ಪ್ರಮುಖ ಸುದ್ದಿ

ಅತಿವೃಷ್ಟಿ ಹಾನಿ ಸಂತ್ರಸ್ತರ ನೋವಿಗೆ ಸಕಾಲದಲ್ಲಿ ಸ್ಪಂದನೆ : ಸಚಿವೆ ಜಯಮಾಲ ಭರವಸೆ : ಸಂತ್ರಸ್ತರಿಗೆ ಸಾಂತ್ವನ

ರಾಜ್ಯ(ಮಡಿಕೇರಿ) ಸೆ.3 :- ಅತಿವೃಷ್ಟಿಯಿಂದಾಗಿ ಮನೆ ಕಳೆದುಕೊಂಡ ಕುಟುಂಬಗಳಿಗೆ ಪ್ರಥಮ ಆದ್ಯತೆಯಲ್ಲಿ ಪುನರ್ವಸತಿ ಕಲ್ಪಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಡಾ.ಜಯಮಾಲ ತಿಳಿಸಿದ್ದಾರೆ.

ನಗರದ ಹೋಟೆಲ್ ವ್ಯಾಲಿವ್ಯೂನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಅತಿವೃಷ್ಟಿಯಿಂದಾಗಿ ಮಹಿಳೆಯರು, ಮಕ್ಕಳು ಮನೆ ಮಠ ಕಳೆದುಕೊಂಡಿದ್ದು, ಇಂತಹ ಕುಟುಂಬಗಳಿಗೆ ಆಶ್ರಯ ಕಲ್ಪಿಸುವ ನಿಟ್ಟಿನಲ್ಲಿ ಆದ್ಯತೆ ಮೇಲೆ ಕ್ರಮವಹಿಸಲಾಗುವುದು ಮತ್ತು ಸಂತ್ರಸ್ತರ ನೋವಿಗೆ ಸರಕಾರ ಸಕಾಲದಲ್ಲಿ ಸ್ಪಂದಿಸಲಿದೆ ಎಂದು ಹೇಳಿದರು.   ಅತಿವೃಷ್ಟಿಯಿಂದಾಗಿ ನಿರಾಶ್ರಿತರಾಗಿರುವ ಕುಟುಂಬಗಳಿಗೆ ಉತ್ತಮ ಬದುಕು ಕಟ್ಟಿಕೊಳ್ಳಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹೇಳಿದರು.

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ 30 ಅಂಗನವಾಡಿ ಕೇಂದ್ರಗಳು ಸಂಪೂರ್ಣ, 144 ಭಾಗಶಃ ಹಾನಿಯಾಗಿವೆ. 75 ಅಂಗನವಾಡಿಗಳನ್ನು ದುರಸ್ತಿ ಮಾಡಬೇಕಿದೆ. ಪ್ರತೀ ಅಂಗನವಾಡಿಯಲ್ಲಿ ಮಾತೃಪೂರ್ಣ ಯೋಜನೆ ಸಮರ್ಪಕವಾಗಿ ತಲುಪಿಸಬೇಕಿದೆ. ಅಂಗನವಾಡಿಗಳಿಗೆ ಅಡುಗೆ ಅನಿಲ ವ್ಯವಸ್ಥೆ, ಕಡ್ಡಾಯವಾಗಿ ಶೌಚಾಲಯ ಇರಬೇಕು ಎಂದು ಅವರು ಹೇಳಿದರು.  ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ 69 ವಿಕಲಚೇತನರು, 188 ಹಿರಿಯ ನಾಗರಿಕರು ಮನೆ ಕಳೆದುಕೊಂಡಿದ್ದಾರೆ. 19 ಜನರ ಬದುಕು ಅತಂತ್ರವಾಗಿದೆ. ಇವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು  ಎಂದು ಜಯಮಾಲ ತಿಳಿಸಿದರು.

ಹೆಣ್ಣು ಮಕ್ಕಳಿಗೆ ಉದ್ಯೋಗ ಕಲ್ಪಿಸಿ ಆರ್ಥಿಕ ಸಬಲೀಕರಣಕ್ಕೆ ಅವಕಾಶ ಮಾಡಬೇಕಿದೆ. ಈ ಸಂಬಂಧ ಇಲಾಖೆಯಿಂದ ಅನುದಾನ ಒದಗಿಸಲಾಗುವುದು. ಗರ್ಭಿಣಿಯರು, ಬಾಣಂತಿಯರು, ಮಕ್ಕಳಿಗೆ ಅಪೌಷ್ಠಿಕತೆ ಉಂಟಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಮಾಹಿತಿ ನೀಡಿದರು.

ಮಡಿಕೇರಿ ದಸರಾ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಮಡಿಕೇರಿ ದಸರಾಗೆ ಹಿಂದಿನಂತೆ ಅನುದಾನ ಬಿಡುಗಡೆಯಾಗಲಿದೆ ಎಂದು ಸಚಿವರು ತಿಳಿಸಿದರು.

ಸುದ್ದಿಗೋಷ್ಠಿಗೂ ಮೊದಲು ಅಧಿಕಾರಿಗಳಿಂದ ಮಾಹಿತಿ ಪಡೆದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ, ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಜಿ.ಪಂ.ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಇತರರು ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: