ಪ್ರಮುಖ ಸುದ್ದಿಮೈಸೂರು

ಸಾಲ ಮನ್ನಾ, ರಾಷ್ಟ್ರೀಯ ಜಲನೀತಿ, ವೈಜ್ಞಾನಿಕ ಬೆಲೆ ಹಾಗೂ ಗುಣಮಟ್ಟದ ವಿದ್ಯುತ್‍ಗೆ ಆಗ್ರಹಿಸಿದ ರೈತರ ಸಮಾವೇಶ

ರಾಷ್ಟ್ರೀಯ ಜಲನೀತಿ ರೂಪಿಸಿ, ರೈತರ ಸಾಲ ಸಂಪೂರ್ಣ ಮನ್ನಾ ಮಾಡಿ, ಗುಣಮಟ್ಟದ ವಿದ್ಯುತ್ ಪೂರೈಸಿ, ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಿ ಎನ್ನುವ ಪ್ರಮುಖ ಬೇಡಿಕೆಗಳನ್ನು ಮಂಡಿಸಿದ್ದು ಭಾರತೀಯ ಕೃಷಿಕ ಸಮಾಜ ರೈತ ಸಂಘಟನೆಯ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿಯವರು.

ಅವರು, ಶುಕ್ರವಾರ ಬೆಳಿಗ್ಗೆ ನಗರದ ಟೌನ್ ಹಾಲ್‍ನ ರಂಗಾಚಾರ್ಲು ಪುರಭವನದಲ್ಲಿ 6ನೇ ರಾಜ್ಯಮಟ್ಟದ ರೈತ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ. ಪ್ರತಿಭಟನೆ, ಹೋರಾಟಗಳಿಂದ ಮಾತ್ರವಲ್ಲ ಸಮಾವೇಶಗಳಿಂದಲೂ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕಾಗಿದೆ. ದಿನಕ್ಕೊಂದು ಜಯಂತಿಗಳನ್ನು ಆಚರಿಸಿ ಸಾರ್ವಜನಿಕರ ತೆರಿಗೆ ಹಣವನ್ನು ವ್ಯರ್ಥ ಮಾಡಲಾಗುತ್ತಿದೆ. ಇವುಗಳೊಟ್ಟಿಗೆ ರೈತ ಜಯಂತಿ ಆಚರಿಸಿದರೆ ಸರ್ಕಾರಕ್ಕೆ ಬಡತನ ಬರುವುದೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರಲ್ಲದೇ,  ಬರಗಾಲ ಹಾಗೂ ಸಾಲದಿಂದಾಗಿ 1500ಕ್ಕೂ ಹೆಚ್ಚು ರೈತರು  ಆತ್ಮಹತ್ಯೆ ಮಾಡಿಕೊಂಡಿದ್ದು ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿ, ಜಯಂತಿ ಆಚರಿಸುವ ಮೂಲಕ ರೈತರಲ್ಲಿ ಚೈತನ್ಯ ಮನೋಬಲವನ್ನು ತುಂಬುವ ಅವಶ್ಯಕತೆಯಿದೆ ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ರಾಷ್ಟ್ರೀಯ ಜಲನೀತಿ: ರೈತರ ಹಿತ ಕಾಪಾಡುವ ಉದ್ದೇಶವಿದ್ದರೆ ರಾಷ್ಟ್ರೀಯ ಜಲನೀತಿ ರೂಪಿಸಿ ಶಾಶ್ವತ ಪರಿಹಾರ ನೀಡಿ, ಉತ್ತರದಲ್ಲಿ ಕಳಸ- ಬಂಡೂರಿ ಹಾಗೂ ದಕ್ಷಿಣದಲ್ಲಿ ಕಾವೇರಿ ನದಿನೀರು ಹಂಚಿಕೆಯ ಹೋರಾಟದಿಂದಲೇ ರೈತರು ಜೀವನ ಕಳೆಯುವಂತಾಗಿದೆ.

ಗುಣಮಟ್ಟದ ವಿದ್ಯುತ್: ಪಟ್ಟಣದಂತೆ ಗ್ರಾಮಗಳಿಗೂ ಗುಣಮಟ್ಟದ ವಿದ್ಯುತ್ ನೀಡಿ, ನಮ್ಮ ಮಕ್ಕಳೂ ಓದಬೇಕು, ನಮಗೂ ಕುಟುಂಬವಿದೆ, ರಾತ್ರಿ ಹೊತ್ತು ನೀಡುವ ವಿದ್ಯುತ್‍ನಿಂದ ಹೊಲ-ಗದ್ದೆಗಳಲ್ಲಿ ವಿಷಜಂತುಗಳೊಂದಿಗೆ ಸೆಣಸುವುದೇ ರೈತರ ಗೋಳಾಗಿದೆ. ಈ ಬಗ್ಗೆ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದು ನ್ಯಾಯಕ್ಕೆ ಒತ್ತಾಯಿಸಲಾಗುವುದು ಎಂದರು.

ಮದ್ಯಪಾನ ನಿಷೇಧ: ಕೂಲಿ ಕಾರ್ಮಿಕರು ಇತರೆ ಶ್ರಮಿಕರು ಕುಡಿತದ ದಾಸರಾಗಿದ್ದು ಕುಟುಂಬಗಳು ಬೀದಿಗೆ ಬೀಳುವಂತಾಗಿದ್ದು ರಾಜ್ಯ ಸರ್ಕಾರ ಮದ್ಯಪಾನವನ್ನು ನಿಷೇಧಿಸಿ ಬಡವರ, ಶ್ರಮಿಕರ ಕುಟುಂಬಗಳನ್ನು ಕಾಪಾಡಬೇಕು ಎಂದು ಕೋರಿದರು.

ಸಾಲ ಮನ್ನಾ : ಯುಪಿಎ ಸರ್ಕಾರ ಬಂಡವಾಳ ಶಾಹಿಗಳ 13ಲಕ್ಷ ಕೋಟಿ ರೂಪಾಯಿ ಹಾಗೂ ಎನ್‍ಡಿಎ ಸರ್ಕಾರ 5 ಲಕ್ಷ ಕೋಟಿ ರೂಪಾಯಿ ಸಬ್ಸಿಡಿ ಹಣ ಮನ್ನಾ ಮಾಡಲು ಹೊರೆಯಾಗಲಿಲ್ಲ, ಗರಿಷ್ಠವೆಂದರೂ ರೈತರದು 70 ರಿಂದ 80 ಕೋಟಿ ರೂಪಾಯಿ ಸಾಲವಿದೆ, ಈ ಕನಿಷ್ಟಮಟ್ಟದ ಸಾಲವನ್ನು ಮನ್ನಾಮಾಡದೇ ಕೇಂದ್ರದ ಮೇಲೆ ರಾಜ್ಯ, ರಾಜ್ಯದ ಮೇಲೆ ಕೇಂದ್ರ ವಿಷಯವನ್ನು ರಾಜಕೀಯಗೊಳಿಸುತ್ತಿದ್ದು ಇದು ಸಲ್ಲದು. ನಿಮ್ಮ ನಿಮ್ಮ ವ್ಯಾಪ್ತಿಗೊಳಪಡುವ ಬ್ಯಾಂಕ್ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡಿ ಎಂದು ಆಗ್ರಹಿಸಿ, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗುವುದು ಎಂದು ಜೆ.ಡಿ.ಎಸ್. ಮುಖಂಡರು ಹೇಳಿಕೆಗಳನ್ನು ನೀಡುತ್ತಿದ್ದು ಯಾವ ಮೂಲದಿಂದ ಮನ್ನಾ ಮಾಡುತ್ತೀರೆಂದು ರೈತರಿಗೆ ಮೊದಲು ಸ್ಪಷ್ಟಪಡಿಸಿ ಎಂದರು.

ಪ್ರಗತಿಪರ ರೈತರಿಗೆ ಸನ್ಮಾನ: ಸಮಾವೇಶದಲ್ಲಿ ತುಮಕೂರಿನ ಮೃತ್ಯುಂಜಯ, ಬೆಳಗಾವಿಯ ಜಗದೀಶ್ ದಳವಾಯಿ, ಹಾವೇರಿಯ ಅರುಣ ಶಿವಾನಂದ ರಾಮಗಿರಿ, ಹೆಚ್.ಡಿ.ಕೋಟೆಯ ಕೃಷ್ಣೇಗೌಡ,ಮೈಸೂರಿನ ಮೂಗೂರು ಸಿದ್ದರಾಜು ಹಾಗೂ ಇತರ ಪ್ರಗತಿಪರ ರೈತರುಗಳನ್ನು ಶಾಲು ಹೊದಿಸಿ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು.

ಬಾವುಟದಂತೆ ಹಾರಿದ ಹಸಿರು ಶಾಲು: ಹಾವೇರಿ ಜಿಲ್ಲೆಯ ಹುರಳಿಕುಪ್ಪಿ ಶ್ರೀವೀರಭದ್ರೇಶ್ವರ ಸಾಂಸ್ಕೃತಿಕ ಕಲಾ ಸಂಘದ ಕಲಾವಿದರು ಪ್ರಸ್ತುತ ಪಡಿಸಿದ ರೈತ ಗೀತೆಗೆ ಸಭಾಂಗಣ ಹಾಗೂ ವೇದಿಕೆಯ ಮೇಲೆಲ್ಲಾ ಹಸಿರು ಶಾಲುಗಳು ಹೆಮ್ಮೆಯ ದ್ಯೋತಕವಾಗಿ ಹಾರಾಡಿದವು.

ಮೈಸೂರು ವಿವಿಯ ಸಿಸ್ಟ್ ನಿರ್ದೇಶಕ ಡಾ.ಎ.ಎಂ.ಸುಧಾಕರ್ ಸಾಮಾಜಿಕ ಜಾಲತಾಣ ಉದ್ಘಾಟಿಸಿದರು.

ವೇದಿಕೆಯ ಮೇಲೆ ಮುಂಡರಗಿಯ ಡಾ.ಲೋಕೇಶ್ ಟೇಕಲ್, ಎಸ್.ಆರ್.ಎಲ್.ಸಿ. ಪ್ರಾಂಶುಪಾಲ ಡಾ.ಜಿ.ಪ್ರಭಾಕರ್, ಚುಟುಕು ಸಾಹಿತ್ಯ ಪರಿಷದ್ ಸಂಸ್ಥಾಪಕ ಡಾ.ಎಂ.ಜಿ.ಆರ್.ಅರಸ್, ಹಾಸನ ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕ ಬಿ.ಸಿ.ಶಂಕರಾಚಾರಿ, ಗದಗ, ಜಿ.ಪಂ.ಸದಸ್ಯ ವೀರನಗೌಡ ಈಶ್ವರಪ್ಪ ನಾಡಗೌಡ್ರು, ಮಹಿಳಾ ಘಟಕ ಅಧ್ಯಕ್ಷೆ ರತ್ನಗೌಡ, ಬಿ.ಡಿ.ಕೃಷ್ಣಮೂರ್ತಿ, ವೀರನಗೌಡ ಪಾಟೀಲ ಹಾಗೂ ಇತರ ರೈತ ಮುಖಂಡರು ಉಪಸ್ಥಿತರಿದ್ದರು.

ಅಕಾಲಿಕವಾಗಿ ನಿಧನರಾದ ಮೈಸೂರು ರೈತ ಸಂಘದ ಜಿಲ್ಲಾಧ್ಯಕ್ಷ ದೇವರಾಜ್ ಗೌಡ ಹಾಗೂ ಬೆಳಗಾವಿಯ ಬೀರಪ್ಪ ಪೂಜಾರಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಚಾಮರಾಜನಗರ ಜಿಲ್ಲಾಧ್ಯಕ್ಷ ಪ್ರಸಾದ್ ಸ್ವಾಗತಿಸಿದರು.  ಸಂಘದ ನಿರ್ದೇಶಕ ಡಿ.ಎಸ್.ಸಿದ್ದರಾಮಯ್ಯ ಪ್ರಾಸ್ತಾವಿಕವಾಗಿ ನುಡಿದರು. ಉತ್ತರ ಕರ್ನಾಟಕದ ರೈತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

dsc00111-%e0%b2%a1

 

 

 

Leave a Reply

comments

Related Articles

error: