಉದ್ದೇಶದಿಂದ ಹಲವು ವಿಶೇಷ ಆಕರ್ಷಣೆಗಳನ್ನು ಈ ಬಾರಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.   ಇದೇ ಮೊದಲ ಬಾರಿಗೆ ಬಿಎಂಎಕ್ಸ್‌ ಸೈಕ್ಲಿಂಗ್‌ ಹಾಗೂ ಮೋಟೋಕ್ರಾಸ್ ಸಾಹಸ ಪ್ರದರ್ಶನ ಗಮನ ಸೆಳೆಯಲಿವೆ.

ಕೊಡಗು ಹಾಗೂ ಕೇರಳದಲ್ಲಿ ಪ್ರವಾಹ ಉಂಟಾಗಿದ್ದ ಕಾರಣ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿರುವುದು ದಸರೆಯ ಮೇಲೂ ಪ್ರಭಾವ ಬೀರಲಿದೆ. ಹಾಗಾಗಿ, ಪ್ರವಾಸಿಗರ ಸಂಖ್ಯೆ ಕಡಿಮೆಯಾಗುವ ಅಂದಾಜಿದೆ. ದಸರೆಗೆಂದು ಮೈಸೂರಿಗೆ ಬರುವ ಅನೇಕ ಪ್ರವಾಸಿಗರು ಸಾಮಾನ್ಯವಾಗಿ ಕೊಡಗಿಗೂ ಪ್ರವಾಸಕ್ಕೆ ತೆರಳುತ್ತಾರೆ. ಆದರೆ, ಈಗ ಕೊಡಗು ಸಾಕಷ್ಟು ಹಾನಿಗೆ ಒಳಗಾಗಿರುವ ಕಾರಣ ಹಾಗೂ ಪ್ರತಿಕೂಲ ವಾತಾವರಣದ ಸಲುವಾಗಿ ಅಲ್ಲಿಗೆ ತೆರಳುವುದು ಅಸಾಧ್ಯವಾಗಿದೆ. ಈ ಕಾರಣದಿಂದ ದಸರೆಗೂ ಪ್ರವಾಸಿಗರು ಕಡಿಮೆಯಾಗಬಹುದು ಎಂಬ ನಿರೀಕ್ಷೆಯಲ್ಲಿ, ಪರ್ಯಾಯ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡ ಹೊರಟಿದೆ.

ಏನಿದು ಬಿಎಂಎಕ್ಸ್‌?

ಬೈಸಿಕಲ್ ಸಾಹಸ ಚಟುವಟಿಕೆಗಳಿಗೆ ಬಿಎಂಎಕ್ಸ್‌ ಎಂದು ಹೇಳಲಾಗುತ್ತದೆ. ವೇಗವಾಗಿ ಬೈಸಿಕಲ್‌ನಲ್ಲಿ ಸಾಗಿ ದಿಣ್ಣೆಗಳಲ್ಲಿ ಹಾರಿಸುವುದು, ಇಳಿಜಾರಿನಲ್ಲಿ ವೇಗವರ್ಧಿಸಿಕೊಳ್ಳುವುದು ರೋಮಾಂಚನ ಮೂಡಿಸುತ್ತದೆ. ಈ ರೀತಿಯ ಸಾಹಸ ಪ್ರದರ್ಶನವನ್ನು ದಸರೆಯಲ್ಲಿ ನೀಡಲು ಚಿಂತಿಸಲಾಗುತ್ತಿದೆ. ಮೈಸೂರು ಅರಮನೆಯ ಆವರಣದಲ್ಲಿ ತಾತ್ಕಾಲಿಕ ವೇದಿಕೆಗಳನ್ನು ನಿರ್ಮಿಸಿ, ಬೈಸಿಕಲ್‌ ಸಾಹಸ ಪ್ರದರ್ಶನ ನಡೆಸಲಾಗುವುದು. ಇದಕ್ಕಾಗಿ ಪರಿಣಿತ ‘ಬಿಎಂಎಕ್ಸ್‌’ ಪಟುಗಳನ್ನು ಕರೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹಾಗೂ ದಸರಾ ವಿಶೇಷಾಧಿಕಾರಿ ಅಭಿರಾಂ ಜಿ.ಶಂಕರ್‌ ತಿಳಿಸಿದರು.

ಇದು ಸಂಪೂರ್ಣ ಪರಿಸರ ಸ್ನೇಹಿ ಚಟುವಟಿಕೆ. ಅರಮನೆ ಆವರಣದಲ್ಲಿ ನಡೆಯುವ ಕಾರಣ, ವಾಯುಮಾಲಿನ್ಯವಾಗದಂತೆ ಎಚ್ಚರ ವಹಿಸಬೇಕು. ಬೈಸಿಕಲ್‌ ಸಾಹಸವಾಗಿರುವ ಕಾರಣ, ಮಾಲಿನ್ಯ ಆಗುವುದಿಲ್ಲ. ಇದು ಸಾಹಸ ಕ್ರೀಡೆಯಾದ ಕಾರಣ ಮುನ್ನೆಚ್ಚರಿಕೆಯೂ ಮುಖ್ಯವಾದುದು. ಅದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಮೋಟೋಕ್ರಾಸ್ ಮೋಜು

ಅಂತೆಯೇ, ಮೈಸೂರಿನ ಹೊರವಲಯದಲ್ಲಿ ‘ಮೋಟೋಕ್ರಾಸ್’ ಸಾಹಸ ಕ್ರೀಡೆಯನ್ನೂ ಹಮ್ಮಿಕೊಳ್ಳಲಾಗುವುದು. ನುರಿತ ಬೈಕ್ ಸವಾರರು ಪ್ರದರ್ಶನ ನೀಡುವರು. ದಸರಾಗೆ ಬರುವ ಪ್ರವಾಸಿಗರು ಸಂತೃಪ್ತರಾಗಬೇಕು. ಅವರ ರಜಾ ದಿನಗಳು ಅರ್ಥಪೂರ್ಣವಾಗಿ ಕಳೆಯುವಂತಿರಬೇಕು. ಅದಕ್ಕಾಗಿ ಈ ಸಿದ್ಧತೆಗಳು ಎಂದಿದ್ದಾರೆ.

‘ಈಗಾಗಲೇ ಹಲವು ಸಾಹಸ ಕ್ಲಬ್‌ಗಳನ್ನು ಸಂಪರ್ಕಿಸಿದ್ದೇವೆ. ಉತ್ತಮ ಸಂಸ್ಥೆಗಳನ್ನು ಆಯ್ಕೆ ಮಾಡಿ ಕಾರ್ಯಕ್ರಮ ನಿಗದಿಪಡಿಸುತ್ತೇವೆ’ ಎಂದು ಅವರು ಮಾಹಿತಿ ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: