ಮೈಸೂರು

ಟಿಬೇಟಿಯನ್ನರಿಗೆ ದಲೈಲಾಮಾರವರ ಆಶಯದಂತೆ ಸ್ವಾಯತ್ತತೆಯನ್ನು ಚೀನಾ ಸರ್ಕಾರ ನೀಡಬೇಕು : ಬಿ ವಿ ಜವರೇಗೌಡ

ಮೈಸೂರು,ಸೆ.3:- ವಿಶ್ವಸಂಸ್ಥೆಯ ನಿರ್ಣಯದಂತೆ ಟಿಬೇಟಿಯನ್ನರ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ವಿಶ್ವಾದ್ಯಂತ ಇರುವ ಆರು ಮಿಲಿಯನ್ ಟಿಬೇಟಿಯನ್ನರಿಗೆ ದಲೈಲಾಮಾರವರ ಆಶಯದಂತೆ ಸ್ವಾಯತ್ತತೆಯನ್ನು ಚೀನಾ ಸರ್ಕಾರ ನೀಡಬೇಕೆಂದು ಇಂಡೊ ಟಿಬೇಟಿಯನ್ ಸ್ನೇಹಬಳಗದ ಅಧ್ಯಕ್ಷ ಬಿ ವಿ ಜವರೇಗೌಡ ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆಯ ಟಿಡಿಎಲ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ  58ನೇ ಟಿಬೇಟಿಯನ್ನರ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಇಂಡೋ-ಟಿಬೇಟಿಯನ್ ಸ್ನೇಹ ಸಂಘದ ಅಧ್ಯಕ್ಷ ಮತ್ತು ವಕೀಲ ಬಿ.ವಿ.ಜವರೇಗೌಡ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಬಳಿಕ ಮಾತನಾಡಿದ ಅವರು ವಿಶ್ವಸಂಸ್ಥೆಯ ನಿರ್ಣಯದಂತೆ ಟಿಬೇಟಿಯನ್ನರ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ವಿಶ್ವಾದ್ಯಂತ ಇರುವ ಆರು ಮಿಲಿಯನ್ ಟಿಬೇಟಿಯನ್ನರಿಗೆ ದಲೈಲಾಮಾರ ಆಶಯದಂತೆ ಸ್ವಾಯತ್ತತೆಯನ್ನು ಚೀನಾ ಸರ್ಕಾರ ನೀಡಬೇಕೆಂದು ಹೇಳಿದರು. ಚೀನಾ ದೇಶವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದು ಟಿಬೇಟಿಯನ್ನರ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಹಕ್ಕುಗಳಿಗೆ ಧಕ್ಕೆ ಬಾರದಂತೆ ಅವರಿಗೆ ಸ್ವಾಯತ್ತತೆಯ ಸರ್ಕಾರವನ್ನು ನೀಡಬೇಕೆಂದು ಮನವಿ ಮಾಡಿದರು.  ದುರ್ದೈವದ ಸಂಗತಿಯೆಂದರೆ  ಈಗಿರುವ ಚೈನಾದ ಮುಖ್ಯಸ್ಥರಾದ  ಗ್ಸಿ.ಜಿನ್ಪಿಂಗ್‍ ಅವರನ್ನು ಅಜೀವ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಂಡಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದ್ದು, ಚೈನಾದ ನಾಗರೀಕರಿಗೆ ವಿರುದ್ಧವಾಗಿರುತ್ತದೆ ಎಂದು ಹೇಳಿದರು.  ಟಿಬೇಟಿಯನ್ನರು ಆ ದೇಶವನ್ನು ಬಿಟ್ಟು 50 ವರ್ಷಗಳು ಕಳೆದರೂ ಸಹ ಇನ್ನೂ ಅವರಿಗೆ ಸ್ವಾತಂತ್ರ್ಯ ಧಕ್ಕದಿರುವುದು ಅವರಿಗೆ ಮತ್ತು ದಲೈಲಾಮರ ಆಸೆಗೆ ತಣ್ಣೀರೆರಚಿದಂತಾಗಿದೆ. ಟಿಬೇಟಿಯನ್ ಯುವ ಜನತೆ ಮುಂಬರುವ ಎಲ್ಲಾ ಪರಿಣಾಮಗಳನ್ನು ಎದುರಿಸಲು ಸನ್ನದ್ಧರಾಗಬೇಕೆಂದು ಹೇಳಿದರು.

ಟಿಬೇಟಿಯನ್ ಪಾರ್ಲಿಮೆಂಟಿನ ಪರವಾಗಿ ಪಾರ್ಲಿಮೆಂಟ್ ಸದಸ್ಯರಾದ ಪೇಮಾದೆಲೆಕ್‍  ಹಾಗೂ ಟಿಬೇಟಿಯನ್ ಸರ್ಕಾರದ ಪರವಾಗಿ ಇಲ್ಲಿನ ಸೆಟ್ಲೆಮೆಂಟ್ ಅಧಿಕಾರಿ ಲಾಕ್ಪ ಸೆರಿಂಗ್ ಅವರು ಸಂದೇಶವನ್ನು ಓದಿ ಹೇಳಿದರು.  ಗೆಲಕ್ ಜುಗ್ನೆ ಮಾತನಾಡಿದರು.

ಸಮಾರಂಭದಲ್ಲಿ ಟಿಬೇಟಿಯನ್ ಸರ್ಕಾರದ ಧಾರ್ಮಿಕ ಮತ್ತು ಸಂಸ್ಕೃತಿ ಮಾಜಿ ಸಜಿವ ಸೆರಿಂಗ್ ಪುನ್ಸೋಕ್, ಎಲ್ಲಾ ಮಾನೆಸ್ಟ್ರಿಗಳ ಪ್ರತಿನಿಧಿಗಳು, ಟಿಬೇಟಿಯನ್ ಸಹಕಾರ ಸಂಘಗಳ ಆಧ್ಯಕ್ಷರು ಮತ್ತು ಕಾರ್ಯದರ್ಶಿಗಳು, ಟಿಬೇಟ್ ಸ್ವಾತಂತ್ರ್ಯ ಹೋರಾಟಗಾರರ ಅಧ್ಯಕ್ಷರು,  ಪಿರಿಯಾಪಟ್ಟಣ ರೋಟರಿ ಅಧ್ಯಕ್ಷ ಎ.ಜೆ. ಬಸವೇಗೌಡ ಉಪಾಧ್ಯಾಯರುಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. (ಆರ್.ಬಿ.ಆರ್,ಎಸ್.ಎಚ್)

Leave a Reply

comments

Related Articles

error: