ಕರ್ನಾಟಕಪ್ರಮುಖ ಸುದ್ದಿಮೈಸೂರು

ವಿದ್ಯಾರ್ಥಿಗಳಿಗೆ ಜನಪರ ಶಿಕ್ಷಣ ನೀಡಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ

university-2ಇಂದಿನ ವಿದ್ಯಾರ್ಥಿಗಳಿಗೆ ವೈಜ್ಞಾನಿಕ, ವೈಚಾರಿಕ, ಮಾನವೀಯ ಹಾಗೂ ಜನಪರ ಶಿಕ್ಷಣ ನೀಡಿದಾಗ ಮಾತ್ರ ಸಮಾಜದಲ್ಲಿರುವ ಅನೇಕ ಅನಿಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಶುಕ್ರವಾರ ಮೈಸೂರಿನ ಕ್ರಾಫರ್ಡ್  ಭವನದಲ್ಲಿ ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವ ಅಂಗವಾಗಿ ಹೊರ ತಂದಿರುವ 5 ರೂ. ಹಾಗೂ 100 ರೂ.ಗಳ ವಿಶೇಷ ಶತಮಾನೋತ್ಸವ ನಾಣ್ಯಗಳು, ಸಚಿತ್ರ ಪುಸ್ತಕ (ಕಾಫಿ ಟೇಬಲ್ ಬುಕ್), ಶತಮಾನೋತ್ಸವ ಉಪನ್ಯಾಸಗಳ ಸಂಕಲನ ಹಾಗೂ ಕರ್ನಾಟಕ ವಿಶ್ವಕೋಶ ಸಂಪುಟ-1ರ ಇಂಗ್ಲಿಷ್ ಅನುವಾದವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಇಂದು ಜನಪರ, ಸಮಾಜಮುಖಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಮೈಸೂರು ವಿಶ್ವವಿದ್ಯಾಲಯ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದರೂ ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವವರ ಸಂಖ್ಯೆ ತೀರಾ ಕಡಿಮೆಯಿದೆ. ದಕ್ಷಿಣ ಕೊರಿಯಾ ಶೇ.95, ಪಿನ್‍ಲ್ಯಾಂಡ್ ಶೇ.91, ಅಮೆರಿಕಾ ಶೇ.89, ಇಂಗ್ಲೆಂಡ್ ಶೇ.57ರಷ್ಟು ಉನ್ನತ ಶಿಕ್ಷಣ ಹೊಂದಿದ್ದರೆ, ಭಾರತದ ಉನ್ನತ ಶಿಕ್ಷಣದ ಪ್ರಮಾಣ ಕೇವಲ ಶೇ.21ರಷ್ಟು ಮಾತ್ರ. ಒಟ್ಟಾರೆ ವಿಶ್ವದ ಸರಾಸರಿ ಉನ್ನತ ಶಿಕ್ಷಣದ ಪ್ರಮಾಣ ಶೇ.26ರಷ್ಟಿದ್ದು ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ವಿದ್ಯಾರ್ಥಿಗಳು ಮೂಲವಿಜ್ಞಾನದೆಡೆಗೆ ಹೆಚ್ಚು ಆಸಕ್ತಿ ತೋರುತ್ತಿಲ್ಲ. ವಿಶ್ವವಿದ್ಯಾನಿಲಯಗಳು ಮೂಲವಿಜ್ಞಾನವನ್ನು ಹೆಚ್ಚು ಆಕರ್ಷಿತಗೊಳಿಸಿ ವಿದ್ಯಾರ್ಥಿಗಳನ್ನು ಮೂಲ ವಿಜ್ಞಾನದೆಡೆಗೆ ಸೆಳೆದು ಸಮಾಜದ ಅಭಿವೃದ್ಧಿಗೆ ಕಾರಣರಾಗಬೇಕು ಎಂದು ಸಲಹೆ ನೀಡಿದರು.

ಕೆಂದ್ರ ಸರ್ಕಾರದಿಂದ ಕನ್ನಡದ ಕಡೆಗಣನೆ: ಸಾವಿರಾರು ವರ್ಷಗಳ ಸುದೀರ್ಘ ಇತಿಹಾಸವನ್ನೊಳಗೊಂಡು ಶಾಸ್ತ್ರೀಯ ಸ್ಥಾನಮಾನ ಹೊಂದಿರುವ ಕನ್ನಡ ಭಾಷೆಯನ್ನು ಕೇಂದ್ರ ಸರ್ಕಾರ ಕಡೆಗಣಿಸುತ್ತಿದೆ. ನೀಟ್ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಸೇರಿಸುವಂತೆ ಪತ್ರ ಬರೆದಿದ್ದರೂ ಪರಿಗಣಿಸಿಲ್ಲ. ನೋಟಿನಲ್ಲಿರುವ ಎಲ್ಲಾ ಭಾಷೆಗಳನ್ನು ಪರಿಗಣಿಸುವಂತೆ ಖಾರವಾದ ಪತ್ರ ಬರೆಯಲು ನಿರ್ಧರಿಸಿದ್ದೇನೆ. ಅಲ್ಲದೆ ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು, ಸಚಿವರಿಗೆ ಕೇಂದ್ರಕ್ಕೆ ಮನವರಿಕೆ ಮಾಡುವಂತೆ ಒತ್ತಾಯಿಸುತ್ತೇನೆ ಎಂದರಲ್ಲದೇ, ಕನ್ನಡವನ್ನು ಕಡೆಗಣಿಸುವ ಕೆಲಸವನ್ನು ಯಾರೂ ಮಾಡಬಾರದು. ಅದಕ್ಕೆ ರಾಜ್ಯ ಸರ್ಕಾರ ಬಿಡುವುದಿಲ್ಲ ಎಂದು ಹೇಳಿದರು.

ಬಳಿಕ ಮಾತನಾಡಿದ ವಿದ್ವಾಂಸ ಹಂ.ಪ.ನಾಗರಾಜಯ್ಯ, ಭಾರತ ದುಡಿಯುವ ರಾಷ್ಟ್ರವಾಗುವ ಬದಲು ರಜೆಗಳ ರಾಷ್ಟ್ರವಾಗುತ್ತಿದೆ. ಜಾತೀಯತೆಯನ್ನು ತೊಲಗಿಸುವ ಸಲುವಾಗಿ ಅಹಿಂದ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾತೀಯ ಹಬ್ಬಗಳಿಗೆ ರಜೆ ನೀಡಿದರೆ ಜಾತೀಯತೆ ತೊಲಗಿಸಲು ಸಾಧ್ಯವಿಲ್ಲ. ಅದರ ಬದಲು ಕೇವಲ ಆ.15ಕ್ಕೆ ಮಾತ್ರ ಸರ್ಕಾರಿ ರಜೆ ಘೋಷಿಸಿ ಉಳಿದಂತೆ ಎಲ್ಲರಿಗೂ ವರ್ಷದಲ್ಲಿ 25 ರಜೆಗಳನ್ನು ಪಡೆಯಲು ಅವಕಾಶ ನೀಡಬೇಕು ಎಂದ ಅವರು, ದೇವಾಲಯಗಳಲ್ಲಿ ಧ್ವನಿವರ್ಧಕಗಳನ್ನು ನಿಷೇಧಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಕುಲಸಚಿವ ಪ್ರೊ.ಆರ್.ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: