ದೇಶ

ಸಿಂಧಿಯಾಗೆ ಕೊಲೆ ಬೆದರಿಕೆ ಹಾಕಿದ ಬಿಜೆಪಿ ಶಾಸಕಿ ಮಗ: ದೂರು ದಾಖಲು

ಭೋಪಾಲ್​,ಸೆ.4-ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಬಿಜೆಪಿ ಶಾಸಕಿಯ ಮಗ ಕೊಲೆ ಬೆದರಿಕೆ ಹಾಕಿದ್ದಾನೆ.

ಹಟಾ ಕ್ಷೇತ್ರದ ಶಾಸಕಿ ಉಮಾದೇವಿ ಮಗ ಪ್ರಿನ್ಸ್ ದೀಪ್ ಖಟೀಕ್ ಫೇಸ್ ಬುಕ್ ನಲ್ಲಿ ಪೋಸ್ಟ್​ ಒಂದನ್ನು ಮಾಡುತ್ತಾ ಸಿಂಧಿಯಾರನ್ನು ಗುಂಡಿಟ್ಟು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.

ಕಾಂಗ್ರೆಸ್ ನಾಯಕರು ತಕ್ಷಣ ಪೊಲೀಸ್ ಠಾಣೆಗೆ ತೆರಳಿ ಪ್ರಿನ್ಸ್ ದೀಪ್ ವಿರುದ್ಧ ದೂರು ನೀಡಿದ್ದಾರೆ. ಈ ಸಂದರ್ಭದಲ್ಲಿ ಎಫ್​ಐಆರ್​ ದಾಖಲಿಸಿ, ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಸೆಕ್ಷನ್​ 294, 504, 506ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯ ಹುಡುಕಾಟ ಆರಂಭಿಸಿದ್ದಾರೆ.

ಸೆ.5 ರಂದು ದಾಮೋಹ್ ರಸ್ತೆಯಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ರೋಡ್ ಶೋ ಕೈಗೊಳ್ಳಲಿದ್ದಾರೆ. ಇದಾದ ಬಳಿಕ ಅವರು ಹಟಾದಲ್ಲಿ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಹೀಗಿರುವಾಗ ಸಮಾರಂಭದ ಎರಡು ದಿನಗಳ ಮೊದಲು ಈ ಪೋಸ್ಟ್ ಭಾರೀ ಆತಂಕ ಸೃಷ್ಟಿಸಿದೆ.

ಈ ವಿಚಾರವಾಗಿ ಶಾಸಕಿ ಉಮಾದೇವಿ ಖಟೀಕ್​ ಮಾಧ್ಯಮಗಳಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಆದರೆ ಅವರ ರೆಕಾರ್ಡಿಂಗ್​ ಒಂದು ವೈರಲ್​ ಆಗಿದ್ದು, ಅದರಲ್ಲಿ ಅವರು ತಮ್ಮ ಮಗನನ್ನು ಬಂಧಿಸಿ ಜೈಲಿಗೆ ಹಾಕುವಂತೆ ಹೇಳಿಕೆ ನೀಡಿದ್ದಾರೆ. ಹೀಗಿರುವಾಗ ಕಾಂಗ್ರೆಸ್​ ನಾಯಕರು ವಿರೋಧ ವ್ಯಕ್ತಪಡಿಸಿ ಪೊಲೀಸ್​ ಠಾಣೆಗೆ ತೆರಳಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: