
ಪ್ರಮುಖ ಸುದ್ದಿ
ಕಡಿದಾದ ಹಾದಿಯಲ್ಲಿ ಸಾಗಿದ ಜಿಲ್ಲಾಧಿಕಾರಿ ಶ್ರೀವಿದ್ಯಾ : ಅತಿವೃಷ್ಟಿ ಹಾನಿ ಪ್ರದೇಶಗಳ ಪರಿಶೀಲನೆ : ಮೂಲಭೂತ ಸೌಲಭ್ಯ ಕಲ್ಪಿಸುವ ಭರವಸೆ
ರಾಜ್ಯ(ಮಡಿಕೇರಿ) ಸೆ.3 : – ಹಟ್ಟಿಹೊಳೆ – ಮುಕ್ಕೋಡ್ಲು ಮಾರ್ಗದಲ್ಲಿ ಭೂಕುಸಿತದೊಂದಿಗೆ ಅಪಾರ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿ, ಪಾಸ್ತಿ ಹಾನಿಗೀಡಾಗಿರುವ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಖುದ್ದು ಭೇಟಿ ನೀಡಿ ಪರಿಶೀಲಿಸಿದರು.
ಕಡಿದಾದ ಹಾದಿಯಲ್ಲೇ ಸಾಗಿದ ಅವರು ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಮೂಲಭೂತ ಸೌಲಭ್ಯಗಳನ್ನು ಶೀಘ್ರ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು. ಕಂದಾಯ ಹಾಗೂ ಇತರ ಇಲಾಖಾ ಅಧಿಕಾರಿಗಳೊಂದಿಗೆ ತೆರಳಿದ ಅವರು ಹದಗೆಟ್ಟ ರಸ್ತೆ, ವಿದ್ಯುತ್ ಸಮಸ್ಯೆ, ಸಾರ್ವಜನಿಕ ಆಸ್ತಿ ಪಾಸ್ತಿಗಳ ನಷ್ಟದ ಬಗ್ಗೆ ಮಾಹಿತಿ ಕಲೆ ಹಾಕಿದರು. ಸಂಕಷ್ಟಕ್ಕೊಳಗಾಗಿರುವ ಗ್ರಾಮೀಣ ಜನತೆಯ ಅಹವಾಲುಗಳನ್ನು ಆಲಿಸಿದರು.
ಬಳಿಕ ಗಾಳಿಬೀಡು ಹಾಗೂ ಕೆ. ನಿಡುಗಣೆ ಗ್ರಾ. ಪಂ. ವ್ಯಾಪ್ತಿಯ ದೇವಸ್ತೂರು ಮತ್ತಿತರ ಕಡೆಗಳಿಗೂ ಖುದ್ದು ತೆರಳಿ ಪರಿಸ್ಥಿತಿ ವೀಕ್ಷಿಸಿದ ಜಿಲ್ಲಾಧಿಕಾರಿ, ತ್ವರಿತಗತಿಯಲ್ಲಿ ಜನತೆಗೆ ರಸ್ತೆ ಹಾಗೂ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಜಿ.ಪಂ.ಮಾಜಿ ಅಧ್ಯಕ್ಷ ರವಿಕುಶಾಲಪ್ಪ, ಮತ್ತಿತರರು ಹಾಜರಿದ್ದು, ಪ್ರಾಕೃತಿಕ ವಿಕೋಪದಿಂದ ಎದುರಾದ ಮನಕಲಕುವ ಘಟನೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದರು.
ದುರ್ಗಮ ಪ್ರದೇಶವನ್ನು ಕೂಡ ಬಿಡದೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ನೊಂದ ಗ್ರಾಮಸ್ಥರಲ್ಲಿ ಹೊಸ ಸ್ಫೂರ್ತಿಯನ್ನು ತುಂಬಿದರು. (ಕೆಸಿಐ,ಎಸ್.ಎಚ್)